ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾವೆಲಿನ್‌ ಥ್ರೋ: ‘ಯುದ್ಧಭೂಮಿ’ಯಲ್ಲಿ ಅರಳಿದ ಪ್ರತಿಭೆ ನೀರಜ್‌ ಚೋಪ್ರಾ

Last Updated 12 ಜುಲೈ 2020, 19:30 IST
ಅಕ್ಷರ ಗಾತ್ರ

ಇತಿಹಾಸ ಓದಿದವರಿಗೆ‍ಪಾಣಿಪತ್ ಕದನಗಳ ಪರಿಚಯವಿರುತ್ತದೆ. ಮೂರು ಯುದ್ಧಗಳಿಗೆ ಸಾಕ್ಷಿಯಾಗಿದ್ದ ಈ ಐತಿಹಾಸಿಕ ನಗರ‌ ಈಗ ಮತ್ತೆ ವಿಶ್ವದ ಗಮನ ಸೆಳೆಯುತ್ತಿದೆ. ಅದಕ್ಕೆ ಕಾರಣ ನೀರಜ್‌ ಚೋಪ್ರಾ ಎಂಬ ಪ್ರತಿಭಾನ್ವಿತ.

22 ವರ್ಷ ವಯಸ್ಸಿನ ನೀರಜ್‌, ಯುದ್ಧಭೂಮಿಯಲ್ಲಿ ಶತ್ರುಗಳನ್ನು ಸದೆಬಡಿಯಲು ಬಳಸುತ್ತಿದ್ದ ಭರ್ಚಿ ಹಿಡಿದು ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಗರ್ಜಿಸುತ್ತಿದ್ದಾರೆ. ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ.‌

2018ರಲ್ಲಿ ನಡೆದಿದ್ದ ಏಷ್ಯನ್‌ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದ ಹಿರಿಮೆ ಹೊಂದಿರುವ ನೀರಜ್‌, ಮುಂದಿನ ವರ್ಷ ಜಪಾನ್‌ನ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸ್‌ಗೂ ರಹದಾರಿ ಪಡೆದಿದ್ದಾರೆ. ಈ ಕುರಿತು‌ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ನೀವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭಾರತದ ನೆಚ್ಚಿನ ಸ್ಪರ್ಧಿ ಎಂದು ಅನೇಕರು ಹೇಳುತ್ತಿದ್ದಾರಲ್ಲ?

ನಾನು ಯಾವತ್ತೂ ಹಾಗೆ ಅಂದುಕೊಂಡಿಲ್ಲ. ಜನರು ನನ್ನ ಮೇಲೆ ಇಷ್ಟೊಂದು ದೊಡ್ಡ ನಿರೀಕ್ಷೆ ಇಟ್ಟುಕೊಂಡಿರುವುದನ್ನು ನೋಡಿದರೆತುಂಬಾ ಖುಷಿಯಾಗುತ್ತದೆ. ನಾನು ಪದಕದ ಗುರಿ ಇಟ್ಟುಕೊಂಡು ಯಾವುದೇ ಕೂಟಗಳಲ್ಲೂ ಪಾಲ್ಗೊಳ್ಳುವುದಿಲ್ಲ. ಪ್ರತಿಬಾರಿಯೂ ಟ್ರ್ಯಾಕ್‌ಗೆ ಇಳಿದಾಗ ಹಿಂದೆಂದಿಗಿಂತಲೂಶ್ರೇಷ್ಠ ಸಾಮರ್ಥ್ಯ ತೋರಬೇಕು. ಅದೇ ನನ್ನ ಮಂತ್ರ.

*ಗಾಯದಿಂದಾಗಿ 2019ರ ಋತುವಿನ ಎಲ್ಲಾ ಸ್ಪರ್ಧೆಗಳಿಂದಲೂ ದೂರ ಉಳಿಯಬೇಕಾಯಿತು. ಆಗ ನಿಮ್ಮ ಮನಸ್ಸಿನಲ್ಲಿ ಮೂಡಿದ ಆಲೋಚನೆಗಳೇನು?

ಬಲ ಮೊಣಕೈ ಮೂಳೆ ಮುರಿದಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಲೇಬೇಕಿತ್ತು. ಹೀಗಾಗಿ ಒಂದು ವರ್ಷ ಯಾವುದೇ ಕೂಟಗಳಲ್ಲಿ ಪಾಲ್ಗೊಳ್ಳಲು ಆಗಲಿಲ್ಲ.

ಅಷ್ಟು ಸುದೀರ್ಘ ಸಮಯ ಸ್ಪರ್ಧೆಯಿಂದ ದೂರ ಉಳಿದಿದ್ದು ಅದೇ ಮೊದಲು.‍ ಬಳ್ಳಾರಿಯ ವಿಜಯನಗರದಲ್ಲಿರುವ ಇನ್‌ಸ್ಪೈರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ (ಐಐಎಸ್‌) ಕೇಂದ್ರದಲ್ಲಿ ಪುನಶ್ಚೇತನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿನ ಫಿಸಿಯೊಥೆರಪಿಸ್ಟ್‌ಗಳು, ಕಂಡೀಷನಿಂಗ್‌ ಕೋಚ್‌ಗಳು ಹಾಗೂ ನ್ಯೂಟ್ರಿಷಿಯನಿಸ್ಟ್‌ಗಳ ಸಹಕಾರದಿಂದ ಬೇಗನೆ ಗುಣಮುಖನಾದೆ. ಗಾಯದಿಂದ ಚೇತರಿಸಿಕೊಂಡ ಬಳಿಕ ಪಾಲ್ಗೊಂಡ ಮೊದಲ ಕೂಟದಲ್ಲೇ (ಈ ವರ್ಷದ ಜನವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಅಥ್ಲೆಟಿಕ್ಸ್‌ ಸೆಂಟ್ರಲ್‌ ಕೂಟ) 87.86 ಮೀಟರ್ಸ್‌ ಸಾಮರ್ಥ್ಯ ತೋರಿ ಒಲಿಂಪಿಕ್ಸ್‌ ಟಿಕೆಟ್‌ ಗಿಟ್ಟಿಸಿಕೊಂಡೆ.

*ಈಗ ಎಲ್ಲಿದ್ದೀರಿ. ಈ ಸಂದಿಗ್ಧ ಸಮಯದಲ್ಲಿ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಏನು ಮಾಡುತ್ತಿದ್ದೀರಿ?

ಕೊರೊನಾ ಬಿಕ್ಕಟ್ಟು ಸೃಷ್ಟಿಯಾದಾಗ ಟರ್ಕಿಯಲ್ಲಿ ತರಬೇತಿ ಪಡೆಯುತ್ತಿದ್ದೆ. ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ವಿಮಾನಯಾನದ ಮೇಲೆ ನಿರ್ಬಂಧ ಹೇರುವ ಮುನ್ನವೇ ಭಾರತಕ್ಕೆ ಮರಳಿದ್ದೆ. ಟರ್ಕಿಯಿಂದ ಬಂದ ದಿನದಿಂದಲೂ ಪಟಿಯಾಲದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ (ಎನ್‌ಐಎಸ್‌) ಕೇಂದ್ರದಲ್ಲಿ ತಂಗಿದ್ದೇನೆ.ಅಲ್ಲಿ ನಿತ್ಯವೂ ಲಘು ವ್ಯಾಯಾಮಗಳನ್ನು ಮಾಡುತ್ತಾ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಪ್ರಯತ್ನಿಸಿದೆ. ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕ ನಂತರ ತರಬೇತಿ ಆರಂಭಿಸಿದ್ದು ನಿಧಾನವಾಗಿ ಲಯ ಕಂಡುಕೊಳ್ಳುತ್ತಿದ್ದೇನೆ.

*ಲಾಕ್‌ಡೌನ್‌ ಸಮಯದಲ್ಲಿ ಏನು ಮಾಡಿದಿರಿ?

ತರಬೇತಿಗೆ ನಿರ್ಬಂಧ ಹೇರಿದ್ದ ಕಾರಣ ಮೂರು ತಿಂಗಳು ಜಾವೆಲಿನ್‌ ಮುಟ್ಟಿರಲಿಲ್ಲ. ನಾಲ್ಕು ಗೋಡೆಗಳ ನಡುವೆಯೇ ಇರುವುದು ಕಷ್ಟವಾಗಿತ್ತು. ನಿತ್ಯವೂ ಮನೆಯವರು ಹಾಗೂ ಸ್ನೇಹಿತರಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದೆ. ಒಂದಷ್ಟು ಪುಸ್ತಕಗಳನ್ನು ಓದಿದೆ. ಇಷ್ಟದ ಹಾಡುಗಳನ್ನು ಕೇಳುತ್ತಾ ಸಮಯ ಕಳೆದೆ.

*ಜಿಂದಾಲ್‌ ಸ್ಟೀಲ್‌ ವರ್ಕ್ಸ್‌ (ಜೆಎಸ್‌ಡಬ್ಲ್ಯು) ಸಂಸ್ಥೆಯ ಬೆಂಬಲದ ಬಗ್ಗೆ ಹೇಳಿ?

ಹಿಂದಿನ ನಾಲ್ಕು ವರ್ಷಗಳಿಂದಲೂ ಜೆಎಸ್‌ಡಬ್ಲ್ಯು ನನಗೆ ಬೆಂಬಲ ನೀಡುತ್ತಾ ಬಂದಿದೆ.ಇಶಾನ್‌ ಮಾರ್ವಾ ಅವರಂತಹ ನುರಿತ ಫಿಸಿಯೊವನ್ನು ನನಗಾಗಿಯೇ ನೇಮಿಸಿದ್ದಾರೆ. ರಾಷ್ಟ್ರೀಯ ಶಿಬಿರಗಳು ಇಲ್ಲದ ಸಮಯದಲ್ಲಿ ವಿಜಯನಗರದಲ್ಲಿರುವ ವಿಶ್ವ ದರ್ಜೆಯ ಐಐಎಸ್‌ ಕೇಂದ್ರದಲ್ಲಿ ತರಬೇತಿ ಪಡೆಯಲು ಅವಕಾಶ ಕೊಟ್ಟಿದ್ದಾರೆ. ಹೀಗಾಗಿಯೇ ಅಂತರರಾಷ್ಟ್ರೀಯ ಕೂಟಗಳಲ್ಲಿ ಪದಕಗಳನ್ನು ಗೆಲ್ಲಲು ಸಾಧ್ಯವಾಗುತ್ತಿದೆ.

*ನಿಮಗಿನ್ನು 22ರ ಹರೆಯ. ನಿಮ್ಮ ವಯಸ್ಸಿನ ಯುವಕರ ಹಾಗೆ ಸುತ್ತಾಡುವ, ಸಣ್ಣ ಪುಟ್ಟ ಹೋಟೆಲ್‌ಗಳಲ್ಲಿ ಊಟ, ಉಪಾಹಾರ ಸೇವಿಸುವ ಆಸೆ ಇದೆಯೇ?

ಸ್ನೇಹಿತರೊಂದಿಗೆ ಮಾಲ್‌ಗಳಿಗೆ ಹೋಗಬೇಕು, ಹೊಸ ಬಟ್ಟೆ ಖರೀದಿಸಬೇಕು, ವಿವಿಧ ಬಗೆಯ ಖಾದ್ಯಗಳನ್ನು ಸವಿಯಬೇಕೆಂಬ ಆಸೆ ಖಂಡಿತವಾಗಿಯೂ ಇದೆ. ಕ್ರೀಡಾಪಟುಗಳಿಗೆ ಫಿಟ್‌ನೆಸ್‌ ತುಂಬಾ ಅಗತ್ಯ. ಇದಕ್ಕಾಗಿ ಕಟ್ಟುನಿಟ್ಟಿನ ಡಯಟ್‌ ಪಾಲಿಸಬೇಕಾಗುತ್ತದೆ. ಹೀಗಾಗಿ ಹೊರಗಿನ ಆಹಾರ ಸೇವಿಸುವುದಕ್ಕೆ ಸ್ವಯಂ ನಿರ್ಬಂಧ ಹೇರಿಕೊಂಡಿದ್ದೇನೆ.

*ಅಥ್ಲೆಟಿಕ್ಸ್‌ ಬಿಟ್ಟು ಬೇರೆ ಯಾವ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ಇತ್ತು?

ನಾನು ರೈತಾಪಿ ಕುಟುಂಬದ ಹಿನ್ನೆಲೆ ಹೊಂದಿರುವವನು. ಹೀಗಾಗಿ ಸಹಜವಾಗಿಯೇ ಕೃಷಿಯತ್ತ ಒಲವಿತ್ತು. ಭಾರತೀಯ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಮಹದಾಸೆಯೂ ಮನದಲ್ಲಿ ಮೊಳೆತಿತ್ತು.

*ಕರ್ನಾಟಕದಲ್ಲಿ ನಿಮಗಿಷ್ಟವಾಗುವ ಸ್ಥಳಗಳು?

ಬೆಂಗಳೂರು ಮತ್ತು ವಿಜಯನಗರ ನನ್ನಿಷ್ಟದ ಸ್ಥಳಗಳು. ರಾಜ್ಯದ ಇತರ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡಬೇಕೆಂಬ ಆಸೆ ಇದೆ. ಅದಕ್ಕೆ ಸಮಯ ಕೂಡಿಬರುತ್ತಿಲ್ಲ.

*ಸಿನಿಮಾ ನೋಡುವ ಹವ್ಯಾಸವಿದೆಯೇ?

ಬಿಡುವು ಸಿಕ್ಕಾಗಲೆಲ್ಲಾ ತಪ್ಪದೇ ನೋಡುತ್ತೇನೆ. ಆ್ಯಕ್ಷನ್‌ ಸಿನಿಮಾಗಳೆಂದರೆ ಇಷ್ಟ. ರಣದೀಪ್‌ ಹೂಡಾ ನನ್ನ ನೆಚ್ಚಿನ ನಟ.

*ಇಷ್ಟದ ಆಹಾರ ಮತ್ತು ಸ್ಥಳ?

ಮನೆಯಲ್ಲಿ ಅಮ್ಮ ಮಾಡಿದ ಎಲ್ಲಾ ಬಗೆಯ ಖಾದ್ಯಗಳನ್ನೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತೇನೆ. ತರಬೇತಿ ಹಾಗೂ ಚಾಂಪಿಯನ್‌ಷಿಪ್‌ಗಳ ಸಂದರ್ಭದಲ್ಲಿ ತಿಂಗಳುಗಟ್ಟಲೇ ಮನೆಯಿಂದ ದೂರ ಇರಬೇಕಾಗುತ್ತದೆ. ಆಗ ಅಮ್ಮನ ಕೈರುಚಿಯನ್ನು ತುಂಬಾ ‘ಮಿಸ್‌’ ಮಾಡಿಕೊಳ್ಳುತ್ತೇನೆ. ಯುರೋಪ್‌ನ ಎಲ್ಲಾ ಸ್ಥಳಗಳನ್ನೂ ಸುತ್ತಬೇಕೆಂಬ ಆಸೆ ಇದೆ.

*ನಿಮಗೆ ಅಡುಗೆ ಮಾಡುವುದಕ್ಕೆ ಬರುತ್ತದೆಯೇ?

ಮನೆಯಿಂದ ಹೊರಗೆ ಇದ್ದಾಗ ಕೆಲವೊಮ್ಮೆ ನಾವೇ ಅಡುಗೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿಅಲ್ಪ ಸ್ವಲ್ಪ ಕಲಿತುಕೊಂಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT