ಬುಧವಾರ, ಆಗಸ್ಟ್ 10, 2022
23 °C

ಅಥ್ಲೆಟಿಕ್ ಟ್ರ್ಯಾಕ್‌ನ ಧ್ರುವ ನಕ್ಷತ್ರ; ವಿವಾದಗಳ ‘ರೆಬೆಲ್‌ ಸ್ಟಾರ್’

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅದು, 2016ರ ರಿಯೊ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಯುತ್ತಿದ್ದ ಕಾಲ. ಕೂಟದಲ್ಲಿ ಪಾಲ್ಗೊಳ್ಳುವ ಭಾರತ ತಂಡದ ರಾಯಭಾರಿಯಾಗಿ ನಟ ಸಲ್ಮಾನ್ ಖಾನ್ ಅವರನ್ನು ನೇಮಕ ಮಾಡಲಾಯಿತು. ಇದನ್ನು ಹೆಸರಾಂತ ಅಥ್ಲೀಟ್ ಟೀಕಿಸಿದರು. ಕ್ರೀಡೆಗೆ, ವಿಶೇಷವಾಗಿ ಒಲಿಂಪಿಕ್ಸ್‌ಗೆ ಬಾಲಿವುಡ್‌ ಸ್ಟಾರ್‌ಗಳು ರಾಯಭಾರಿಯಾಗುವ ಅಗತ್ಯವಿಲ್ಲ ಎಂದರು. ಅಂದು ಆ ರೀತಿ ಹೇಳಿದವರು ‘ಫ್ಲೈಯಿಂಗ್ ಸಿಖ್‌’ ಮಿಲ್ಖಾ ಸಿಂಗ್‌. 

ಅವರ ಹೇಳಿಕೆ ‌ವಿವಾದದ ಸ್ವರೂಪ ಪಡೆಯಿತು. ಸರಣಿ ಟ್ವೀಟ್‌ಗಳ ಮೂಲಕ ಸಲ್ಮಾನ್‌ ಅವರ ತಂದೆ, ಲೇಖಕ ಸಲೀಂ ಖಾನ್ ಉತ್ತರವನ್ನೂ ನೀಡಿದರು. ‘ಮಿಲ್ಖಾ ಜಿ, ನನ್ನ ಮಗ ನಟ ಮಾತ್ರವಲ್ಲ ಎ ದರ್ಜೆಯ ಈಜುಪಟು, ಸೈಕ್ಲಿಸ್ಟ್ ಮತ್ತು ವೇಟ್‌ಲಿಫ್ಟರ್ ಕೂಡ ಆಗಿದ್ದಾರೆ ಎಂಬುದನ್ನು ನಿಮಗೆ ನೆನಪಿಸುತ್ತಿದ್ದೇನೆ’ ಎಂದು ಚುಚ್ಚಿದ್ದರು.

ಅಂದು ಸಲ್ಮಾನ್ ಖಾನ್ ಬದಲಿಗೆ ರಾಯಭಾರಿಯಾಗಲು ಅರ್ಹರಾದವರ ಹೆಸರನ್ನೂ ಮಿಲ್ಖಾ ಸಿಂಗ್ ಹೇಳಿದ್ದರು. ಆ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಪಿ.ಟಿ.ಉಷಾ, ಅಜಿತ್‌ಪಾಲ್ ಸಿಂಗ್, ರಾಜ್ಯವರ್ಧನ್ ಸಿಂಗ್ ರಾಥೋಡ್‌ ಮುಂತಾದವರು ಇದ್ದರು. ಆದರೆ ಅದೇ ಸಚಿನ್ ತೆಂಡೂಲ್ಕರ್ ಅವರನ್ನು ‘ಭಾರತ ರತ್ನ’ಕ್ಕೆ ಆಯ್ಕೆ ಮಾಡಿದಾಗ ಮಿಲ್ಖಾ ಸಿಂಗ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಕ್ರೀಡಾಪಟುವೊಬ್ಬರಿಗೆ ಭಾರತ ರತ್ನ ನೀಡಲು ಮುಂದಾಗಿರುವುದು ಒಳ್ಳೆಯ ಸೂಚನೆ. ಆದರೆ ಅದು ಮೊದಲು ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರಿಗೆ ಸಿಗಬೇಕಾಗಿತ್ತು’ ಎಂದಿದ್ದರು.

ಅಥ್ಲೆಟಿಕ್ಸ್‌ನಲ್ಲಿ ಭಾರತದ ಬಾವುಟವನ್ನು ವಿಶ್ವದೆತ್ತರಕ್ಕೆ ಹಾರಿಸಿದ ಮಿಲ್ಖಾ ಸಿಂಗ್ ಕಲ್ಲು–ಮುಳ್ಳಿನ ಹಾದಿಯಲ್ಲಿ ನಡೆದು ಬಂದವರು; ಕಷ್ಟ–ನಷ್ಟದ ಬೆಂಕಿಯಲ್ಲಿ ಬೆಂದವರು. ಆದರೆ ಹೆಸರು ಗಳಿಸಿದ ನಂತರ ಅವರ ಹಿಂದೆ ವಿವಾದದ ಅಲೆಗಳೂ ಸುಳಿದಾಡಿದವು.

1998ರಲ್ಲೂ ಅವರು ವಿವಾದದ ಸುಳಿಯಲ್ಲಿ ಸಿಲುಕಿದ್ದರು. ರೋಮ್ ಒಲಿಂಪಿಕ್ಸ್‌ನ 400 ಮೀಟರ್ಸ್ ಓಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ಮಿಲ್ಖಾ ಸಿಂಗ್ ರಾಷ್ಟ್ರೀಯ ದಾಖಲೆ ಬರೆದಿದ್ದರು. 38 ವರ್ಷಗಳ ನಂತರ ಈ ದಾಖಲೆಯನ್ನು ಪರಂಜೀತ್ ಸಿಂಗ್ ಮುರಿದಿದ್ದರು. ಇದನ್ನು ಒಪ್ಪಿಕೊಳ್ಳಲು ಮಿಲ್ಖಾ ಸಿಂಗ್ ಸಿದ್ಧರಿರಲಿಲ್ಲ. ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು ಕೂಡ. ಮಿಲ್ಖಾ ಸಿಂಗ್ ಅವರು 45.73 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರೆ ಪರಂಜೀತ್ 45.70 ಸೆಕೆಂಡುಗಳಲ್ಲಿ ಓಟ ಮುಗಿಸಿದ್ದರು.

ವಾಸ್ತವದಲ್ಲಿ ರೋಮ್ ಒಲಿಂಪಿಕ್ಸ್‌ನಲ್ಲಿ ಮಿಲ್ಖಾ ಸಿಂಗ್ ಅವರ ಸಾಧನೆ 45.6 ಸೆಕೆಂಡು ಆಗಿತ್ತು. ಆದರೆ ಆಗ ‘ಹ್ಯಾಂಡ್‌ ಟೈಮರ್‌’ ಬಳಸಿ ಕಾಲ ದಾಖಲಿಸಲಾಗಿತ್ತು. ‘ಇಲೆಕ್ಟ್ರಾನಿಕ್ ಟೈಮರ್‌’ಗಳ ಬಳಕೆ ಜಾರಿಗೆ ಬಂದ ನಂತರ ಹಿಂದಿನ ಹ್ಯಾಂಡ್‌ ಟೈಮರ್‌ಗಳಲ್ಲಿ ದಾಖಲಾದ ಕಾಲವನ್ನು ಬದಲಿಸಲು ಸೂಚಿಸಲಾಗಿತ್ತು. ಹೀಗಾಗಿ ಮಿಲ್ಖಾ ಅವರ ದಾಖಲೆಗಳಲ್ಲಿ ಕಾಲ ಬದಲಾಗಿತ್ತು. ‘ಸ್ಪರ್ಧೆಯೊಂದರಲ್ಲಿ ದಾಖಲಾದ ಕಾಲವೇ ಅಂತಿಮ. ಕೆಲವು ವರ್ಷಗಳ ನಂತರ ಅದನ್ನು ಬದಲಿಸುವುದು ಸರಿಯಲ್ಲ. ಆದ್ದರಿಂದ ನನ್ನದೇ ಶ್ರೇಷ್ಠ ಸಾಧನೆ‘ ಎಂದು ಮಿಲ್ಖಾ ಸಿಂಗ್ ಹೇಳಿದ್ದರು.

1960ರಲ್ಲಿ ಪಾಕಿಸ್ತಾನವು ಭಾರತದ ಅಥ್ಲೀಟ್‌ಗಳನ್ನು ದ್ವಿಪಕ್ಷೀಯ ಸ್ಪರ್ಧೆಗಾಗಿ ಆಹ್ವಾನಿಸಿತ್ತು. ಭಾರತ ತಂಡಕ್ಕೆ ಆಯ್ಕೆಯಾಗಿದ್ದರೂ ಮಿಲ್ಖಾ ಸಿಂಗ್ ಅಲ್ಲಿಗೆ ಹೋಗಲು ಒಪ್ಪಲಿಲ್ಲ. ವಿಭಜನೆ ಸಂದರ್ಭದಲ್ಲಿ ಅನುಭವಿಸಿದ ಕಹಿ ಘಟನೆಗಳ ನೆನಪುಗಳೇ ಅವರ ಆ ನಿರ್ಧಾರಕ್ಕೆ ಕಾರಣವಾಗಿದ್ದವು. ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಒತ್ತಾಯಿಸಿದ ನಂತರ ಅವರು ಹೋಗಲು ಒಪ್ಪಿದರು. ಅಲ್ಲಿ ಚಾಂಪಿಯನ್‌ ಅಬ್ದುಲ್ ಖಾಲಿಕ್ ಅವರನ್ನು 200 ಮೀಟರ್ಸ್ ಓಟದಲ್ಲಿ ಹಿಂದಿಕ್ಕಿ ‘ಫ್ಲೈಯಿಂಗ್ ಸಿಖ್’ ಬಿರುದು ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು