ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಕ್ವಾರ್ಟರ್‌ಫೈನಲ್‌ಗೆ ನಡಾಲ್‌, ಜ್ವೆರೆವ್‌

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಗ್ಯಾಸ್ಟನ್ ಎದುರು ಸೋತ ವಾವ್ರಿಂಕಾ
Last Updated 3 ಅಕ್ಟೋಬರ್ 2020, 10:51 IST
ಅಕ್ಷರ ಗಾತ್ರ

ಪ್ಯಾರಿಸ್‌: ರೋಜರ್‌ ಫೆಡರರ್‌ ಅವರ 20 ಗ್ರ್ಯಾನ್‌ಸ್ಲಾಮ್‌ ಜಯದ ದಾಖಲೆ ಸಮಗಟ್ಟುವ ಹಾದಿಯಲ್ಲಿರುವ ವಿಶ್ವದ ಎರಡನೇ ಕ್ರಮಾಂಕದ ಆಟಗಾರ ರಫೆಲ್‌ ನಡಾಲ್ ಅವರು ಮತ್ತೊಂದು ವಿಶ್ವಾಸದ ಹೆಜ್ಜೆ ಇಟ್ಟಿದ್ದಾರೆ.ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಕ್ರವಾರ ತಡರಾತ್ರಿ ನಡೆದ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಅವರು 6–1, 6–4, 6–0ರಿಂದ ಇಟಲಿಯ ಸ್ಟೆಫಾನೊ ಟ್ರಾವಾಗ್ಲಿಯಾ ಅವರ ಸವಾಲು ಮೀರಿದರು.

ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ 12 ಬಾರಿ ಚಾಂಪಿಯನ್‌ ಆಗಿರುವ ಸ್ಪೇನ್‌ನ ನಡಾಲ್‌, ವಿಶ್ವ ಕ್ರಮಾಂಕದಲ್ಲಿ 74ನೇ ಸ್ಥಾನದಲ್ಲಿರುವ ಸ್ಟೆಫಾನೊ ಅವರನ್ನು ಕೇವಲ 95 ನಿಮಿಷಗಳಲ್ಲಿ ಸೋಲಿಸಿದರು. ಫ್ರೆಂಚ್‌ ಓಪನ್‌ನಲ್ಲಿ ನಡಾಲ್‌ ಅವರಿಗೆ ಇದು ಒಟ್ಟು 96ನೇ ಜಯ.

‘ಈ ವರ್ಷ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಇದು ನನ್ನ ಶ್ರೇಷ್ಠ ಹಣಾಹಣಿ‘ ಎಂದು ಪಂದ್ಯದ ಬಳಿಕ ನಡಾಲ್‌ ಪ್ರತಿಕ್ರಿಯಿಸಿದರು.

ಮುಂದಿನ ಪಂದ್ಯದಲ್ಲಿ ನಡಾಲ್‌ ಅವರು 213 ರ‍್ಯಾಂಕಿನ ಅಮೆರಿಕ ಆಟಗಾರ ಸೆಬಾಸ್ಟಿಯನ್‌ ಕೊರ್ಡಾ ಅವರನ್ನು ಎದುರಿಸಲಿದ್ದಾರೆ. ಸೆಬಾಸ್ಟಿಯನ್‌ ಅವರು 1998ರ ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಹಾಗೂ 1992ರಲ್ಲಿ ಫ್ರೆಂಚ್‌ ಓಪನ್ ರನ್ನರ್‌ ಅಪ್‌ ಆಗಿರುವ ಪೆಟರ್‌ ಕೊರ್ಡಾ ಅವರ ಪುತ್ರ.

‘ನಡಾಲ್‌ ನನ್ನ ಬಹುದೊಡ್ಡ ಆದರ್ಶ. ನಾನು ಟೆನಿಸ್‌ ಒಲವು ಬೆಳೆಸಿಕೊಳ್ಳಲು ನಡಾಲ್ ಅವರೂ ಕಾರಣ‘ ಎಂದು ಸೆಬಾಸ್ಟಿಯನ್‌ ಹೇಳಿದ್ದಾರೆ.

ಸೆಚಿನ್ಯಾಟೊಗೆ ಸೋಲುಣಿಸಿದ ಜ್ವೆರೆವ್‌: ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ 6–1, 7–5, 6–3ರಿಂದ ಮಾರ್ಕೊ ಸೆಚಿನ್ಯಾಟೊ ಅವರನ್ನು ಮಣಿಸಿ 16ರ ಘಟ್ಟ ಪ್ರವೇಶಿಸಿದರು. ಮುಂದಿನ ಪಂದ್ಯದಲ್ಲಿ ಅವರು ಇಟಲಿಯ ಉದಯೋನ್ಮುಖ ಆಟಗಾರ ಜಾನ್ನಿಕ್ ಸಿನ್ನರ್‌ ಅವರನ್ನು ಎದುರಿಸಲಿದ್ದಾರೆ.

ಇಟಲಿಯ ಸೆಚಿನ್ಯಾಟೊ 2018ರ ಫ್ರೆಂಚ್‌ ಓಪನ್‌ನಲ್ಲಿ ಸೆಮಿಫೈನಲ್‌ ತಲುಪಿದ್ದರು.

‘ಮ್ಯಾರಥಾನ್‘ ಆಟದಲ್ಲಿ ಮಣಿದ‌ ವಾವ್ರಿಂಕಾ: ವಿಶ್ವ ರ‍್ಯಾಂಕಿಂಗ್‌ನಲ್ಲಿ 239ನೇ ಸ್ಥಾನದಲ್ಲಿರುವ, ಫ್ರಾನ್ಸ್‌ನ ಹ್ಯುಗೊ ಗ್ಯಾಸ್ಟನ್‌ ಅವರು 2–6, 6–3, 6–3, 4–6, 6–0ರಿಂದ ಫ್ರೆಂಚ್‌ ಓಪನ್‌ ಟೂರ್ನಿಯ ಮಾಜಿ ಚಾಂಪಿಯನ್‌ ಸ್ಟ್ಯಾನ್ ವಾವ್ರಿಂಕಾ ಅವರಿಗೆ ಆಘಾತ ನೀಡಿದರು. ಸ್ವಿಟ್ಜರ್ಲೆಂಡ್‌ನ ವಾವ್ರಿಂಕಾ 2015ರಲ್ಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದರು.

ಪಂದ್ಯದ ಮೂರನೇ ಸೆಟ್‌ ವೇಳೆ ಮಳೆ ಸುರಿಯಿತು. ಈ ಸಂದರ್ಭದಲ್ಲಿ 2–2ರ ಗೇಮಗಳ ಸಮಬಲದ ಆಟ ಸಾಗಿತ್ತು.

ವೈಲ್ಡ್‌ ಕಾರ್ಡ್‌ ಆಟಗಾರ ಗ್ಯಾಸ್ಟನ್‌ ಅವರಿಗೆಮುಂದಿನ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಿದೆ. ಅಮೆರಿಕ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿರುವ ಡೊಮಿನಿಕ್‌ ಥೀಮ್‌ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪ್ರಮುಖ ಪಂದ್ಯಗಳಲ್ಲಿ ಲೊರೆಂಜೊ ಸೊನೆಗೊ 7–6, 6–3, 7–6ರಿಂದ ಟೇಲರ್‌ ಫ್ರಿಟ್ಜ್‌ ಎದುರು, ಡಿಗೊ ಸ್ವಾರ್ಟ್ಜ್‌ಮನ್‌ ಅವರು 7–6, 6–3, 6–3ರಿಂದ ನಾರ್ಬರ್ಟ್ ಗೊಂಬೊಸ್‌ ವಿರುದ್ಧ ಗೆದ್ದರು.

ಮಹಿಳಾ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯಗಳಲ್ಲಿ ಕಿಕಿ ಬರ್ಟೆನ್ಸ್ 6–2, 6–2ರಿಂದ ಕ್ಯಾತರಿನಾ ಸಿನಿಯಾಕೊವಾ ಎದುರು, ಎಲಿನಾ ಸ್ವಿಟೋಲಿನಾ ಅವರು 6–4, 7–5ರಿಂದ ಏಕಟೆರಿನಾ ಅಲೆಕ್ಸಾಂಡ್ರಾವೊ ಅವರನ್ನು ಮಣಿಸಿ ಮುನ್ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT