ಶೂಟರ್‌ಗಳ ಆಯ್ಕೆ ಪ್ರಕ್ರಿಯೆ ನಿಯಮಗಳಿಗೆ ವಿರುದ್ಧವಾಗಿದೆ: ಹೀನಾ ಸಿಧು

7
ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆಯ ವಿರುದ್ಧ ಶೂಟರ್‌ ಹೀನಾ ಸಿಧು ಅಸಮಾಧಾನ

ಶೂಟರ್‌ಗಳ ಆಯ್ಕೆ ಪ್ರಕ್ರಿಯೆ ನಿಯಮಗಳಿಗೆ ವಿರುದ್ಧವಾಗಿದೆ: ಹೀನಾ ಸಿಧು

Published:
Updated:

ನವದೆಹಲಿ: ‘ಏಷ್ಯನ್‌ ಗೇಮ್ಸ್‌ನ ಮಿಶ್ರ ಏರ್‌ ಪಿಸ್ತೂಲ್‌ ಸ್ಪರ್ಧೆಗಾಗಿ ಶೂಟರ್‌ಗಳ ಆಯ್ಕೆಯು ಸೂಕ್ತವಾದ ರೀತಿಯಲ್ಲಿ ನಡೆದಿಲ್ಲ. ಆಯ್ಕೆಗೆ ಪರಿಗಣಿಸಬೇಕಿದ್ದ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ’ ಎಂದು ಭಾರತದ ಶೂಟರ್‌ ಹೀನಾ ಸಿಧು ಅವರು ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆ (ಎನ್‌ಆರ್‌ಎಐ) ವಿರುದ್ಧ ಆರೋಪ ಮಾಡಿದ್ದಾರೆ. 

ಆಗಸ್ಟ್‌ನಲ್ಲಿ ಆರಂಭವಾಗುವ ಏಷ್ಯನ್ ಗೇಮ್ಸ್‌ನ 10 ಮೀಟರ್ಸ್‌ ಏರ್ ಪಿಸ್ತೂಲ್‌ ಸ್ಪರ್ಧೆಯ ಮಿಶ್ರ ಹಾಗೂ 25 ಮೀಟರ್ಸ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯ ತಂಡ ವಿಭಾಗದಿಂದ ಹೀನಾ ಅವರನ್ನು ಕೈಬಿಡಲಾಗಿದೆ. ಆದರೆ, ಹೀನಾ ಅವರು ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ. 

‘ಶೂಟರ್‌ಗಳ ಆಯ್ಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ರೈಫಲ್‌ ಸಂಸ್ಥೆಯು ನಿಯಮಾವಳಿಗಳನ್ನು ಪ್ರಕಟಿಸಿದೆ. ಅದರ ಮಾನದಂಡದ ಪ್ರಕಾರ ರ‍್ಯಾಂಕಿಂಗ್‌ನಲ್ಲಿ ನಾನು ಅಗ್ರಸ್ಥಾನದಲ್ಲಿದ್ದೇನೆ. ಹೀಗಾಗಿ 10 ಮೀಟರ್ಸ್‌ ಏರ್‌ ಪಿಸ್ತೂಲ್‌ನ ಮಿಶ್ರ ವಿಭಾಗದ ಸ್ಪರ್ಧೆಗೆ ನಾನು ಆಯ್ಕೆಯಾಗಬೇಕಿತ್ತು. ಆದರೆ, ನಿಯಮಾವಳಿಗಳನ್ನು ಧಿಕ್ಕರಿಸಿ ಮನು ಭಾಕರ್‌ ಅವರನ್ನು ಏಷ್ಯನ್‌ ಗೇಮ್ಸ್‌ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆ ಮಾಡಲಾಗಿದೆ’ ಎಂದು ಹೀನಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

‘ನಿಯಮಗಳ ಅನುಗುಣವಾಗಿ ಅಥ್ಲೀಟ್‌ಗಳು ಸಿದ್ಧತೆ ಮಾಡಿಕೊಂಡಿರುತ್ತಾರೆ. ಆದರೆ, ತನ್ನದೇ ನೀತಿಗಳನ್ನು ಸಂಸ್ಥೆಯು ಪಾಲಿಸದಿರುವುದು ಸರಿಯಲ್ಲ. ವ್ಯಕ್ತಿನಿಷ್ಠವಾಗಿ ಆಯ್ಕೆ ಪ್ರಕ್ರಿಯೆ ನಡೆಸುವುದರಿಂದ ಅರ್ಹತೆ ಇರುವ ಅಥ್ಲೀಟ್‌ಗಳಿಗೆ ಮೋಸ ಮಾಡಿದಂತಾಗುತ್ತದೆ’ ಎಂದು ಕಿಡಿ ಕಾರಿದ್ದಾರೆ.

ಹೀನಾ ಅವರು ಇತ್ತೀಚೆಗೆ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದ 25 ಮೀಟರ್ಸ್‌ ಏರ್‌ ಪಿಸ್ತೂಲ್‌ ಹಾಗೂ 10 ಮಿಟರ್ಸ್‌ ಏರ್‌ ಪಿಸ್ತೂಲ್‌ ಸ್ಪರ್ಧೆಗಳಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಯ ಪದಕಗಳನ್ನು ಜಯಿಸಿದ್ದರು.  

ಮೂರು ಗಂಟೆ ಕಾದ ಹೀನಾ: ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆಯ ಅಧ್ಯಕ್ಷ ರಣೀಂದರ್‌ ಸಿಂಗ್‌ ಅವರನ್ನು ಭೇಟಿಯಾಗಿ, ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಇಲ್ಲಿಗೆ ಬಂದಿದ್ದ ಹೀನಾ ಅವರಿಗೆ ನಿರಾಸೆಯಾಗಿದೆ.

ಶನಿವಾರ ರಣೀಂದರ್ ಅವರ ಭೇಟಿಗಾಗಿ ಹೀನಾ ಅವರು ಮೂರು ಗಂಟೆಗಳ ಕಾಲ ಕಾದಿದ್ದಾರೆ. 

‘ಅಧ್ಯಕ್ಷರನ್ನು ಭೇಟಿ ಮಾಡಲು ಅವರ ಮನೆಗೆ ಬಂದಿದ್ದೆ. ಭಾನುವಾರ ನನ್ನ ಭೇಟಿಗೆ ಅವಕಾಶ ಕಲ್ಪಿಸಿದ್ದಾರೆ. ಅವರು ನ್ಯಾಯ ಒದಗಿಸಲಿದ್ದಾರೆಂಬ ವಿಶ್ವಾಸವಿದೆ’ ಎಂದು ಹೀನಾ ಹೇಳಿದ್ದಾರೆ.  

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !