ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌: ಹಂಟರ್ಸ್‌ಗೆ ಮುಂಬೈ ರಾಕೆಟ್ಸ್ ಶಾಕ್‌

ಸಿಂಧು ಬಳಗಕ್ಕೆ ನಿರಾಸೆ
Last Updated 12 ಜನವರಿ 2019, 19:58 IST
ಅಕ್ಷರ ಗಾತ್ರ

ಬೆಂಗಳೂರು: ಎದುರಾಳಿಗಳ ಸಮರ್ಥ ಆಟಕ್ಕೆ ಬೆರಗಾದ ಹಾಲಿ ಚಾಂಪಿಯನ್‌ ಹೈದರಾಬಾದ್ ಹಂಟರ್ಸ್‌ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ (ಪಿಬಿಎಲ್‌) ಅಭಿಯಾನ ಮುಗಿಸಿತು. ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಎರಡನೇ ಸೆಮಿಫೈನಲ್‌ ಹಣಾಹಣಿಯಲ್ಲಿ ಮುಂಬೈ ರಾಕೆಟ್ಸ್‌ 4–2ರಲ್ಲಿ ಗೆದ್ದು ಮೂರನೇ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು. ನಿರ್ಣಾಯಕ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಹ್ಯೂನ್ ಲೀ ಎದುರು 15–13, 15–6ರಲ್ಲಿ ಗೆದ್ದ ಆ್ಯಂಡರ್ಸ್ ಆ್ಯಂಟನ್ಸೆನ್ ನಾಲ್ಕನೇ ಪಂದ್ಯಕ್ಕೇ ಹಣಾಹಣಿ ಮುಗಿಯುವಂತೆ ಮಾಡಿದರು.

ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ರಾಕೆಟ್ಸ್‌ನ ಕಿಮ್‌ ಜಿ ಜಂಗ್‌ ಮತ್ತು ಯಾಂಗ್‌ ಡಿ ಲೀ ಜೋಡಿ ಮೊದಲ ಪಂದ್ಯದಲ್ಲೇ ಹಂಟರ್ಸ್‌ ಆಟಗಾರರನ್ನು ದಂಗುಬಡಿಸಿದರು. ಪುರುಷರ ಡಬಲ್ಸ್ ಪಂದ್ಯದಲ್ಲಿ ಬೋದಿನ್ ಇಸಾರ ಮತ್ತು ಕಿಮ್ ಸಾ ರಂಗ್ ಅವರ ಪ್ರಬಲ ಪ್ರತಿರೋಧವನ್ನು ಮೀರಿ ನಿಂತ ರಾಕೆಟ್ಸ್ ಆಟಗಾರರು 15–14, 15–12ರಲ್ಲಿ ಗೆದ್ದು ಶುಭಾರಂಭ ಮಾಡಿದರು.

ಸುದೀರ್ಘ ರ‍್ಯಾಲಿಗಳು ಮತ್ತು ಭರ್ಜರಿ ಸ್ಮ್ಯಾಷ್‌ಗಳು ಪ್ರೇಕ್ಷಕರಿಗೆ ನಿರಂತರ ಮುದ ನೀಡಿದವು. ಬೋದಿನ್ ಅವರ ಬ್ಯಾಕ್‌ ಹ್ಯಾಂಡ್ ರಿಟರ್ನ್‌ಗಳು ಮತ್ತು ಎಡಗೈ ಕ್ರಾಸ್ ಕೋರ್ಟ್‌ ಶಾಟ್‌ಗಳು ರಂಜನೀಯವಾಗಿದ್ದವು. ಆದರೆ ಎದುರಾಳಿ ಜೋಡಿಯ ಹೊಂದಾಣಿಕೆಯ ಆಟಕ್ಕೆ ಇದ್ಯಾವುದೂ ಸಾಟಿಯಾಗಲಿಲ್ಲ. ಮೊದಲ ಗೇಮ್‌ನ ಮೊದಲ ವಿರಾಮದ ವೇಳೆ 8–7ರಲ್ಲಿ ಮುಂದಿದ್ದ ರಾಕೆಟ್ಸ್ ಜೋಡಿಗೆ ನಂತರವೂ ತೀವ್ರ ಪೈಪೋಟಿ ಎದುರಾಯಿತು. ಸ್ಕೋರು 9–9ರಲ್ಲಿ ಸಮ ಅಗಿದ್ದಾಗ ಪ್ರೇಕ್ಷಕರ ಕುತೂಹಲ ಹೆಚ್ಚಾಯಿತು. ಆದರೆ ನಂತರ ರಾಕೆಟ್ಸ್ ಜೋಡಿ ಪಾರಮ್ಯ ಮೆರೆಯಿತು. ಎರಡನೇ ಗೇಮ್‌ನ ವಿರಾಮದ ವೇಳೆ ಕೇವಲ ಐದು ಪಾಯಿಂಟ್ ಬಿಟ್ಟುಕೊಟ್ಟಕಿಮ್‌ ಜಿ ಜಂಗ್‌ ಮತ್ತು ಯಾಂಗ್‌ ಡಿ ಲೀ ದ್ವಿತೀಯಾರ್ಧದಲ್ಲಿ ಏಳು ಪಾಯಿಂಟ್ ಬಿಟ್ಟುಕೊಟ್ಟರು. ಆದರೆ ಗೇಮ್ ಮತ್ತು ಪಂದ್ಯ ಗೆದ್ದು ಚಾಂಪಿಯನ್ ಪಾಳಯದಲ್ಲಿ ನಿರಾಸೆ ಮೂಡುವಂತೆ ಮಾಡಿದರು.

ಸಮೀರ್ ವರ್ಮಾಗೆ ಮಣಿದ ಮಾರ್ಕ್‌:ಮುಂದಿನದು ಮುಂಬೈ ರಾಕೆಟ್ಸ್‌ನ ಟ್ರಂಪ್ ಪಂದ್ಯ ಆಗಿತ್ತು. ತಂಡದ ಪರವಾಗಿ ಕಣಕ್ಕೆ ಇಳಿದವರು ಸಮೀರ್ ವರ್ಮಾ. ಎದುರಾಳಿ ಅಂಗಣದಲ್ಲಿದ್ದವರು ಮಾರ್ಕ್‌ ಕಿಲಿಜೊವ್‌. ವಿಶ್ವದ 12ನೇ ಕ್ರಮಾಂಕದ ಭಾರತದ ಆಟಗಾರನಿಗೆ 35ನೇ ಕ್ರಮಾಂಕದ ನೆದರ್ಲೆಂಡ್ಸ್ ಆಟಗಾರ ಸಾಟಿಯಾಗಲಿಲ್ಲ. ನಿರಾಯಾಸವಾಗಿ ಪಾಯಿಂಟ್‌ಗಳನ್ನು ಹೆಕ್ಕಿದ ಸಮೀರ್‌, ಮೊದಲ ಗೇಮ್‌ನ ವಿರಾಮಕ್ಕೆ ತೆರಳುವಾಗ 8–2ರ ಮುನ್ನಡೆ ಗಳಿಸಿದ್ದರು. ನಂತರ15–8ರಿಂದ ಗೇಮ್ ತಮ್ಮದಾಗಿಸಿಕೊಂಡರು.ಎರಡನೇ ಗೇಮ್‌ನಲ್ಲಿ ಇನ್ನಷ್ಟು ಚುರುಕಿನಿಂದ ಆಡಿದ ಸಮೀರ್‌ 15–7ರಿಂದ ಗೆದ್ದು ತಂಡದ ಮುನ್ನಡೆಯನ್ನು 3–0ಗೆ ಏರಿಸಿದರು.

ಪಿ.ವಿ.ಸಿಂಧುಗೆ ಸುಲಭ ಬಲಿಯಾದ ಶ್ರೇಯಾಂಸಿ: ಹಂಟರ್ಸ್‌ನ ಟ್ರಂಪ್ ಪಂದ್ಯ ಆಡಿದ್ದು ಪಿ.ವಿ.ಸಿಂಧು. ಅವರ ವಿರುದ್ಧ ಕಣಕ್ಕೆ ಇಳಿದದ್ದು ಶ್ರೇಯಾಂಸಿ ಪರ್ದೇಶಿ. ರ‍್ಯಾಂಕಿಂಗ್‌ನಲ್ಲಿ ತಮಗಿಂತಲೂ 200 ಸ್ಥಾನಗಳ ಮೇಲಿರುವ ಸಿಂಧುಗೆ ಯಾವ ಹಂತದಲ್ಲೂ ಪೈಪೋಟಿ ನೀಡಲು ಶ್ರೇಯಾಂಸಿಗೆ ಸಾಧ್ಯವಾಗಲಿಲ್ಲ. ಆಗೊಮ್ಮೆ ಈಗೊಮ್ಮೆ ಸ್ಮ್ಯಾಷ್‌ ಸಿಡಿಸಿದ ಸಿಂಧು ನೆಟ್‌ ಬಳಿ ಷಟಲ್ ಡ್ರಾಪ್ ಮಾಡಿ ಪ್ರಯಾಸವಿಲ್ಲದೆ ಪಾಯಿಂಟ್‌ಗಳನ್ನು ಕಲೆ ಹಾಕಿದರು. ಸ್ವಯಂ ತಪ್ಪುಗಳನ್ನು ಮಾಡಿದ ಶ್ರೇಯಾಂಸಿ 6–15, 5–15ರಿಂದ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT