ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕ್ರೀಡಾಕೂಟ: ಈಜು ಸ್ಪರ್ಧಿಗಳ ಪದಕ ಬೇಟೆ

ರಾಷ್ಟ್ರೀಯ ಕ್ರೀಡಾಕೂಟ: ಲಕ್ಷ್ಯಾ, ಮಹಿಳಾ ರಿಲೇ ತಂಡ ಕೂಟ ದಾಖಲೆ
Last Updated 3 ಅಕ್ಟೋಬರ್ 2022, 20:59 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಈಜು ಸ್ಪರ್ಧಿಗಳು ಗುಜರಾತ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಿಂಚಿನ ಪ್ರದರ್ಶನ ಮುಂದುವರಿಸಿದ್ದಾರೆ. ಸೋಮವಾರ ಎರಡು ಚಿನ್ನ ಸೇರಿದಂತೆ ಆರು ಪದಕಗಳನ್ನು ಗೆದ್ದುಕೊಂಡರು.

ಮಹಿಳೆಯರ 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಎಸ್‌.ಲಕ್ಷ್ಯಾ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ಅವರು 2 ನಿಮಿಷ 42.63 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಕರ್ನಾಟಕದ ಹರ್ಷಿತಾ ಜಯರಾಂ (2ನಿ. 45.27 ಸೆ.) ಇದೇ ವಿಭಾಗದಲ್ಲಿ ಕಂಚು ಪಡೆದರು.

ಮಹಿಳೆಯರ 4X100 ಮೀ. ಮೆಡ್ಲೆ ರಿಲೇನಲ್ಲಿ ರಾಜ್ಯ ತಂಡ 4 ನಿ. 27.78 ಸೆ.ಗಳಲ್ಲಿ ಗುರಿ ತಲುಪಿ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿತು. ಪುರುಷರ ತಂಡ (3 ನಿ. 53.44 ಸೆ.) ಬೆಳ್ಳಿ ಗೆದ್ದಿತು.

ಪುರುಷರ 1,500 ಮೀ. ಫ್ರೀಸ್ಟೈಲ್‌ನಲ್ಲಿ ಅನೀಶ್‌ ಎಸ್‌.ಗೌಡ (16 ನಿ. 5.94 ಸೆ.) ಬೆಳ್ಳಿ ಪಡೆದರೆ, ಮಹಿಳೆಯರ 800 ಮೀ. ಫ್ರೀಸ್ಟೈಲ್‌ನಲ್ಲಿ ಅಶ್ಮಿತಾ ಚಂದ್ರ (9 ನಿ. 27.54 ಸೆ.) ಕಂಚು ತಮ್ಮದಾಗಿಸಿಕೊಂಡರು.

ಟೆನಿಸ್‌ ತಂಡಗಳು ಫೈನಲ್‌ಗೆ: ಅಮೋಘ ಆಟ ಮುಂದುವರಿಸಿದ ಕರ್ನಾಟಕದ ಪುರುಷ ಮತ್ತು ಮಹಿಳಾ ಟೆನಿಸ್‌ ಡಬಲ್ಸ್ ವಿಭಾಗದ ತಂಡಗಳು ಫೈನಲ್‌ಗೆ ಲಗ್ಗೆಯಿಟ್ಟವು.

ಅಹಮದಾಬಾದ್‌ನ ಸಾಬರಮತಿಯಲ್ಲಿ ಟೆನಿಸ್‌ಸ್ಪರ್ಧೆಗಳ ನಡೆಯುತ್ತಿವೆ. ಸೋಮವಾರ ನಡೆದ ಪುರುಷರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಕರ್ನಾಟಕದ ಆದಿಲ್ ಕಲ್ಯಾಣಪುರ ಮತ್ತು ಎಸ್‌.ಡಿ. ಪ್ರಜ್ವಲ್ ದೇವ್‌5-7,6-3,10-6ರಿಂದ ಆಂಧ್ರಪ್ರದೇಶದ ಶಿವದೀಪ ಕೋಸರಾಜು ಮತ್ತು ಅನಂತ್ ಮಣಿ ಅವರನ್ನು ಸೋಲಿಸಿ ಪ್ರಶಸ್ತಿ ಸುತ್ತು ತಲುಪಿದರು.

ಮಹಿಳಾ ಡಬಲ್ಸ್‌ನಲ್ಲಿ ಸೋಹಾ ಸಾದಿಕ್ ಮತ್ತು ಶರ್ಮದಾ ಬಾಲು ಜೋಡಿಯು6-2, 6-1ರಿಂದ ಹರಿಯಾಣದ ಸಂದೀಪ್ತಿ ಸಿಂಗ್‌ ಮತ್ತು ರಿತು ಒಹಲ್ಯಾನ್ ಅವರನ್ನು ಪರಾಭವಗೊಳಿಸಿದರು.

ಪ್ರಜ್ವಲ್‌, ಮನೀಷ್ ಜಿ. ಮತ್ತು ಶರ್ಮದಾ ಬಾಲು ಅವರು ಸಿಂಗಲ್ಸ್ ವಿಭಾಗಗಳಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದರು. ಪುರುಷರ ವಿಭಾಗದಲ್ಲಿ ಪ್ರಜ್ವಲ್‌6-4, 6-2ರಿಂದ ತಮಿಳುನಾಡಿನ ಅಭಿನವ್ ಸಂಜೀವ್ ಎದುರು, ಮನೀಷ್‌3-6, 7-5, 6-2ರಿಂದ ಹರಿಯಾಣದ ಕರಣ್ ಸಿಂಗ್ ವಿರುದ್ಧ ಗೆದ್ದರು. ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಶರ್ಮದಾ1-6, 6-3, 6-1ರಿಂದ ತೆಲಂಗಾಣದ ಪಾವನಿ ಪಾಠಕ್ ಸವಾಲು
ಮೀರಿದರು.

ಕರ್ನಾಟಕ ಫುಟ್‌ಬಾಲ್ ತಂಡಕ್ಕೆ ಜಯ: ಶ್ರೀಧರ್ ಕೋಟಿಕೇಲ (4ನೇ ನಿಮಿಷ) ಮತ್ತು ಸತೀಶ್ ಕುಮಾರ್ (10ನೇ ನಿ.) ಅವರ ಕಾಲ್ಚಳಕದ ಬಲದಿಂದ ಕರ್ನಾಟಕ ಪುರುಷರ ಫುಟ್‌ಬಾಲ್ ತಂಡವು 2–1ರಿಂದ ಆತಿಥೇಯ ಗುಜರಾತ್ ತಂಡಕ್ಕೆ ಸೋಲುಣಿಸಿತು.

ಗುಜರಾತ್ ತಂಡಕ್ಕಾಗಿ ಪರ್ಮಾರ್ ಧರ್ಮೇಶ್ 52ನೇ ನಿಮಿಷದಲ್ಲಿ ಒಂದು ಗೋಲು ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT