ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ಬಾಲ್‌ :ಹೆಜ್ಜೆಗುರುತು ಮೂಡಿಸುವತ್ತ..

Last Updated 31 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಹೋದ ವಾರ ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ ನಡೆದಿತ್ತು. ಅದರಲ್ಲಿ ಕರ್ನಾಟಕದ ವನಿತೆಯರು ಚಾಂಪಿಯನ್‌ ಆದರು. ಈ ವಿಷಯ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಏಕೆಂದರೆ ಈ ಕ್ರೀಡೆ ಜನರಿಗೆ ಕ್ರಿಕೆಟ್‌, ಫುಟ್‌ಬಾಲ್‌, ಬ್ಯಾಡ್ಮಿಂಟನ್‌ನಷ್ಟು ಆಪ್ತವಾಗಿಲ್ಲ.

ಕಾಮನ್‌ವೆಲ್ತ್‌ ರಾಷ್ಟ್ರಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ ನೆಟ್‌ಬಾಲ್‌, ಕರ್ನಾಟಕದಲ್ಲೂ ವಿಶಿಷ್ಠ ಪರಂಪರೆ ಹೊಂದಿದೆ. ರಾಜ್ಯದ ಹಲವು ಕ್ರೀಡಾಪಟುಗಳು ಈ ಕ್ರೀಡೆಯಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ್ದಾರೆ. ರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಜಯಿಸಿ ಬೀಗಿದ್ದಾರೆ.

ನೆಲಮಂಗಲದ ಎಚ್‌.ಎಸ್‌.ನೀಲಾ 2012ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದವರು. ಕಾಮನ್‌ವೆಲ್ತ್‌ ಕೂಟದಲ್ಲಿ ಆಡಿದರಾಜ್ಯದ ಏಕೈಕ ನೆಟ್‌ಬಾಲ್‌ ಆಟಗಾರ್ತಿ ಎಂಬ ಹಿರಿಮೆ ಅವರದ್ದು. ಬಿ.ಜೆ.ಮೇಘನಾ, ಜಿ.ಪದ್ಮಾ, ಬಿ.ಇ.ಪ್ರಮೀಳಾ ಅವರೂ ಎತ್ತರದ ಸಾಧನೆ ಮಾಡಿದವರು.

ಹೊಸ ತಲೆಮಾರಿನ ಸಿ.ಚೇತನ್‌, ನಿತಿನ್‌, ರಂಜಿತಾ ಮತ್ತು ನಂದಿನಿ ಅವರೂ ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರದ ಚೇತನ್‌ ಮತ್ತು ಮಂಗಳೂರಿನ ನಿತಿನ್‌ 2017ರ ಡಿಸೆಂಬರ್‌ನಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದಲ್ಲಿ ಆಡಿದ್ದರು.ನಿತಿನ್‌ ಅವರು ತಂಡದ ಉಪನಾಯಕನ ಜವಾಬ್ದಾರಿಯನ್ನೂ ನಿಭಾಯಿಸಿದ್ದರು. ಹೋದ ವರ್ಷ ಸಿಂಗಪುರದಲ್ಲಿ ನಡೆದಿದ್ದ ಏಷ್ಯನ್‌ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಏಳನೇ ಸ್ಥಾನ ಗಳಿಸಿತ್ತು. ಆ ತಂಡಕ್ಕೆ ರಂಜಿತಾ ಉಪನಾಯಕಿಯಾಗಿದ್ದರು. ನಂದಿನಿ ಆಡುವ ಬಳಗದಲ್ಲಿದ್ದರು.

ಎರಡು ದಶಕಗಳ ಹಿಂದಿನ ಮಾತು. ಆಗ ರಾಜ್ಯದಲ್ಲಿ ನೆಟ್‌ಬಾಲ್‌ಗೆ ಸಾಕಷ್ಟು ಮನ್ನಣೆ ಇತ್ತು. ರಾಜ್ಯಮಟ್ಟದ ಟೂರ್ನಿಗಳು ನಡೆದರೆ 20ರಿಂದ 25 ತಂಡಗಳು ಪಾಲ್ಗೊಳ್ಳುತ್ತಿದ್ದವು. ಕ್ರಮೇಣ ಈ ವೈಭವ ಕಡಿಮೆಯಾಗುತ್ತಾ ಹೋಯಿತು. ಅಳಿವಿನಂಚಿನತ್ತ ಸಾಗುತ್ತಿದ್ದ ಈ ಕ್ರೀಡೆ ಈಗ ಮತ್ತೆ ಮೈಕೊಡವಿ ನಿಂತಿದೆ. ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯ ತಂಡದವರಿಂದ ರಾಷ್ಟ್ರೀಯ ಸೀನಿಯರ್‌, ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ಚಾಂಪಿಯನ್‌ಷಿಪ್‌ಗಳಲ್ಲಿ ಮೂಡಿಬಂದಿರುವ ಸಾಮರ್ಥ್ಯ ಹಿಂದಿನ ವೈಭವ ಮರುಕಳಿಸುತ್ತಿರುವುದಕ್ಕೆ ದ್ಯೋತಕದಂತಿದೆ.

ಈ ಮೊದಲು ಅಸ್ತಿತ್ವದಲ್ಲಿದ್ದ ಕರ್ನಾಟಕ ರಾಜ್ಯ ನೆಟ್‌ಬಾಲ್‌ ಸಂಸ್ಥೆ 2016ರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ರಾಜ್ಯದ ತಂಡಗಳನ್ನು ಕಳುಹಿಸಿರಲಿಲ್ಲ. ಹೀಗಾಗಿ ಭಾರತ ನೆಟ್‌ಬಾಲ್‌ ಫೆಡರೇಷನ್‌, ಆ ಸಂಸ್ಥೆಯ ಮಾನ್ಯತೆ ರದ್ದು ಮಾಡಿ 25 ಆಗಸ್ಟ್‌ 2017ರಲ್ಲಿ ಕರ್ನಾಟಕ ಅಮೆಚೂರ್‌ ನೆಟ್‌ಬಾಲ್‌ ಸಂಸ್ಥೆಗೆ (ಎಎನ್‌ಎಕೆ) ಮಾನ್ಯತೆ ನೀಡಿತು. ಅಸ್ಫಕ್‌ ಅಹ್ಮದ್‌ ಅವರ ಅಧ್ಯಕ್ಷತೆಯಲ್ಲಿ ಅಸ್ವಿತ್ವಕ್ಕೆ ಬಂದ ನೂತನ ಸಂಸ್ಥೆ ಕ್ರೀಡೆಗೆ ಹೊಸ ಮೆರುಗು ನೀಡುವತ್ತ ಚಿತ್ತ ಹರಿಸಿದೆ. ಎಎನ್‌ಎಕೆಯು ಕ್ರೀಡೆಯ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

‘ಚಿತ್ರದುರ್ಗ, ಮೈಸೂರು, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಮಂಗಳೂರು ಸೇರಿ ಒಟ್ಟು 15 ಜಿಲ್ಲೆಗಳಲ್ಲಿ ಮೊದಲಿನಿಂದಲೂ ನೆಟ್‌ಬಾಲ್‌ ಬೆಳವಣಿಗೆಗೆ ಪೂರಕ ವಾತಾವರಣ ಇದೆ. ಉತ್ತರ ಕರ್ನಾಟಕದ ಭಾಗಗಳಲ್ಲೂ ಈಗ ಉತ್ತಮ ಸ್ಪಂದನೆ ಸಿಗುತ್ತಿದೆ. ಅಖಿಲ ಭಾರತ ಅಂತರ ವಾರ್ಸಿಟಿ ಟೂರ್ನಿಗಳಲ್ಲಿ ವಿಜಯಪುರ, ಧಾರವಾಡ, ಬೆಳಗಾವಿಯ ತಂಡಗಳು ಭಾಗವಹಿಸುತ್ತಿವೆ. ಅಲ್ಲಿ ಕ್ರೀಡೆಯ ಬೇರುಗಳನ್ನು ಇನ್ನಷ್ಟು ಆಳಕ್ಕಿಳಿಸಬೇಕು. ಹೀಗಾಗಿ ಬೆಂಗಳೂರಿನಿಂದ ನುರಿತ ಕೋಚ್‌ಗಳನ್ನು ಕಳುಹಿಸಿ ಸ್ಥಳೀಯ ಮಕ್ಕಳಿಗೆ ವಿಶೇಷ ತರಬೇತಿ ಕೊಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಎಎನ್‌ಎಕೆ ಪ್ರಧಾನ ಕಾರ್ಯದರ್ಶಿ ಸಿ.ಗಿರೀಶ್‌ ಹೇಳುತ್ತಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ನೆಟ್‌ಬಾಲ್‌ ಕ್ರೀಡೆಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಬೇಕೆಂಬ ಗುರಿ ಇಟ್ಟುಕೊಂಡು ಆ ದಿಶೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಒಂದೂವರೆ ವರ್ಷದಲ್ಲಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ರಾಜ್ಯಮಟ್ಟದ ಟೂರ್ನಿಗಳಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದು ಇದಕ್ಕೆ ನಿದರ್ಶನ. ಅಖಿಲ ಭಾರತ ಅಂತರ ವಾರ್ಸಿಟಿ ಟೂರ್ನಿಗಳಲ್ಲಿ ಆಡುವ 50ರಿಂದ 55 ತಂಡಗಳ ಪೈಕಿ ನಮ್ಮ ರಾಜ್ಯದಿಂದಲೇ ಒಟ್ಟು 12 ತಂಡಗಳು ಭಾಗವಹಿಸುತ್ತಿವೆ ಎಂಬುದು ಹೆಮ್ಮೆಯ ಸಂಗತಿ’ ಎಂದು ಸಂತಸ ವ್ಯಕ್ತಪಡಿಸಿದರು.

ಕ್ರೀಡೆಯ ಹಿನ್ನಡೆಗೆ ಏನು ಕಾರಣ..
ನೆಟ್‌ಬಾಲ್‌ನಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ ಬಹುತೇಕರು ಈ ಕ್ರೀಡೆಯಿಂದ ವಿಮುಖರಾಗುತ್ತಿದ್ದಾರೆ. ಗಿರೀಶ್‌ ಕೂಡಾ ಈ ಮಾತನ್ನು ಒಪ್ಪುತ್ತಾರೆ.

‘ಎತ್ತರದ ಸಾಧನೆ ಮಾಡಿದರೂ ತಮ್ಮನ್ನು ಯಾರೂ ಗುರುತಿಸುವುದಿಲ್ಲ. ಕ್ರೀಡಾ ಕೋಟಾದಡಿ ಸರ್ಕಾರಿ ಉದ್ಯೋಗವೂ ಸಿಗುವುದಿಲ್ಲ ಎಂಬ ಭಾವನೆ ಕ್ರೀಡಾಪಟುಗಳಲ್ಲಿದೆ. ಇದು ಕ್ರೀಡೆಯ ಬೆಳವಣಿಗೆಗೆ ತೊಡಕಾಗಿ ಪರಿಣಮಿಸಿದೆ. ಸರ್ಕಾರವು ಉದ್ಯೋಗವಕಾಶ ಕಲ್ಪಿಸಿದರೆ ಈ ಸಮಸ್ಯೆ ಖಂಡಿತಾ ಬಗೆಹರಿಯುತ್ತದೆ. ಆಗ ಯುವಕರು ನೆಟ್‌ಬಾಲ್‌ ಅನ್ನು ವೃತ್ತಿಪರವಾಗಿ ಸ್ವೀಕರಿಸಲು ಮುಂದೆ ಬರುತ್ತಾರೆ. ಹಾಗಾದಲ್ಲಿ ಕರ್ನಾಟಕವನ್ನು ನೆಟ್‌ಬಾಲ್‌ ಕ್ರೀಡೆಯ ಶಕ್ತಿಕೇಂದ್ರವಾಗಿ ಬೆಳೆಸಬೇಕೆಂಬ ನಮ್ಮ ಆಶಯವೂ ಈಡೇರುತ್ತದೆ. ಹರಿಯಾಣ, ಪಂಜಾಬ್‌, ದೆಹಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಗೆದ್ದವರಿಗೆ ಪೊಲೀಸ್‌ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕೆಲಸ ನೀಡಲಾಗುತ್ತಿದೆ. ನಮ್ಮಲ್ಲೂ ಆ ಬಗೆಯ ಪ್ರವೃತ್ತಿ ಬೆಳೆಯಬೇಕು. ಈ ಸಂಬಂಧ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಿದ್ದು, ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮಾತನಾಡುತ್ತೇವೆ’ ಎಂದು ಗಿರೀಶ್‌ ಹೇಳಿದರು.

‘ಬೇರುಮಟ್ಟದಿಂದಲೇ ಕ್ರೀಡೆಯನ್ನು ಬಲವರ್ಧನೆ ಮಾಡುವುದಕ್ಕೆ ಆದ್ಯತೆ ನೀಡಿದ್ದೇವೆ. ಪೋಷಕರು ಮತ್ತು ಮಕ್ಕಳ ಭಾಗವಹಿಸುವಿಕೆಯಿಂದ ಮಾತ್ರ ಈ ಗುರಿ ಈಡೇರಲಿದೆ ಎಂಬುದನ್ನೂ ಅರಿತಿದ್ದೇವೆ. ಮಕ್ಕಳು ಮತ್ತು ಪೋಷಕರಲ್ಲಿ ಒಲವು ಮೂಡಿಸುವ ಉದ್ದೇಶದಿಂದ ಈ ವರ್ಷ ರಾಜ್ಯದ ಎಲ್ಲಾ ಭಾಗಗಳಲ್ಲೂ ಬೇಸಿಗೆ ಶಿಬಿರಗಳನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ. ಜೊತೆಗೆ ಅಂತರ ಶಾಲೆ ಮತ್ತು ಕಾಲೇಜು ಟೂರ್ನಿಗಳನ್ನು ಆಯೋಜಿಸುವತ್ತಲೂ ಚಿತ್ತ ನೆಟ್ಟಿದ್ದೇವೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೆಚ್ಚೆಚ್ಚು ಟೂರ್ನಿಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ, ದಕ್ಷಿಣ ವಲಯ ಮತ್ತು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳನ್ನೂ ನಡೆಸಲು ಪ್ರಯತ್ನಿಸುತ್ತಿದ್ದೇವೆ’ ಎಂದರು.

ಕೇರಳ, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ನೆಟ್‌ಬಾಲ್‌ಗಾಗಿಯೇ ವಿಶೇಷ ಕ್ರೀಡಾ ಹಾಸ್ಟೆಲ್‌ಗಳಿವೆ. ಅದೇ ಮಾದರಿಯಲ್ಲಿ ನಮ್ಮಲ್ಲೂ ಕ್ರೀಡಾ ಹಾಸ್ಟೆಲ್‌ಗಳು ತಲೆ ಎತ್ತಬೇಕು. ಜೊತೆಗೆ ನುರಿತ ಕೋಚ್‌ಗಳನ್ನು ನೇಮಿಸಬೇಕು. ಇದಕ್ಕಾಗಿ ಸರ್ಕಾರ ಇಚ್ಛಾಶಕ್ತಿ ತೋರಬೇಕು ಎಂಬುದು ನೆಟ್‌ಬಾಲ್‌ ಪ್ರಿಯರ ಒತ್ತಾಯ.

ಏನಿದು ನೆಟ್‌ಬಾಲ್‌...
1890ರಲ್ಲಿ ಇಂಗ್ಲೆಂಡ್‌ನಲ್ಲಿ ಈ ಕ್ರೀಡೆಯನ್ನು ಪರಿಚಯಿಸಲಾಯಿತು.ಇದು 100 ಅಡಿ ಉದ್ದ, 50 ಅಡಿ ಅಗಲವಿರುವ ಅಂಗಳದಲ್ಲಿ ಆಡುವ ಆಟ. ತಂಡವೊಂದರಲ್ಲಿ ಒಟ್ಟು 12 ಮಂದಿ ಇರುತ್ತಾರೆ. ಈ ಪೈಕಿ ಏಳು ಜನ ಆಡುವ ಬಳಗದಲ್ಲಿರುತ್ತಾರೆ. ಒಬ್ಬೊಬ್ಬರು ಒಂದೊಂದು ಸ್ಥಾನದಲ್ಲಿ (ಗೋಲ್ ಶೂಟರ್‌, ಗೋಲ್‌ ಅಟ್ಯಾಕರ್‌, ವಿಂಗ್‌ ಅಟ್ಯಾಕರ್‌, ಸೆಂಟರ್‌, ವಿಂಗ್‌ ಡಿಫೆನ್ಸ್‌, ಗೋಲ್‌ ಡಿಫೆನ್ಸ್‌ ಮತ್ತು ಗೋಲ್ ಕೀಪರ್‌) ಆಡುತ್ತಾರೆ. ಅಟ್ಯಾಕ್‌ ಮಾಡುವವರು, ಡಿಫೆನ್ಸ್‌ ಆವರಣಕ್ಕೆ ಬರುವಂತಿಲ್ಲ. ಡಿಫೆನ್ಸ್‌ ಮಾಡುವವರು ಅಟ್ಯಾಕರ್‌ಗಳ ಆವರಣ ಪ್ರವೇಶಿಸುವಂತಿಲ್ಲ.ಗೋಲ್‌ ಶೂಟರ್‌ ಮತ್ತು ಗೋಲ್‌ ಅಟ್ಯಾಕರ್‌ಗಳು ಮಾತ್ರ ಗೋಲು ಗಳಿಸಬೇಕು. ಒಬ್ಬ ಆಟಗಾರ ತನ್ನ ಕೈ ಸೇರಿದ ಚೆಂಡನ್ನು ಮತ್ತೊಬ್ಬನಿಗೆ ಕೇವಲ ಮೂರು ಸೆಕೆಂಡುಗಳ ಒಳಗೆ ವರ್ಗಾಯಿಸಬೇಕು. ಬ್ಯಾಸ್ಕೆಟ್‌ಬಾಲ್ ರೀತಿ ಚೆಂಡನ್ನು ಡ್ರಿಬಲಿಂಗ್‌ ಮಾಡಲು ಈ ಆಟದಲ್ಲಿ ಅವಕಾಶ ಇರುವುದಿಲ್ಲ. ರಿಂಗ್‌ ಒಳಗೆ (ಬ್ಯಾಸ್ಕೆಟ್‌) ಚೆಂಡನ್ನು ಶೂಟ್‌ ಮಾಡಬೇಕು. ಎರಡೂ ತಂಡಗಳ ಅಂಗಣಗಳಲ್ಲೂ ‘ಡಿ’ ಏರಿಯಾ’ ಇರುತ್ತದೆ. ಗೋಲ್‌ ಶೂಟರ್‌ ಮತ್ತು ಗೋಲ್‌ ಅಟ್ಯಾಕರ್‌ ‘ಡಿ’ ಏರಿಯಾಕ್ಕೆ ಹೋಗಿಯೇ ‘ಶೂಟ್‌’ ಮಾಡಬೇಕು. ಈ ಏರಿಯಾದಲ್ಲಿ ಎಷ್ಟೇ ದೂರದಿಂದ ಚೆಂಡನ್ನು ಶೂಟ್‌ ಮಾಡಿದರೂ ಒಂದೇ ಪಾಯಿಂಟ್ಸ್‌ ಸಿಗುತ್ತದೆ. ಆಟಗಾರನೊಬ್ಬನ ಬಳಿ ಚೆಂಡು ಇದ್ದರೆ ಎದುರಾಳಿ ಆಟಗಾರ ಆತನಿಂದ ಮೂರು ಅಡಿ ದೂರ ನಿಂತು ಚೆಂಡನ್ನು ತಡೆಯುವ ಪ್ರಯತ್ನ ಮಾಡಬೇಕು. ಹತ್ತಿರ ಹೋಗಿ ಚೆಂಡನ್ನು ಕಸಿಯುವುದು, ತಳ್ಳುವುದು ಮತ್ತು ಬೀಳಿಸುವಂತಿಲ್ಲ. ಹೀಗಾಗಿಯೇ ಇದನ್ನು ‘ಇಂಜುರಿ ಲೆಸ್‌’, ‘ಕಾಂಟ್ಯಾಕ್ಟ್‌ ಲೆಸ್‌’ ಕ್ರೀಡೆ ಎಂದು ಕರೆಯಲಾಗುತ್ತದೆ.

15 ನಿಮಿಷಗಳ ನಾಲ್ಕು ಕ್ವಾರ್ಟರ್‌ನ ಈ ಆಟವು ಸೆಂಟರ್‌ ಪಾಸ್‌ನಿಂದ ಶುರುವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT