ಮಿಣಜಗಿ; ಕೋಲು ಜಿಗಿತದಲ್ಲಿ ಮುಂಚೂಣಿ..!

7
ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲೂ ಮಿಂಚಿದ ಗ್ರಾಮೀಣ ಕ್ರೀಡಾ ಪ್ರತಿಭೆಗಳು

ಮಿಣಜಗಿ; ಕೋಲು ಜಿಗಿತದಲ್ಲಿ ಮುಂಚೂಣಿ..!

Published:
Updated:
Deccan Herald

ತಾಳಿಕೋಟೆ: ಸರ್ಕಾರಿ ಸೇವೆಗೆ ದಾಖಲಾದ ಬಳಿಕ 13 ವರ್ಷ ರಾಜ್ಯ ಮಟ್ಟ, ಐದು ಬಾರಿ ರಾಷ್ಟ್ರಮಟ್ಟದ ಕೋಲು ಜಿಗಿತ (ಫೋಲ್‌ ವಾಲ್ಟ್‌) ಕ್ರೀಡಾಕೂಟಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆಯಾಗುವಂತೆ ತರಬೇತು ನೀಡಿದ ಹಿರಿಮೆ ತಾಲ್ಲೂಕಿನ ಮಿಣಜಗಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾವೂತ ಪೂಜಾರಿ ಅವರದ್ದು.

ಫೋಲ್‌ ವಾಲ್ಟ್‌ ಪಟ್ಟಣದವರ ಸೌಲಭ್ಯ ಹೊಂದಿದ ಶಾಲೆಯ ಕ್ರೀಡೆ. ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಸಂರಕ್ಷಣೆಯ ಸಾಧನೆಗಳಿಲ್ಲದೆ ಇದನ್ನು ಕರಗತ ಮಾಡಿಕೊಳ್ಳುವುದು ಸುಲಭ ಸಾಧ್ಯದ ಕೆಲಸವಲ್ಲ. ಇಂತಹ ಸಂದಿಗ್ಧತೆಯಲ್ಲೂ ಛಲಬಿಡದ ತ್ರಿವಿಕ್ರಮನಂತೆ ಲಭ್ಯ ಸಾಮಗ್ರಿಗಳಿಂದಲೇ ಮಕ್ಕಳನ್ನು ತರಬೇತುಗೊಳಿಸಿ ರಾಜ್ಯ, ರಾಷ್ಟ್ರಮಟ್ಟ ಪ್ರತಿನಿಧಿಸುವ ಸಾಧನೆ ತೋರಿದವರು ರಾವೂತ ಪೂಜಾರಿ.

ಸ್ವತಃ ಕ್ರೀಡಾಪಟುವಾಗಿರುವ ರಾವೂತ ವೈಯಕ್ತಿಕವಾಗಿ ಗುಡ್ಡಗಾಡು ಓಟದಲ್ಲಿ 2000, 2001ರಲ್ಲಿ ಎರಡು ಬಾರಿ ಕರ್ನಾಟಕ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದಲ್ಲದೆ, ಒಮ್ಮೆ ತಂಡದ ಕ್ಯಾಪ್ಟನ್ ಕೂಡ ಆಗಿದ್ದರು.

2006ರಲ್ಲಿ ಬಳ್ಳಾರಿ ಜಿಲ್ಲೆಯ ಎಮ್ಮಿಗನೂರಿನಲ್ಲಿ ವೃತ್ತಿ ಜೀವನ ಆರಂಭಿಸಿದ ರಾವೂತ. ತಮ್ಮ ಪ್ರೀತಿಯ ಕ್ರೀಡೆ ಕೋಲು ಜಿಗಿತದಲ್ಲಿ ಮಕ್ಕಳಿಗೆ ತರಬೇತಿ ನೀಡಿ ರಾಜ್ಯ, ರಾಷ್ಟ್ರಮಟ್ಟಕ್ಕೆ ಕರೆದೊಯ್ದಿದ್ದಾರೆ.

ಎತ್ತರದ ಕೋಲು ಹಿಡಿದು ಇಡೀ ದೇಹವನ್ನು ತನ್ನ ತೋಳುಗಳ ಬಲದಿಂದಲೇ ಮೇಲೆತ್ತಿ ಮೂರು ಮೀಟರ್ ಎತ್ತರದಲ್ಲಿ ತೇಲಿ ನೆಲಕ್ಕೆ ಅಪಾಯವಾಗದಂತೆ ಇಳಿಯುವ ಕಲೆ ಸುಲಭ ಸಾಧ್ಯವಲ್ಲ. ಅದಕ್ಕೆ ದೈಹಿಕ ಕ್ಷಮತೆಯೊಂದಿಗೆ ನಿರಂತರ ಪರಿಶ್ರಮ, ಏಕಾಗ್ರತೆ, ಆತ್ಮವಿಶ್ವಾಸದವರಿಗೆ ಮಾತ್ರ ಇದು ಸಾಧ್ಯ.

ರಾವೂತ ಪರಿಶ್ರಮದ ಫಲವಾಗಿ 2006ರಲ್ಲಿ ಎಂ.ಮಹೇಶ, 2007, 2008ರಲ್ಲಿ ಜಿ.ರಾಮು, 2009ರಲ್ಲಿ ಪಿ.ಪೀರಾವಲಿ, 2010ರಲ್ಲಿ ಎಂ.ಕುಬೇರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದವರು.

2010ರಲ್ಲಿ ಮಿಣಜಗಿ ಸರ್ಕಾರಿ ಪ್ರೌಢಶಾಲೆಗೆ ವರ್ಗವಾಗಿ ಬಂದ ಮೇಲೆ, ಕೋಲು ಜಿಗಿತಕ್ಕೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದರು. ಅದರ ಫಲವಾಗಿ 2010ರಲ್ಲಿ ರಾಜು ಚವ್ಹಾಣ, 2011, 2012ರಲ್ಲಿ ದಾವಲಮಲೀಕ ನಾವದಗಿ, 2012ರಲ್ಲಿ ಸಂತೋಷ ಚಿಕ್ಕನಳ್ಳಿ, ಶಶಿಕಲಾ ಕುಂಟೋಜಿ, ರೇಷ್ಮಾ ನದಾಫ್‌.

2013ರಲ್ಲಿ ಮಹಾಂತೇಶ ಮಾದರ, 2015ರಲ್ಲಿ ಕೃಷ್ಣಾ ಪವಾರ, 2017ರಲ್ಲಿ ಶಿವಪ್ಪ ಮಾದರ, 2018ರಲ್ಲಿ ಶಿವಪ್ಪ ಮಾದರ, ಸಾಕ್ಷಿ ಹಿರೇಮಠ, ಸೀತಾ ತುಂಬಗಿ ಆಯ್ಕೆಯಾದರು. 2016ರಲ್ಲಿ ಸವಿತಾ ಮಾದರ 400 ಮೀ. ಓಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟು.

ಸತತವಾಗಿ ವಿದ್ಯಾರ್ಥಿಗಳನ್ನು ಸಾಧನೆಯ ಮೆಟ್ಟಿಲೇರಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕ ರಾವೂತ ಅವರಿಗೆ ಅಗತ್ಯ ಸೌಲಭ್ಯ ದೊರೆತರೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯುವಂತೆ ತರಬೇತುಗೊಳಿಸಲಿದ್ದಾರೆ ಎಂಬ ಮಾತು ಎಲ್ಲೆಡೆ ಪ್ರಚಲಿತದಲ್ಲಿದೆ.

ಈ ಕ್ರೀಡೆಯಲ್ಲಿ ಬಳಸುವ ಸಾಮಾನ್ಯ ಫೈಬರ್‌ ಕೋಲಿನ ದರವೇ ₹ 1 ಲಕ್ಷವಿದೆ. ಜಿಗಿದಾಗ ಪೆಟ್ಟು ಬೀಳದಂತೆ ನೆಲಕ್ಕೆ ಹಾಸುವ ದಪ್ಪನೆಯ ಹಾಸಿಗೆ ಬೆಲೆ ₹ 2 ಲಕ್ಷ. ಗ್ರಾಮೀಣ ಪ್ರದೇಶದಲ್ಲಿ ಇವೆರೆಡನ್ನು ಹೊಂದಿಸುವುದು ಬಲು ಕಷ್ಟ ಎನ್ನುತ್ತಾರೆ ರಾವೂತ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !