ಸ್ಟ್ಯಾನಿ ರಾಜ್ಯದ 2ನೇ ಗ್ರ್ಯಾಂಡ್‌ಮಾಸ್ಟರ್‌

7

ಸ್ಟ್ಯಾನಿ ರಾಜ್ಯದ 2ನೇ ಗ್ರ್ಯಾಂಡ್‌ಮಾಸ್ಟರ್‌

Published:
Updated:
Deccan Herald

ಬೆಂಗಳೂರು: ಶಿವಮೊಗ್ಗದ ಜಿ.ಎ.ಸ್ಟ್ಯಾನಿ ಅವರು ಕರ್ನಾಟಕದ ಎರಡನೇ (ದೇಶದ 58ನೇ) ಗ್ರ್ಯಾಂಡ್‌ಮಾಸ್ಟರ್‌ ಗೌರವಕ್ಕೆ ಪಾತ್ರರಾದರು. ಜಮ್ಮುವಿನಲ್ಲಿ ನಡೆದ ರಾಷ್ಟ್ರೀಯ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಈ ಪಟ್ಟಕ್ಕೆ ಅಗತ್ಯವಿದ್ದ ಮೂರನೇ ಗ್ರ್ಯಾಂಡ್‌ಮಾಸ್ಟರ್‌ ನಾರ್ಮ್‌ ಪೂರೈಸಿದರು.

2017ರ ಸೆಪ್ಟೆಂಬರ್‌ನಲ್ಲಿ ಮೈಸೂರಿನ ತೇಜ್‌ಕುಮಾರ್‌ ರಾಜ್ಯದ ಮೊದಲ ಗ್ರ್ಯಾಂಡ್‌ಮಾಸ್ಟರ್‌ ಎನಿಸಿದ್ದರು. ಜಮ್ಮುವಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ 9ನೇ ಸುತ್ತಿನಲ್ಲಿ ಶುಕ್ರವಾರ ಅವರು, ಅದುವರೆಗೆ ಲೀಡ್‌ನಲ್ಲಿದ್ದ ಅರವಿಂದ ಚಿದಂಬರಂ ಜೊತೆ ಡ್ರಾ ಮಾಡಿಕೊಂಡರು. ಪ್ರಸ್ತುತ ಅವರು 2,522ರ ರೇಟಿಂಗ್‌ ಹೊಂದಿದ್ದಾರೆ. ಈ ಟೂರ್ನಿಯಲ್ಲಿ ಅವರು 12ನೇ ಶ್ರೇಯಾಂಕ ಹೊಂದಿದ್ದರು.

2017ರ ಜುಲೈನಲ್ಲಿ ಅವರು ಮೊದಲ ಬಾರಿ 2,500ರ ರೇಟಿಂಗ್‌ ಪೂರೈಸಿದ್ದರು. 2016ರ ಏಪ್ರಿಲ್‌ನಲ್ಲಿ ಫ್ರಾನ್ಸ್‌ನ ಲೀಲೆಯಲ್ಲಿ ನಡೆದ ಲ್ಯುಕೊಪಿನ್‌ ಟೂರ್ನಿಯಲ್ಲಿ ಮೊದಲ ಜಿಎಂ ನಾರ್ಮ್‌ ಪಡೆದಿದ್ದರು. ಕೆಲವು ವಿದೇಶಿ ಟೂರ್ನಿಗಳಲ್ಲಿ ಆಡಿದರೂ ಅಗತ್ಯವಿದ್ದ ನಾರ್ಮ್‌ ಸಾಧನೆ ಬರಲಿಲ್ಲ. ಈ ವರ್ಷದ ಅಕ್ಟೋಬರ್‌ನಲ್ಲಿ ಗುಜರಾತ್‌ ಗ್ರ್ಯಾಂಡ್‌ಮಾಸ್ಟರ್‌ ಓಪನ್‌ ಟೂರ್ನಿಯಲ್ಲಿ ಎರಡನೇ ಜಿಎಂ ನಾರ್ಮ್‌ ಪಡೆದಿದ್ದರು. ಎರಡು ತಿಂಗಳ ಅಂತರದಲ್ಲೇ ಮೂರನೇ ನಾರ್ಮ್‌ ಕೂಡ ಸಾಧಿಸಿದ್ದಾರೆ.

‘ಯುರೋಪ್‌ ಸೇರಿದಂತೆ ವಿದೇಶಿ ಟೂರ್ನಿಗಳಲ್ಲಿ ಮೂರು ವರ್ಷ ಆಡಿದ್ದೆ. ನಮ್ಮ ದೇಶದ ಚೆಸ್‌ ಮಟ್ಟವೂ ಅತ್ಯುತ್ತಮವಾಗಿದೆ. ಈ ಮೂರು ವರ್ಷಗಳ ವಿರಾಮದ ನಂತರ ಭಾರತದಲ್ಲಿ ಬೆನ್ನು ಬೆನ್ನಿಗೆ ಎರಡು ಟೂರ್ನಿಗಳಲ್ಲಿ ಯಶಸ್ಸು ಸಾಧಿಸುವುದು ಸುಲಭವಲ್ಲ. ನನಗೆ ಸಂತಸವಾಗಿದೆ’ ಎಂದು ಅವರು ಸೋಮವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರ್ಯಾಂಡ್‌ಮಾಸ್ಟರ್‌ ಆಗಲು ಸ್ಟ್ಯಾನಿ ಈ ವರ್ಷ ಸಾಕಷ್ಟು ಪ್ರಯತ್ನ ಪಟ್ಟಿದ್ದ. ಅವನ ಶ್ರಮ ಫಲಕೊಟ್ಟಿದೆ. ಅವನ ತಂದೆ ಈಗಿಲ್ಲ. ಆದರೆ ಅವನು 2,500 ರೇಟಿಂಗ್ ದಾಟಿದ್ದಾಗಲೇ ಅವರು ಖುಷಿಪಟ್ಟಿದ್ದರು. ಅವರ ಆಸೆಯೂ ಈಡೇರಿದೆ’ ಎಂದು ಸ್ಟ್ಯಾನಿ ತಾಯಿ ಲಿಝಿ ತಿಳಿಸಿದರು. ಸ್ಟ್ಯಾನಿ ತಂದೆ ಕಳೆದ ವರ್ಷದ ನವೆಂಬರ್‌ನಲ್ಲಿ ನಿಧನರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !