ಮೈಸೂರು: ಸೊಗಸಿನ ಆಟವಾಡಿದ ಭಾರತದ ಮುಕುಂದ್ ಶಶಿಕುಮಾರ್-ವಿಷ್ಣುವರ್ಧನ್ ಅವರು ಐಟಿಎಫ್-ಮೈಸೂರು ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.
ಚಾಮರಾಜಪುರಂನ ಮೈಸೂರು ಟೆನಿಸ್ ಕ್ಲಬ್ (ಎಂಟಿಸಿ)ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಅನುಭವಿ ಜೋಡಿ ಮುಕುಂದ್-ವಿಷ್ಣು ಅವರು ಭಾರತದವರೇ ಆದ ಋತ್ವಿಕ್ ಚೌಧರಿ- ನಿಕಿ ಪೂಣಚ್ಚ ಜೋಡಿಯನ್ನು 6-3, 6-4ರಿಂದ ಮಣಿಸಿದರು.
ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದ ಮುಕುಂದ್ ಅವರಿಗೆ ವಿಷ್ಣು ಡಬಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲಲು ಜೊತೆಯಾದರು. ಮೊದಲ ಸೆಟ್ ಸುಲಭವಾಗಿದ್ದ ಗೆದ್ದ ಜೋಡಿಗೆ ಎರಡನೇ ಸೆಟ್‌ನಲ್ಲಿ ಋತ್ವಿಕ್-ನಿಕಿ ಉತ್ತಮ ಪೈಪೋಟಿ ನೀಡಿದರು. 1 ಗಂಟೆ 10 ನಿಮಿಷಗಳಲ್ಲಿ ಪಂದ್ಯ ಗೆದ್ದು ಟ್ರೋಫಿಗೆ ಮುತ್ತಿಕ್ಕಿದರು.
‘11 ವರ್ಷದ ಹಿಂದೆ ಇಲ್ಲಿಯೇ ಜ್ಯೂನಿಯರ್ ಐಟಿಎಫ್ ಗೆದ್ದಿದ್ದೆ. ಡಬಲ್ಸ್‌ನಲ್ಲಿ ಮತ್ತೆ ಪ್ರಶಸ್ತಿ ಗೆದ್ದಿರುವುದು ಸಂತಸ ತಂದಿದೆ. ಮುಕುಂದ್ ಅವರ ತಾಯಿ ಪಂದ್ಯ ನೋಡಲು ಬಂದಿದ್ದರು. ಜೀವದ ಗೆಳೆಯನ ಪೋಷಕರ ಎದುರು ಪ್ರಶಸ್ತಿ ಪಡೆದದ್ದು, ಜೀವನದ ಅತ್ಯಮೂಲ್ಯ ಕ್ಷಣ’ ಎಂದು ವಿಷ್ಣುವರ್ಧನ್ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.
ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್ ನಲ್ಲಿ ಮುಕುಂದ್- ವಿಷ್ಣು ಜೋಡಿ 6-4, 7-5ರಲ್ಲಿ ಆಸ್ಟ್ರೇಲಿಯಾದ ಎಲಿಸ್ ಬ್ಲೇಕ್- ವ್ಲಾಡಿಸ್ಲಾವ್ ಆರ್ಲವ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು.
ಪ್ರಜ್ವಲ್‌ಗೆ ನಿರಾಸೆ: ತವರಿನಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದ ಎಸ್.ಡಿ.ಪ್ರಜ್ವಲ್ ದೇವ್, ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ 5-7, 6-7ರಲ್ಲಿ ಬ್ರಿಟನ್‌ನ ಜಾರ್ಜ್ ಲ್ಹೊಫಗೆನ್ ವಿರುದ್ಧ ಮಣಿದರು.
ಜಿದ್ದಾಜಿದ್ದಿನಿಂದ ಕೂಡಿದ ಮೊದಲ ಸೆಟ್‌ನಲ್ಲಿ ಜಾರ್ಜ್ ಲ್ಹೊಫಗೆನ್ ಪಾರಮ್ಯ ಮೆರೆದರು. ಪ್ರಜ್ವಲ್ ಅವರ ಬಲವಾದ ಸರ್ವ್‌ಗಳನ್ನು ಅವರು ದಿಟ್ಟವಾಗಿ ಎದುರಿಸಿದರು. 2ನೇ ಸೆಟ್‌ನಲ್ಲಿ ಪ್ರಜ್ವಲ್ ತಿರುಗೇಟು ನೀಡಿದರೂ ಬ್ರಿಟನ್‌ನ ಅನುಭವಿ ಜಾರ್ಜ್ 2 ಗಂಟೆಗಳಲ್ಲಿ ಪಂದ್ಯ ಗೆದ್ದು, ಫೈನಲ್ ಪ್ರವೇಶಿಸಿದರು.
ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಲಿಸ್ ಬ್ಲೇಕ್ ವಿರುದ್ಧ ಜಾರ್ಜ್ ಲ್ಹೊಫಗೆನ್ ಸೆಣಸಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.