ಚೀನಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಮೊಮೊಟ, ಯೂಫಿಗೆ ಚಾಂಪಿಯನ್ ಪಟ್ಟ

7
ಚೋ ಟಿನ್ ಚೆನ್‌, ನೊಜೊಮಿ ಒಕುಹರಾ ರನ್ನರ್ ಅಪ್‌

ಚೀನಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಮೊಮೊಟ, ಯೂಫಿಗೆ ಚಾಂಪಿಯನ್ ಪಟ್ಟ

Published:
Updated:
Deccan Herald

ಶಾಂಘೈ: ಜಪಾನ್‌ನ ಕೆಂಟೊ ಮೊಮೊಟ ಮತ್ತು ಚೀನಾದ ಚೆನ್ ಯೂಫಿ ಅವರು ಚೀನಾ ಓಪನ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊಮೊಟ, ತೈವಾನ್‌ನ ಚೋ ಟೀನ್‌ ಚೆನ್‌ ಅವರನ್ನು 21–13, 11–21, 21–16ರಿಂದ ಮಣಿಸಿದರೆ, ಚೆನ್‌ ಯೂಫಿ ಜಪಾನ್‌ನ ನೊಜೊಮಿ ಒಕುಹರಾ ವಿರುದ್ಧ 21–10, 21–16ರಿಂದ ಗೆದ್ದರು.

ವಿಶ್ವ ಚಾಂಪಿಯನ್ ಕೆಂಟೊ ಮೊಮೊಟ ಅವರಿಗೆ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರನಿಂದ ತೀವ್ರ ಪೈಪೋಟಿ ಎದುರಾಗಿತ್ತು. ಮೊದಲ ಗೇಮ್‌ನಲ್ಲಿ ಸೋತ ಚೋ ಟೀನ್‌ ಚೆನ್‌ ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದರು. ಹೀಗಾಗಿ ನಿರ್ಣಾಯಕ ಮೂರನೇ ಗೇಮ್‌ ಕುತೂಹಲದಿಂದ ಕೂಡಿತ್ತು. ಛಲ ಬಿಡದೆ ಕಾದಾಡಿ ಗೆದ್ದ ಮೊಮೊಟ ಅಂಗಣದಲ್ಲೇ ಅಂಗಾತ ಮಲಗಿ ಕೈಗಳನ್ನು ಮೇಲೆತ್ತಿ ಸಂಭ್ರಮಿಸಿದರು.

ಪ್ರಶಸ್ತಿಗಳ ಮಳೆ: ಮೊಮೊಟ ಪಾಲಿಗೆ ಸಂಭ್ರಮದ ವರ್ಷವಾಗಿದೆ ಇದು. ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಏಷ್ಯಾ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಮುಡಿಗೇರಿಸಿಕೊಂಡ ಅವರು ವಿಶ್ವ ಟೂರ್‌ನ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮುಂದಿನ ವಾರ ನಡೆಯಲಿರುವ ಹಾಂಕಾಂಗ್ ಓಪನ್‌ ಟೂರ್ನಿಯಲ್ಲೂ ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿದ್ದಾರೆ.

ಅಕ್ಟೋಬರ್‌ನಲ್ಲಿ ನಡೆದಿದ್ದ ಡೆನ್ಮಾರ್ಕ್ ಓಪನ್‌ನ ಫೈನಲ್‌ನಲ್ಲೂ ಮೊಮೊಟ ಚೋ ಎದುರು ಗೆದ್ದಿದ್ದರು. ಜೂಜು ಕೇಂದ್ರದಲ್ಲಿ ಕಾಣಿಸಿಕೊಂಡ ಕಾರಣ 2016ರ ರಿಯೊ ಒಲಿಂಪಿಕ್ಸ್‌ಗೆ ತೆರಳಿದ ಜಪಾನ್ ತಂಡದಿಂದ ಅವರನ್ನು ಕೈಬಿಡಲಾಗಿತ್ತು.

ಭಾನುವಾರ ನಡೆದ ಮಹಿಳೆಯರ ಫೈನಲ್‌ ಪಂದ್ಯದಲ್ಲಿ ಏಳನೇ ಶ್ರೇಯಾಂಕಿತೆ ನೊಜೊಮಿ ಒಕುಹರಾ ನಿರಾಸೆ ಅನುಭವಿಸಿದರು. ಸ್ಥಳೀಯ ಆಟಗಾರ್ತಿಯ ಎದುರು ಅವರು ನಿರುತ್ತರರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !