ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಪ್ರೀತಮ್‌, ಗೌರವ್‌

ನರಸಿಂಗ್ ಯಾದವ್‌ಗೆ ಕಂಚು
Last Updated 13 ನವೆಂಬರ್ 2021, 13:09 IST
ಅಕ್ಷರ ಗಾತ್ರ

ಗೊಂಡಾ, ಉತ್ತರಪ್ರದೇಶ: ಖ್ಯಾತನಾಮ ಕುಸ್ತಿಪಟುಗಳನ್ನು ಹಿಂದಿಕ್ಕಿದ ರೈಲ್ವೆಯ ಪ್ರೀತಮ್‌ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.

ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಪುರುಷರ 72 ಕೆಜಿ ವಿಭಾಗದ ಫೈನಲ್‌ನಲ್ಲಿ ಶನಿವಾರ ಅವರು 11–0ರಿಂದ ಯುವ ಪೈಲ್ವಾನ ಯಶ್‌ ಸವಾಲು ಮೀರಿದರು.

ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿ ನಾಲ್ಕು ವರ್ಷಗಳ ನಿಷೇಧ ಶಿಕ್ಷೆ ಪೂರ್ಣಗೊಳಿಸಿದ್ದ ನರಸಿಂಗ್‌ಪಂಚಮ್ ಯಾದವ್ ಮತ್ತು ಅಮಿತ್‌ ಧನಕರ್ ಈ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಾಗಿದ್ದರು.

25 ವರ್ಷದ ಪ್ರೀತಮ್‌ ಎರಡು ಬೌಟ್‌ಗಳನ್ನು ಬೈ ಫಾಲ್‌ನಲ್ಲಿ ಗೆದ್ದರೆ, ಎರಡರಲ್ಲಿ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಜಯಿಸಿದರು.

ಜಿದ್ದಾಜಿದ್ದಿನ ಸೆಮಿಫೈನಲ್‌ ಹಣಾಹಣಿಯಲ್ಲಿ ನರಸಿಂಗ್‌ ಯಾದವ್‌ ಅವರು 7–11ರಿಂದ ಯಶ್ ಎದುರು ಎಡವಿದರು. ನರಸಿಂಗ್ ಕಂಚಿನ ಪದಕಕ್ಕೆ ಸಮಾಧಾನಪಡಬೇಕಾಯಿತು. ಇದಕ್ಕೂ ಮೊದಲು ನರಸಿಂಗ್‌ ರೋಚಕ ಹಣಾಹಣಿಯಲ್ಲಿ 7–6ರಿಂದ ಅಮಿತ್‌ ಅವರನ್ನು ಮಣಿಸಿದ್ದರು.

ಒಲಿಂಪಿಕ್ಸ್ ಪದಕ ವಿಜೇತರಾದ ಬಜರಂಗ್ ಪೂನಿಯಾ ಹಾಗೂ ರವಿ ದಹಿಯಾ ಅವರ ಅನುಪಸ್ಥಿತಿಯಲ್ಲಿ 65 ಕೆಜಿ ಹಾಗೂ 57 ಕೆಜಿ ವಿಭಾಗಗಳಲ್ಲಿ ಹೆಚ್ಚಿನ ಪೈಪೋಟಿ ಕಂಡುಬರಲಿಲ್ಲ. 65 ಕೆಜಿ ವಿಭಾಗದಲ್ಲಿ ಶರವಣ್ ಅವರಿಗೆ ಸೋಲುಣಿಸಿದ ರೋಹಿತ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, 57 ಕೆಜಿ ವಿಭಾಗದ ಚಿನ್ನದ ಪದಕವು ಅಮನ್ ಅವರ ಪಾಲಾಯಿತು.

ಫೈನಲ್ ಬೌಟ್‌ನಲ್ಲಿ ಅಮನ್‌ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಅಭಿಷೇಕ್ ಎದುರು ಜಯಿಸಿದರು.

ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಗೌರವ್ ಬಲಿಯಾನ್‌ 79 ಕೆಜಿ ವಿಭಾಗದ ಫೈನಲ್‌ ಬೌಟ್‌ನಲ್ಲಿ ಪಾರಮ್ಯ ಮೆರೆದರು. ಫೈನಲ್‌ನಲ್ಲಿ 5–3ರಿಂದ ಜೀತೇಂದರ್ ಕಿನ್ಹಾ ಅವರನ್ನು ಸೋಲಿಸಿದರು.

92 ಕೆಜಿ ವಿಭಾಗದಲ್ಲಿ ವಿಕ್ಕಿ ಮತ್ತು 125 ಕೆಜಿ ವಿಭಾಗದಲ್ಲಿ ಶಿವರಾಜ್‌ ಚಿನ್ನದ ಪದಕಗಳಿಗೆ ಕೊರಳೊಡ್ಡಿದರು. ಚಿನ್ನದ ಪದಕದ ಸುತ್ತಿನಲ್ಲಿ ವಿಕ್ಕಿ ಅವರು ಮೋನು ದಹಿಯಾ ಅವರನ್ನು ಪರಾಭವಗೊಳಿಸಿದರೆ, ಶಿವರಾಜ್‌ ಅವರು ಮೋಹಿತ್ ಎದುರು ಗೆದ್ದರು. ಫ್ರೀಸ್ಟೈಲ್‌ ವಿಭಾಗದಲ್ಲಿ ಸರ್ವಿಸಸ್‌ ಕುಸ್ತಿಪಟುಗಳು ಅಗ್ರಸ್ಥಾನ ಗಳಿಸಿದರೆ, ರೈಲ್ವೇಸ್‌ ರನ್ನರ್‌ ಅಪ್‌ ಮತ್ತು ಹರಿಯಾಣ ಪಟುಗಳು ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT