ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖೇಲ್‌ರತ್ನ’ ಮೀರಾ ‘ಅರ್ಜುನ’ಕ್ಕೆ ನಾಮನಿರ್ದೇಶನ

Last Updated 27 ಮೇ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರ ‘ಖೇಲ್‌ರತ್ನ’ವನ್ನು ಈಗಾಗಲೇ ಪಡೆದಿದ್ದರೂ ಮೀರಾಬಾಯಿ ಚಾನು ಅವರನ್ನು ಭಾರತೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ (ಐಡಬ್ಲ್ಯುಎಲ್‌ಎಫ್‌) ಅರ್ಜುನ ಪ್ರಶಸ್ತಿಗೆ ಬುಧವಾರ ನಾಮನಿರ್ದೇಶನ ಮಾಡಿದೆ. ಇದೊಂದು ಅನಿರೀಕ್ಷಿತ ನಡೆಯಾಗಿದೆ.

ಮೀರಾಬಾಯಿ ಅವರೊಂದಿಗೆ ರಾಗಾಲ ವೆಂಕಟ ರಾಹುಲ್‌ ಮತ್ತು ಪೂನಮ್‌ ಯಾದವ್‌ ಅವರನ್ನೂ ‘ಅರ್ಜುನ’ಕ್ಕೆ ಶಿಫಾರಸು ಮಾಡಲಾಗಿದೆ.

2018ರಲ್ಲಿ ಮೀರಾಬಾಯಿ ಮತ್ತು ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಖೇಲ್‌ರತ್ನ ಪುರಸ್ಕಾರ ನೀಡಲಾಗಿತ್ತು. ಅದೇ ವರ್ಷವೇ ಪದ್ಮಶ್ರೀ ಪ್ರಶಸ್ತಿಗೂ ಮೀರಾ ಭಾಜನರಾಗಿದ್ದರು. ತಮ್ಮನ್ನು ‘ಅರ್ಜುನ’ಕ್ಕೆ ನಾಮನಿರ್ದೇಶನ ಮಾಡಿದ್ದನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ 2017ರ ವೇಟ್‌ಲಿಫ್ಟಿಂಗ್‌ ವಿಶ್ವಚಾಂಪಿಯನ್ ‌(ಅಮೆರಿಕದಲ್ಲಿ ನಡೆದಿತ್ತು) ಮೀರಾ, ‘ಖೇಲ್‌ರತ್ನವು ಶ್ರೇಷ್ಠ ಪುರಸ್ಕಾರ ಎಂದು ಬಲ್ಲೆ. ಆದರೆ ಆರಂಭದಲ್ಲಿ ನಾನು ಬಯಸಿದ್ದ ಅರ್ಜುನ ಪ್ರಶಸ್ತಿಯಿಂದ ವಂಚಿತಳಾಗಿದ್ದೆ. ಕೆಲವೊಂದು ಸಮಯದಲ್ಲಿ ಎಲ್ಲ ಪ್ರಶಸ್ತಿಗಳನ್ನೂ ಪಡೆಯಬೇಕೆನಿಸುತ್ತದೆ. 2018ರಲ್ಲಿ ಅರ್ಜುನ ಹಾಗೂ ಖೇಲ್‌ರತ್ನ ಎರಡಕ್ಕೂ ಮನವಿ ಸಲ್ಲಿಸಿದ್ದೆ’ ಎಂದಿದ್ದಾರೆ.

ಈಗಾಗಲೇ ಖೇಲ್‌ರತ್ನ ಪುರಸ್ಕಾರ ಪಡೆದವರನ್ನು ‘ಅರ್ಜುನ’ಕ್ಕೆ ಶಿಫಾರಸು ಮಾಡಬಹುದೇ ಎಂಬ ಪ್ರಶ್ನೆಗೆ, ಐಡಬ್ಲ್ಯುಎಲ್‌ಎಫ್‌ ಪ್ರಧಾನ ಕಾರ್ಯದರ್ಶಿ ಸಹದೇವ್‌ ಯಾದವ್‌ ಅವರು ‘ಇದು ಸಾಧ್ಯ’ ಎಂದು ಉತ್ತರಿಸಿದರು.

ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ರಾಹುಲ್‌ ಅವರು 2018ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದರು. ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಇದೇ ಕೂಟದಲ್ಲಿ ಪೂನಮ್‌ ಯಾದವ್‌ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT