ವೇಟ್‌ಲಿಫ್ಟರ್‌ ಮೀರಾಬಾಯಿ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸುವುದು ಅನುಮಾನ

7

ವೇಟ್‌ಲಿಫ್ಟರ್‌ ಮೀರಾಬಾಯಿ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸುವುದು ಅನುಮಾನ

Published:
Updated:
Deccan Herald

ನವದೆಹಲಿ: ಸೊಂಟದ ನೋವಿನಿಂದ ಬಳಲುತ್ತಿರುವ ಭಾರತದ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರು ಮುಂಬರುವ ಏಷ್ಯನ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದು ಅನುಮಾನವಾಗಿದೆ.

ಇದೇ ಮೇ ತಿಂಗಳಲ್ಲಿ ಸೊಂಟದ ನೋವಿಗೆ ಒಳಗಾದ ಮೀರಾಬಾಯಿ, ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ. ಜೊತೆಗೆ, ಈವರೆಗೂ ಅವರು ತರಬೇತಿಯನ್ನೂ ಆರಂಭಿಸಿಲ್ಲ. 

ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ವೇಟ್‌ಲಿಫ್ಟಿಂಗ್‌ ತಂಡದ ಮುಖ್ಯ ಕೋಚ್‌ ವಿಜಯ್‌ ಶರ್ಮಾ, ‘ಮೀರಾಬಾಯಿ ಸಂಪೂರ್ಣ ಫಿಟ್‌ ಆಗಿಲ್ಲ. ಅವರ ದೇಹಸ್ಥಿತಿಯ ಬಗ್ಗೆ ಭಾರತ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ಗೆ (ಐಡಬ್ಲ್ಯುಎಫ್‌) ವರದಿ ಕಳಿಸಿದ್ದೇನೆ. ಇದೇ ವರ್ಷದ ಕೊನೆಯಲ್ಲಿ ಮುಂದಿನ ಒಲಿಂಪಿಕ್‌ ಕ್ರೀಡಾಕೂಟದ ಅರ್ಹತಾ ಟೂರ್ನಿ ನಡೆಯಲಿದೆ. ಇದಕ್ಕಾಗಿ ಮೀರಾಬಾಯಿ ಸಿದ್ಧರಾಗಬೇಕು. ಹೀಗಾಗಿ ಸಂಪೂರ್ಣ ಫಿಟ್‌ನೆಸ್‌ ಇಲ್ಲದೇ ಏಷ್ಯನ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದು ಉತ್ತಮ ನಿರ್ಧಾರವಲ್ಲ’ ಎಂದಿದ್ದಾರೆ. 

‘ಸ್ವಲ್ಪ ದಿನಗಳ ಹಿಂದೆ ನೋವು ಕಡಿಮೆಯಾಗಿತ್ತು. ಆದರೆ, ಭಾನುವಾರ ನೋವು ಉಲ್ಬಣಗೊಂಡಿದೆ. ಇಂತಹ ಸಮಯದಲ್ಲಿ ಭಾರ ಎತ್ತುವುದು ಅಪಾಯಕ್ಕೆ ಎಡೆ ಮಾಡಿಕೊಟ್ಟಂತೆ’ ಎಂದು ಅವರು ತಿಳಿಸಿದ್ದಾರೆ. 

‘ಈ ನೋವಿನ ನಡುವೆಯೂ ಮೀರಾಬಾಯಿ ಅವರು ಸೋಮವಾರದಿಂದ ಮತ್ತೆ ಅಭ್ಯಾಸ ಆರಂಭಿಸಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

‘ಏಷ್ಯನ್‌ ಕ್ರೀಡಾಕೂಟದಲ್ಲಿ ಅವರ ಪಾಲ್ಗೊಳ್ಳುವಿಕೆಯ ಬಗ್ಗೆ ಐಡಬ್ಲ್ಯುಎಫ್‌ ಗುರುವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಅದರ ಕಾರ್ಯದರ್ಶಿ ಸಹದೇವ್‌ ಯಾದವ್‌ ಹೇಳಿದ್ದಾರೆ. 

ಮೀರಾಬಾಯಿ, ಇತ್ತೀಚೆಗೆ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !