ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾಗೆ ನೆದರ್ಲೆಂಡ್ಸ್‌ ಆಘಾತ

ಕೊನೆಯಲ್ಲಿ ತಿರುಗೇಟು ನೀಡಲು ಪ್ರಯತ್ನಿಸಿದ ಚಾಂಪಿಯನ್ನರು; ಸಡನ್ ಡೆತ್‌ನಲ್ಲಿ ಗೆದ್ದ ಡಚ್ಚರು
Last Updated 15 ಡಿಸೆಂಬರ್ 2018, 18:30 IST
ಅಕ್ಷರ ಗಾತ್ರ

ಭುವನೇಶ್ವರ: ಪಂದ್ಯದ ಕೊನೆಯಲ್ಲಿ ತಿರುಗೇಟು ನೀಡಿದರೂ ಹಾಲಿ ಚಾಂಪಿಯನ್ನರ ಹ್ಯಾಟ್ರಿಕ್ ಪ್ರಶಸ್ತಿಯ ಆಸೆ ಈಡೇರಲಿಲ್ಲ. ರ‍್ಯಾಂಕಿಂಗ್‌ನಲ್ಲಿ ಒಂದನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಕನಸನ್ನು ಭಗ್ನಗೊಳಿಸಿದ ನಾಲ್ಕನೇ ಕ್ರಮಾಂಕದ ನೆದರ್ಲೆಂಡ್ಸ್‌ ತಂಡ ವಿಶ್ವಕಪ್ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸಿತು.

ನಿಗದಿತ ಅವಧಿಯಲ್ಲಿ ತಂಡಗಳು 2–2ರ ಸಮಬಲ ಸಾಧಿಸಿದ್ದವು. ಹೀಗಾಗಿ ಫಲಿತಾಂಶಕ್ಕಾಗಿ ಶೂಟ್ ಆಫ್‌ ಮೊರೆ ಹೋಗಲಾಯಿತು. ಅಲ್ಲೂ ಟೈ ಆದ ಕಾರಣ ಸಡನ್ ಡೆತ್ ಮೂಲಕ ವಿಜಯಿ ತಂಡವನ್ನು ನಿರ್ಣಯಿಸಲಾಯಿತು. ನೆದರ್ಲೆಂಡ್ಸ್‌ 4–3ರಿಂದ ಗೆದ್ದಿತು. ಈ ಮೂಲಕ ಕಳೆದ ಬಾರಿ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಪ್ರತೀಕಾರ ತೀರಿಸಿಕೊಂಡಿತು.

ಕಳಿಂಗ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯ ಆರಂಭದಿಂದಲೇ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಒಂಬತ್ತು ಮತ್ತು 20ನೇ ನಿಮಿಷಗಳಲ್ಲಿ ಕ್ರಮವಾಗಿ ಗ್ಲೆನ್‌ ಶೂರ್‌ಮನ್‌ ಮತ್ತು ಸೀವ್‌ ವ್ಯಾನ್ ಆಸ್ ಗಳಿಸಿದ ಗೋಲುಗಳ ಮೂಲಕ ನೆದರ್ಲೆಂಡ್ಸ್ ಮುನ್ನಡೆ ಸಾಧಿಸಿತ್ತು. ಈ ಮುನ್ನಡೆಯನ್ನು 45ನೇ ನಿಮಿಷಗಳ ವರೆಗೂ ಕಾಪಾಡಿಕೊಂಡ ತಂಡ ಸುಲಭ ಜಯದತ್ತ ಹೆಜ್ಜೆ ಹಾಕಿತ್ತು. ಆದರೆ ಛಲ ಬಿಡದ ಆಸ್ಟ್ರೇಲಿಯಾ ಕೊನೆಯಲ್ಲಿ ತಿರುಗೇಟು ನಿಡಿತು.

45ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಟಿಮ್ ಹಾವರ್ಡ್‌ ಗೋಲಾಗಿ ಪರಿವರ್ತಿಸಿದರು. ಪಂದ್ಯದ ಕೊನೆಯ ನಿಮಿಷದಲ್ಲಿ ಆಸ್ಟ್ರೇಲಿಯಾದ ಎಡಲ್‌ ಒಕೆಂಡನ್‌ ಗಳಿಸಿದ ಗೋಲು ನೆದರ್ಲೆಂಡ್ಸ್‌ಗೆ ಮುಳುವಾಯಿತು.

ಶೂಟ್‌ ಆಫ್‌ನಲ್ಲಿ ಆಸ್ಟ್ರೇಲಿಯಾ ಪರ ಡ್ಯಾನಿಯಲ್‌ ಬೀಲ್‌, ಟಾಮ್‌ ಕ್ರೇಗ್‌ ಮತ್ತು ಜೇಕ್‌ ವೆಟ್ಟಂ ಗೋಲು ಗಳಿಸಿದರೆ, ನೆದರ್ಲೆಂಡ್ಸ್‌ಗೆ ಜೆರಾನ್ ಹೆಟ್ಸ್‌ಬರ್ಗ್‌, ವ್ಯಾನ್‌ ಆಸ್‌ ಮತ್ತು ವ್ಯಾನ್‌ ಡಾಮ್‌ ಗೋಲು ತಂದಿತ್ತರು.

ಸಡನ್ ಡೆ‌ತ್‌ನಲ್ಲಿ ಹಟ್ಸ್‌ಬರ್ಗರ್‌ ಅವರು ನೆದರ್ಲೆಂಡ್ಸ್ ಪರ ಚೆಂಡನ್ನು ಗುರಿ ಮುಟ್ಟಿಸಿದರು. ಬೀಲ್‌ ಅವರ ಪ್ರಯತ್ನವನ್ನು ತಡೆದು ಗೋಲ್ ಕೀಪರ್ ಪಿರ್ಮಿನ್ ಬ್ಲಾಕ್‌ ನೆದರ್ಲೆಂಡ್ಸ್‌ಗೆ ಜಯ ತಂದುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT