ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಮಾಂತ್ರಿಕ ಧ್ಯಾನಚಂದ್ ಜೀವನದ ಸಾಧನೆಗಳ ನೋಟ

ರಾಷ್ಟ್ರೀಯ ಕ್ರೀಡಾ ದಿನಾಚರಣೆ ಇಂದು
Last Updated 28 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಜನನ: 29 ಆಗಸ್ಟ್‌ 1905

ನಿಧನ: 3 ಡಿಸೆಂಬರ್ 1979

* 16ನೇ ವಯಸ್ಸಿನಲ್ಲಿ ಸೇನೆಯನ್ನು ಸೇರಿದರು. ಅವರ ಮೂಲ ಹೆಸರು ಧ್ಯಾನ್‌ ಸಿಂಗ್ ಬ್ರಿಟಿಷ್ ಅಧಿಕಾರಿಗಳು ಆಡುತ್ತಿದ್ದ ಹಾಕಿ ನೋಡಿ ತಾವೂ ಅಭ್ಯಾಸ ಮಾಡಿದರು. ರಾತ್ರಿ ಹೊತ್ತಿನಲ್ಲಿ ಅವರು ಅಭ್ಯಾಸ ಮಾಡುತ್ತಿದ್ದರು. ಅವರ ಚಾಕಚಕ್ಯತೆ ಆಟವನ್ನು ನೋಡಿದ ಅಧಿಕಾರಿಗಳು, ಚಂದ್ರನ ಬೆಳಕಿನಲ್ಲಿ ಹೆಚ್ಚು ಆಡಿದ್ದ ಅವರನ್ನು ಧ್ಯಾನಚಂದ್ ಎಂದು ಕರೆದರು.

* 1928ರ ಆ್ಯಮಸ್ಟರ್‌ಡ್ಯಾಂ ಒಲಿಂಪಿಕ್ಸ್‌ನಲ್ಲಿ 14 ಗೋಲುಗಳನ್ನು ಬಾರಿಸಿದರು. ಅದರೊಂದಿಗೆ ಅತಿ ಹೆಚ್ಚು ಗೋಲು ಗಳಿಸಿದ ಸಾಧನೆ ಮಾಡಿದರು. ಆಗ ಭಾರತವು ಚಿನ್ನ ಗೆದ್ದಾಗ ಅಲ್ಲಿಯ ಪತ್ರಿಕೆಯೊಂದು, ‘ಇದು ಹಾಕಿ ಕ್ರೀಡೆಯಲ್ಲ. ಜಾದೂ. ಧ್ಯಾನಚಂದ್ ಹಾಕಿ ಆಟಗಾರನಲ್ಲ. ಜಾದೂಗಾರ’ ಎಂದು ವರದಿ ಮಾಡಿತ್ತು.

* ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ದಿನ ಭಾರತ ತಂಡವು ಸಂಭ್ರಮದಲ್ಲಿ ಮುಳುಗಿತ್ತು. ಆಗ ಆ ಗುಂಪಿನಲ್ಲಿ ಧ್ಯಾನಚಂದ್ ಇರಲಿಲ್ಲ. ಇದನ್ನು ಗಮನಿಸಿದ ಕೆಲವು ಸಹಆಟಗಾರರು ಹುಡುಕಲು ಹೋದರು. ಕ್ರೀಡಾಂಗಣದಲ್ಲಿ ಪದಕ ಗೆದ್ದ ತಂಡಗಳು ಪ್ರತಿನಿಧಿಸುವ ದೇಶಗಳ ಧ್ವಜಗಳು ಹಾರಾಡುತ್ತಿದ್ದ ಜಾಗದಲ್ಲಿ ಧ್ಯಾನಚಂದ್ ಕಣ್ಣೀರು ಹಾಕುತ್ತ ನಿಂತಿದ್ದರು. ಸ್ನೇಹಿತರು ಬಂದು ಏನಾಯಿತು ಎಂದು ವಿಚಾರಿಸಿದರು. ಗೆದ್ದಿದ್ದು ನನ್ನ ಭಾರತ, ಹಾರಾಡುತ್ತಿರುವುದು ಬ್ರಿಟಿಷ್ ಚಿಹ್ನೆ ಇರುವ ಧ್ವಜ. ನಮ್ಮ ಬಾವುಟಕ್ಕೆ ಯಾವಾಗ ನಾವು ಸೆಲ್ಯೂಟ್ ಮಾಡುವುದು? ಎಂದು ಮತ್ತಷ್ಟು ದುಃಖಿತರಾದರು. ಅವರ ಸ್ನೇಹಿತರೂ ಗದ್ಗದಿತರಾದರು. 1948ರಲ್ಲಿ ಭಾರತ ಚಿನ್ನ ಗೆದ್ದಾಗ ಅವರು ತಂಡದಲ್ಲಿ ಇರಲಿಲ್ಲ.

*ಬರ್ಲಿನ್‌ನಲ್ಲಿ 1936ರಲ್ಲಿ ಒಲಿಂಪಿಕ್ಸ್‌ ನಡೆದ ಸಂದರ್ಭದಲ್ಲಿ ಅಲ್ಲಿಯ ಜರ್ಮನ್ ಪತ್ರಿಕೆಯೊಂದು, ‘ಈಗ ಒಲಿಂಪಿಕ್ಸ್‌ ಅಂಗಳಲ್ಲಿ ಆಟವಷ್ಟೇ ಅಲ್ಲ, ಜಾದೂ ಕೂಡ ನಡೆಯಲಿದೆ’ ಎಂದು ಬ್ಯಾನರ್ ಹೆಡ್‌ಲೈನ್ ಹಾಕಿತ್ತು. ಅದು ಧ್ಯಾನಚಂದ್ ಆಟದ ಬಗ್ಗೆಯಾಗಿತ್ತು. ಇಡೀ ನಗರದಲ್ಲಿ ‘ಭಾರತದ ಹಾಕಿ ಮಾಂತ್ರಿಕ ಧ್ಯಾನಚಂದ್ ಅವರ ಜಾದೂ ನೋಡಲು ಹಾಕಿ ಕ್ರೀಡಾಂಗಣಕ್ಕೆ ಭೇಟಿ ನೀಡಿ’ ಎಂದು ಭಿತ್ತಿಚಿತ್ರಗಳನ್ನು ಅಂಟಿಸಲಾಗಿತ್ತು.

* ಬರ್ಲಿನ್‌ನಲ್ಲಿ ಭಾರತವು ಚಿನ್ನ ಗೆದ್ದಾಗ ಆಗ ಅಲ್ಲಿಯ ಅಧ್ಯಕ್ಷನಾಗಿದ್ದ ಅಡಾಲ್ಫ್‌ ಹಿಟ್ಲರ್ ತಮ್ಮ ದೇಶಕ್ಕಾಗಿ ಆಡಿದರೆ ನಾಗರಿಕತ್ವ ಮತ್ತು ಜರ್ಮನಿ ಮಿಲಿಟರಿಯಲ್ಲಿ ದೊಡ್ಡ ಹುದ್ದೆ ನೀಡುವುದಾಗಿ ಧ್ಯಾನಚಂದ್‌ಗೆ ಆಹ್ವಾನವಿತ್ತಿದ್ದರು. ಆದರೆ, ಧ್ಯಾನಚಂದ್ ಅದನ್ನು ತಿರಸ್ಕರಿಸಿದ್ದರು ಎಂದು ಹೇಳಲಾಗುತ್ತದೆ.

* 1935ರಲ್ಲಿ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಧ್ಯಾನಚಂದ್ ಆಟವನ್ನು ನೋಡಿದ್ದ ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್ಮನ್, ‘ಅವರು ಗೋಲುಗಳನ್ನು ಕ್ರಿಕೆಟ್‌ನಲ್ಲಿ ರನ್‌ ಗಳಿಸಿದಂತೆ ಗಳಿಸುತ್ತಾರೆ’ ಎಂದು ಶ್ಲಾಘಿಸಿದ್ದರು. ಧ್ಯಾನಚಂದ್ ಅವರು 22 ವರ್ಷಗಳಲ್ಲಿ (1926–48) 400 ಗೋಲುಗಳನ್ನು ಗಳಿಸಿದರು.

* ನೆದರ್ಲೆಂಡ್‌ನಲ್ಲಿ ಒಮ್ಮೆ ಅಲ್ಲಿಯ ಅಧಿಕಾರಿಗಳು ಅವರ ಹಾಕ ಸ್ಟಿಕ್‌ ಮುರಿದು ಆಯಸ್ಕಾಂತವೇನಾದರೂ ಇದೆಯೇ ಎಂದು ತಪಾಸಣೆ ಮಾಡಿದ್ದರು.

* ಧ್ಯಾನಚಂದ್ ಅವರು ತಮ್ಮ ಮಕ್ಕಳನ್ನು ಹಾಕಿ ಆಟಗಾರರನ್ನಾಗಿ ರೂಪಿಸಲು ಇಷ್ಟಪಟ್ಟಿರಲಿಲ್ಲ. ಆರ್ಥಿಕವಾಗಿ ಅಷ್ಟೇನೂ ಉಪಯೋಗವಿಲ್ಲ. ಆದ್ದರಿಂದ ಚೆನ್ನಾಗಿ ಓದಿ ಎಂದು ಹೇಳುತ್ತಿದ್ದರು. ಆದರೂ ಅವರ ಮಗ ಅಶೋಕಕುಮಾರ್ ಅವರು ಭಾರತ ತಂಡದಲ್ಲಿ ಆಡಿದರು. ನಾಯಕತ್ವ ವಹಿಸಿದರು. ವಿಶ್ವ ಕಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಕೊಟ್ಟ ಸಾಧನೆ ಮಾಡಿದರು.

(ಮಾಹಿತಿ: ‘ಗೋಲ್’ ಧ್ಯಾನಚಂದ್ ಆತ್ಮಚರಿತ್ರೆ ಮತ್ತು ಅಶೋಕಕುಮಾರ್ ಹೇಳಿಕೆಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT