ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನು ಮನದಲ್ಲಿಯೇ ಉಳಿದ ಮಾತು!

ಪ್ರಧಾನಿ ಮೋದಿ ಸಂವಾದದಲ್ಲಿ ಶೂಟಿಂಗ್ ಪಟು
Last Updated 3 ಏಪ್ರಿಲ್ 2020, 21:08 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆಗಿನ ಸಂವಾದದಲ್ಲಿ ನಾನೂ ಇದ್ದೆ. ನಾನೂ ಕೆಲವು ವಿಷಯಗಳನ್ನು ಹೇಳಲು ಸಿದ್ಧಳಾಗಿದ್ದೆ. ಆದರೆ ನನಗೆ ಮಾತನಾಡುವ ಅವಕಾಶವೇ ಸಿಗಲಿಲ್ಲ...’

– ಯುವ ಶೂಟಿಂಗ್ ಪಟು ಮನು ಭಾಕರ್ ಅವರ ಬೇಸರದ ನುಡಿಗಳಿವು. ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್‌ ಗೇಮ್ಸ್ , ಯೂತ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಪದಕ ಸಾಧನೆ ಮಾಡಿರುವ 18 ವರ್ಷದ ಮನು ಶುಕ್ರವಾರ ನಡೆದ ಪ್ರಧಾನಿಯೊಂದಿಗೆ ವಿಡಿಯೊ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೊರೊನಾ ವೈರಸ್‌ ಎದುರಿನ ಹೋರಾಟಕ್ಕಾಗಿ ದೇಶವು ಲಾಕ್‌ಡೌನ್‌ ಆಗಿದೆ. ಈ ಸಂದರ್ಭದಲ್ಲಿ ತಮ್ಮ ಮನೆಯಲ್ಲಿಯೇ ಅಪ್ಪ ಸಿದ್ಧಪಡಿಸಿಕೊಂಡ ಶೂಟಿಂಗ್ ರೇಂಜ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಹರಿಯಾಣದ ಹುಡುಗಿ. ಈ ವರ್ಷ ಅವರು ಒಲಿಂಪಿಕ್ಸ್‌ಗೆ ಹೋಗಲು ಸಿದ್ಧರಾಗಿದ್ದರು. ಅವರು ‘ಪ್ರಜಾವಾಣಿ’ಗೆ ದೂರವಾಣಿಯಲ್ಲಿ ನೀಡಿದ ಸಂದರ್ಶನ ಇಲ್ಲಿದೆ.

* ಪ್ರಧಾನಿಯೊಂದಿಗೆ ಏನು ಮಾತನಾಡಲು ಯೋಜಿಸಿದ್ದಿರಿ?
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತಮ್ಮ ಜೀವನ ಪಣಕ್ಕಿಟ್ಟು ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಪೊಲೀಸರು, ನರ್ಸ್‌ಗಳು ಮತ್ತಿತರ ವೃತ್ತಿಪರರಿಗೆ ಸೂಕ್ತ ರಕ್ಷಣೆ ನೀಡಬೇಕು. ಅವರಿಗೆ ನಾವು ಸದಾ ಚಿರಋಣಿಯಾಗಿದ್ದೇವೆ ಎಂದು ಬೆಂಬಲ ವ್ಯಕ್ತಪಡಿಸುವವಳಿದ್ದೆ. ಆದರೆ, ಕೆಲವು ಆಟಗಾರರಿಗೆ ಮಾತ್ರ ಮಾತನಾಡುವ ಅವಕಾಶ ಲಭಿಸಿತು. ಕೆಲವರು ಹತ್ತು ನಿಮಿಷ ಮಾತನಾಡಿದರೆ, ಇನ್ನುಳಿದವರು ಸುಮ್ಮನೇ ಕುಳಿತುಕೊಳ್ಳಬೇಕಾಯಿತು. ಭಾಗವಹಿಸಿದ್ದ ಎಲ್ಲರಿಗೂ ಕೆಲ ನಿಮಿಷಗಳಾದರೂ ಮಾತನಾಡುವ ಅವಕಾಶ ಸಿಗಬೇಕಿತ್ತು.

* ಲಾಕ್‌ಡೌನ್‌ನಿಂದ ಲಭಿಸಿರುವ ರಜೆಯಲ್ಲಿ ಏನು ಮಾಡುತ್ತಿದ್ದೀರಿ?
ಮನೆಯಲ್ಲಿ ಅಪ್ಪ ಕಟ್ಟಿಸಿಕೊಂಡ ಶೂಟಿಂಗ್ ರೇಂಜ್ ಇದೆ. ಅದರಲ್ಲಿ ಅಭ್ಯಾಸ ಮಾಡುತ್ತೇನೆ. ಈ ರೀತಿ ರಜೆ ಲಭಿಸಿರುವುದು ಒಂದು ರೀತಿಯಲ್ಲಿ ವರದಾನವಾಗಿದೆ. ಅಭ್ಯಾಸದ ಮೇಲೆ ಸಂಪೂರ್ಣ ಗಮನ ಕೇಂದ್ರಿಕರಿಸಲು ಸಾಧ್ಯವಾಗಿದೆ.

* ಒಲಿಂಪಿಕ್ಸ್‌ ಒಂದು ವರ್ಷ ಮುಂದೂಡಿರುವುದು ಅನುಕೂಲವೇ?
ಮುಂದೆ ಹೋಗಿರುವುದು ಬೇಸರದ ಸಂಗತಿ. ಆದರೆ ಅನಿವಾರ್ಯವೂ ಹೌದು. ಇಡೀ ವಿಶ್ವದಲ್ಲಿ ಇವತ್ತು ಕೊರೊನಾ ಸೋಂಕು ಸಮಸ್ಯೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಆಯೋಜನೆ ಅಸಾಧ್ಯ. ಮುಂದಿನ ವರ್ಷವಾದರೂ ಸುಸೂತ್ರವಾಗಿ ನಡೆಯುವಂತಹ ವಾತಾವರಣ ಸೃಷ್ಟಿಯಾಗಬೇಕು. ಸಮಸ್ಯೆ ಪರಿಹಾರವಾಗಬೇಕು.

* ಶೂಟಿಂಗ್ ಅಭ್ಯಾಸದ ಜೊತೆಗೆ ಮತ್ತೆ ಏನೇನು ಮಾಡುತ್ತಿದ್ದೀರಿ?
ವ್ಯಾಯಾಮ, ಶೂಟಿಂಗ್ ತಾಲೀಮು ಮುಗಿದ ನಂತರ ಬಹಳಷ್ಟು ಸಮಯ ಸಿಗುತ್ತದೆ. ಆಗ ನನ್ನ ನೆಚ್ಚಿನ ಚಿತ್ರಕಲೆ, ರೇಖಾಚಿತ್ರ ರಚನೆ ಮಾಡುತ್ತೇನೆ. ಕುಟುಂಬದೊಂದಿಗೆ ಕಾಲ ಕಳೆಯುತ್ತೇನೆ. ಚಾಂಪಿಯನ್‌ಷಿಪ್‌, ತರಬೇತಿ ಶಿಬಿರಗಳೆಂದು ವರ್ಷದ ಬಹುತೇಕ ಅವಧಿ ಮನೆಯಿಂದ ದೂರ ಇರುವ ನಮಗೆ ಇದೊಂದು ಉತ್ತಮ ಅವಕಾಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT