ಶುಕ್ರವಾರ, ನವೆಂಬರ್ 22, 2019
20 °C

ಮೈಸೂರು ದಸರಾ | ಸಾಹಸ ಪ್ರದರ್ಶಿಸಲು ಸಜ್ಜಾಗುತ್ತಿದೆ ಅಶ್ವದಳ

Published:
Updated:

ಮುಂಜಾನೆಯ ಮಂಜು... ಚಾಮುಂಡಿಬೆಟ್ಟದ ತಪ್ಪಲಿನಿಂದ ಬೀಸುವ ತಂಗಾಳಿ. ಇದಕ್ಕೆ ಹಿನ್ನೆಲೆ ಸಂಗೀತ ಎಂಬಂತೆ ನವಿಲುಗಳ ಕೂಗು. ಇವೆಲ್ಲದರ ಮಧ್ಯೆ ಖುರಪುಟದ ಸದ್ದು, ಅಭ್ಯಾಸ ಕಣದಲ್ಲಿ ಮೇಲೇಳುವ ದೂಳಿನ ಕಣ, ಪೊಲೀಸ್‌ ಬ್ಯಾಂಡ್‌ನ ನಿನಾದ, ಮಣ್ಣಿನ ವಾಸನೆ...

ಇದು ಅಶ್ವಾರೋಹಿ ಪಡೆಯ ಸಿಬ್ಬಂದಿ ಕುದುರೆಗಳೊಂದಿಗೆ ತಾಲೀಮು ನಡೆಸುವ, ನಗರದ ಹಾರ್ಸ್‌ ಪಾರ್ಕ್‌ನಲ್ಲಿ ಮುಂಜಾನೆ ಕಂಡು ಬರುವ ದೃಶ್ಯ. ವಿಶ್ವವಿಖ್ಯಾತ ದಸರಾದ ಸಿದ್ಧತೆಗೆ ಗಜಪಡೆಯ ಆಗಮನ ಮುನ್ನುಡಿ ಬರೆಯುತ್ತಿದ್ದಂತೆ ಎಲ್ಲ ಚಟುವಟಿಕೆಗಳೂ ಗರಿಗೆದರುತ್ತವೆ. ದಸರಾ ಮೆರವಣಿಗೆಯಲ್ಲಿ ಆನೆಗಳಷ್ಟೇ ಮಹತ್ವಪೂರ್ಣ ಸ್ಥಾನವನ್ನು ಗಳಿಸಿರುವ ಅಶ್ವಪಡೆಯನ್ನು ಈ ಕಾರ್ಯಕ್ಕೆ ಸಿದ್ಧಗೊಳಿಸುವ ರೀತಿಯೂ ಬಲು ರೋಮಾಂಚನಕಾರಿ. ಕುತೂಹಲಪೂರ್ಣವೂ ಆಗಿರುವ ಈ ಸಿದ್ಧತೆ, ಸವಾರಿ ಮಾಡಲು ಕುದುರೆಗಳನ್ನು ಸಜ್ಜುಗೊಳಿಸುವ ಕ್ಷಣಗಳೂ ಮನಸೆಳೆಯುತ್ತವೆ.

ದಸರೆಯ ಸೊಬಗನ್ನು ಇನ್ನಷ್ಟು ಗಮನಸೆಳೆಯುವಂತೆ ಮಾಡಲು ಅಶ್ವಾರೋಹಿ ದಳದ ಸಿಬ್ಬಂದಿಯೂ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಜತೆ ಜತೆಗೆ ಅಶ್ವಗಳನ್ನೂ ಈ ಕಾರ್ಯಕ್ಕೆ ಸಮರ್ಥಗೊಳಿಸುವ ಸಿದ್ಧತೆಯನ್ನೂ ನಡೆಸುತ್ತಿದ್ದಾರೆ.

ಅಂಬಾರಿ ಮಹೋತ್ಸವಕ್ಕೆ ಚಾಲನೆ, ಪಂಜಿನ ಕವಾಯತು ಆರಂಭಕ್ಕೆ ಒಪ್ಪಿಗೆ ಪಡೆಯುವುದು, ಮೈನವಿರೇಳಿಸುವ ಕುದುರೆಗಳ ಓಟ, ಟೆಂಟ್ ಪೆಗ್ಗಿಂಗ್‌, ಕುಶಾಲು ತೋಪು ಸಿಡಿಸಲು ಸಂದೇಶ ನೀಡುವುದು... ಹೀಗೆ ಹಲವು ಹಂತಗಳಲ್ಲಿ ಅಶ್ವಾರೋಹಿದಳ ವಿಶಿಷ್ಟ ಪಾತ್ರ ನಿರ್ವಹಿಸಲಿದೆ.

ನಿತ್ಯ ತರಬೇತಿ: ‘ದಸರಾ ಆರಂಭವಾಗುವ 15 ದಿನಗಳಿಗೆ ಮುನ್ನ ನಾವು ತರಬೇತಿ, ಅಭ್ಯಾಸ ಆರಂಭಿಸುತ್ತೇವೆ. ಸೂರ್ಯೋದಯಕ್ಕೂ ಮುನ್ನ ಚಟುವಟಿಕೆ ಪ್ರಾರಂಭವಾಗುತ್ತದೆ. ಬೆಳಿಗ್ಗೆ 5 ಗಂಟೆಗೆ ಕುದುರೆಗಳನ್ನು ಸ್ವಚ್ಛಗೊಳಿಸಿ ಅವುಗಳಿಗೆ ‘ಶ್ಯಾಡಲ್‌’ ಬಿಗಿದು ಮೈದಾನಕ್ಕೆ ಕರೆತರುತ್ತೇವೆ. 6 ಗಂಟೆಗೆ ಸರಿಯಾಗಿ ಅಭ್ಯಾಸ ನಡೆಯುತ್ತದೆ. ಅಶ್ವದಳದ ಹೊಸ ಸಿಬ್ಬಂದಿಗೆ, ಕುದುರೆಗಳಿಗೆ ಸುಮಾರು ಒಂದೂವರೆ ಗಂಟೆ ತರಬೇತಿ ನೀಡುತ್ತೇವೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ನಡೆಯವ ಅಭ್ಯಾಸ, ತರಬೇತಿ ಅವಧಿಯಲ್ಲಿ ಪರೇಡ್ ಜತೆಗೆ ಟೆಂಟ್‌ ಪೆಗ್ಗಿಂಗ್‌ ಅಭ್ಯಾಸವೂ ನಡೆಯುತ್ತದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಮೇಯರ್‌ ಅವರಿಗೆ ಕುದುರೆ ಸವಾರಿಯ ತರಬೇತಿಯನ್ನೂ ನೀಡಲಾಗುತ್ತದೆ’ ಎಂದು ಅಶ್ವಾರೋಹಿ ದಳದ ಎಸಿಪಿ ವಿ.ಶೈಲೇಂದ್ರ ‘ಮೆಟ್ರೊ’ಗೆ ಮಾಹಿತಿ ನೀಡಿದರು.

ಅಶ್ವದಳದಲ್ಲಿ 39 ಕುದುರೆಗಳಿದ್ದು, ಎಲ್ಲ ಕುದುರೆಗಳೂ ಪರೇಡ್‌ನಲ್ಲಿ ಹೆಜ್ಜೆ ಹಾಕಲಿವೆ. ಈ ಪೈಕಿ 15 ಕುದುರೆಗಳಿಗೆ ಟೆಂಟ್‌ಪೆಗ್ಗಿಂಗ್‌ ತರಬೇತಿ ನೀಡಲಾಗುತ್ತಿದೆ. ಮೈದಾನದಲ್ಲಿ ಅಭ್ಯಾಸ ನಡೆದ ಬಳಿಕ ಕುದುರೆಗಳಿಗೆ ಮರಳಿನಲ್ಲಿ ಸ್ನಾನ, ನೀರ ಮಜ್ಜನ, ಮಸಾಜ್‌ ಮಾಡುತ್ತಾರೆ. ಬಳಿಕ ಆಹಾರ ನೀಡಿ ಅರಮನೆಯ ಬಳಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಆನೆಗಳ ಜತೆಗೆ ಒಡನಾಟ ಮಾಡಿಸಲಾಗುತ್ತಿದೆ. ಪ್ರತಿದಿನ ಒಳಾಂಗಣದಲ್ಲಿ ತರಬೇತಿ ನೀಡುತ್ತಿರುವುದರಿಂದ ಕುದುರೆಗಳಿಗೆ ಜನದಟ್ಟಣೆಯ ಪರಿಚಯ ಇರುವುದಿಲ್ಲ. ಅಲ್ಲದೆ, ದಸರಾ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಸೇರುವುದರಿಂದ ಅಂದು ಅವುಗಳು ಬೆದರ ಬಾರದು ಎಂದು ಜನರ ಮಧ್ಯೆಯೂ ಕರೆದುಕೊಂಡು ಹೋಗಿ ತರಬೇತಿ ನೀಡಲಾಗುತ್ತಿದೆ. ಜತೆಗೆ, ವಿದ್ಯುದ್ದೀಪಗಳಿಗೆ ಅವುಗಳನ್ನು ಒಗ್ಗಿಸಿಕೊಳ್ಳುವುದು, ಫಿರಂಗಿಯ ಶಬ್ದಕ್ಕೆ ಹೆದರದಂತೆ ಪಟಾಕಿ ಸಿಡಿಸಿ ಅಭ್ಯಾಸವನ್ನೂ ಮಾಡಿಸಲಾಗುತ್ತಿದೆ.

ದಸರೆಗೆ ತರಬೇತಿ ಪಡೆಯುವ ಅವಧಿಯಲ್ಲಿ ಪ್ರತಿ ದಿನ ಸುಮಾರು 3–4 ಗಂಟೆ ಅವುಗಳು ತರಬೇತಿ ಪಡೆಯಬೇಕಿರುವುದರಿಂದ ಪುಷ್ಟಿದಾಯಕ ಪೂರಕ ಆಹಾರವನ್ನೂ ನೀಡಬೇ ಕಾಗುತ್ತದೆ. ಔಷಧಿ, ಕಾಳು, ಓಟ್ಸ್‌, ಬೂಸಾ, ಹುರುಳಿಕಾಳು, ಹಸಿರು ಮೇವನ್ನು ಒದಗಿಸುತ್ತಾರೆ. ಕುದುರೆಗಳ ಆರೋಗ್ಯ ವೃದ್ಧಿಸುವ ಮೂಲಕ ಅವುಗಳ ಸಾಮರ್ಥ್ಯ ಹೆಚ್ಚಿಸಿ ದಸರಾ ಮೆರವಣಿಗೆ ಹಾಗೂ ಪಂಜಿನ ಕವಾಯತಿನ ದಿನ ನಡೆಯುವ ವಿವಿಧ ಚಟುವಟಿಕೆಗಳಲ್ಲಿ ಅಶ್ವಾರೋಹಿದಳದ ಹಿರಿಮೆಯನ್ನು ಹೆಚ್ಚಿಸುವ ಕೆಲಸವನ್ನೂ ಸಿಬ್ಬಂದಿ ಮಾಡುತ್ತಿದ್ದಾರೆ. ಈ ಬಾರಿ ಪರೇಡ್‌ ಕಮಾಂಡರ್‌ ಆಗಿ ಎಸಿಪಿ ಶೈಲೇಂದ್ರ ಅವರು ಕಾರ್ಯನಿರ್ವಹಿಸುವರು.

ಕುದುರೆಗಳು ಬಲು ಸೂಕ್ಷ್ಮ. ಅವುಗಳನ್ನು ಪ್ರೀತಿಯಿಂದ ಸಾಕಿ, ಸಲುಹಿ ತರಬೇತಿ ನೀಡಿದರೆ ಸವಾರನ ಮಾತನ್ನು ಉಲ್ಲಂಘಿಸುವುದೇ ಇಲ್ಲ. ಇಂತಹ ಕೆಲಸವನ್ನು ಕಾಳಜಿಯಿಂದ ಸಿಬ್ಬಂದಿ ಮಾಡುತ್ತಿದ್ದಾರೆ. ಮೊದಲು ಮಹಾರಾಜರ ವೈಯಕ್ತಿಕ ಅಂಗರಕ್ಷಕ ಪಡೆ (ಎಚ್‌ಎಚ್‌ಎಂಬಿಜಿ)ಯಾಗಿದ್ದ ಅಶ್ವದಳ ಈಗ ಕರ್ನಾಟಕ ಸಶಸ್ತ್ರ ಮೀಸಲು ಪೊಲೀಸ್‌ (ಕೆಎಆರ್‌ಪಿ) ಎಂದು ಕಾರ್ಯನಿರ್ವಹಿಸುತ್ತಿದೆ. ಮೈಸೂರಿಗೆ ಅಥವಾ ರಾಜ್ಯದ ಯಾವುದೇ ಪ್ರಮುಖ ಕೇಂದ್ರಕ್ಕೆ ಗಣ್ಯರು, ಅತಿಗಣ್ಯರು ಬಂದಾಗ ಸ್ವಾಗತ ಕೋರಲು ಅಶ್ವದಳ ಸಿದ್ಧವಾಗಿರುತ್ತದೆ.

ಪ್ರತಿಕ್ರಿಯಿಸಿ (+)