ಮಂಗಳವಾರ, ಜೂನ್ 15, 2021
23 °C

ಕ್ರೀಡಾಂಗಣ ಬಳಕೆ ನೀತಿಗೆ ವಿವಿಧೆಡೆಯಿಂದ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಾರಿಗೆ ತರಲು ಉದ್ದೇಶಿಸಿರುವ ಕ್ರೀಡಾಂಗಣ ಬಳಕೆ ನೀತಿಗೆ ವಿವಿಧ ಕಡೆಯಿಂದ ಆಕ್ಷೇಪ ವ್ಯಕ್ತವಾಗಿದೆ.

ಫ್ರಾಂಚೈಸ್ ಆಧಾರಿತ ಲೀಗ್‌ಗಳನ್ನು ಆಯೋಜಿಸುವವರು ಟಿಕೆಟ್ ಮಾರಾಟದಿಂದ ಬರುವ ಹಣದ ಶೇಕಡಾ 25ರಷ್ಟು ಮೊತ್ತವನ್ನು ಇಲಾಖೆಗೆ ನೀಡಬೇಕು ಎಂಬ ಷರತ್ತು ಉದ್ದೇಶಿತ ನೀತಿಯಲ್ಲಿದೆ. ಇದಕ್ಕೆ ಇಂಡಿಯನ್ ಸೂಪರ್ ಲಿಗ್ ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಬುಧವಾರ ವಿರೋಧ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಕ್ರೀಡಾಕೂಟ ಸಂಘಟನಾ ಸಂಸ್ಥೆಗಳೂ ಆಕ್ಷೇಪವನ್ನು ದಾಖಲಿಸಿದ್ದಾರೆ.  

‘ಹೊಸ ನೀತಿಯ ವಿರುದ್ಧದ ನಮ್ಮ ಅಸಮಾಧಾನವನ್ನು ಲಿಖಿತ ರೂಪದಲ್ಲಿ ಇಲಾಖೆಗೆ ಸಲ್ಲಿಸಲಿದ್ದೇವೆ. ಈ ನೀತಿಯು ಕ್ರೀಡೆಗೂ ಕ್ರೀಡಾ ಅಭಿವೃದ್ಧಿಯಲ್ಲಿ ಪಾಲುದಾರರಾಗಿರುವ ಸಂಘಟಕರಿಗೂ ಮಾರಕವಾಗಿದೆ. ವಿಶ್ವ ಟೆನ್‌–ಕೆಯಿಂದಾಗಿ ರಾಜ್ಯಕ್ಕೆ ಪರೋಕ್ಷವಾಗಿ ಅನುಕೂಲ ಇದೆ ಎಂಬುದನ್ನು ಮರೆಯುವಂತಿಲ್ಲ’ ಎಂದು ಬೆಂಗಳೂರಿನಲ್ಲಿ ಪ್ರತಿವರ್ಷ ಟಿಸಿಎಸ್‌ ವಿಶ್ವ ಟೆನ್‌–ಕೆ ಓಟವನ್ನು ಆಯೋಜಿಸುವ  ಪ್ರೋಕ್ಯಾಮ್ ಇಂಟರ್‌ನ್ಯಾಷನಲ್ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಪ್ರಮುಖ ಕ್ರೀಡಾಕೂಟಗಳಿಗೆ ರಾಜ್ಯ ಸರ್ಕಾರದ ಅಧೀನದಲ್ಲಿರುವ ಕ್ರೀಡಾಂಗಣಗಳನ್ನು ಉಚಿತವಾಗಿ ನೀಡಬೇಕು ಎಂದು ಕೇಂದ್ರ ಕ್ರೀಡಾ ಇಲಾಖೆಯೇ ಕಳೆದ ವರ್ಷ ಸೂಚಿಸಿದೆ. ಹೀಗಿರುವಾಗ ಶುಲ್ಕ ವಸೂಲಿ ಮಾಡುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು.

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಬೆಂಗಳೂರು ರ‍್ಯಾಪ್ಟರ್ಸ್ ತಂಡದ ಸಹ ಮಾಲೀಕರಲ್ಲಿ ಒಬ್ಬರು ಕೂಡ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ‘ಟಿಕೆಟ್ ಮಾರಾಟದ ಶೇಕಡಾ 25ರಷ್ಟು ಮೊತ್ತವನ್ನು ಇಲಾಖೆಗೆ ನೀಡಬೇಕೆಂಬ ಷರತ್ತು ಹೊರೆಯಾಗಲಿದೆ. ಕಳೆದ ಐದು ವರ್ಷಗಳಿಂದ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ ನಾವು ನಷ್ಟ ಅನುಭವಿಸಿದ್ದೇವೆ. ಈಗ ಇಲಾಖೆಗೂ ಭಾರಿ ಮೊತ್ತ ನೀಡಬೇಕೆಂದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು