ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಯುಪಿ ಯೋಧಾಗೆ ನಿತೇಶ್ ನಾಯಕತ್ವ

Last Updated 16 ಡಿಸೆಂಬರ್ 2021, 13:36 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನ ಪಾಯಿಂಟ್ ಗಳಿಕೆಯಲ್ಲಿ ಶತಕ ದಾಟಿದ ಮೊದಲ ಡಿಫೆಂಡರ್ ಎಂಬ ಹೆಗ್ಗಳಿಕೆ ಹೊಂದಿರುವ ನಿತೇಶ್ ಕುಮಾರ್ ಅವರು ಲೀಗ್‌ನ ಎಂಟನೇ ಆವೃತ್ತಿಯಲ್ಲೂ ಯು.ಪಿ.ಯೋಧಾ ತಂಡವನ್ನು ಮುನ್ನಡೆಸಲಿದ್ದಾರೆ.

ಜಿ.ಎಂ.ಆರ್ ಗ್ರೂಪ್‌ ಮಾಲೀಕತ್ವದ ಯು.ಪಿ.ಯೋಧಾ ಫ್ರಾಂಚೈಸ್ ತಂಡದ ನಾಯಕನನ್ನು ಗುರುವಾರ ಆಯ್ಕೆ ಮಾಡಿದೆ. ಕಳೆದ ಬಾರಿ ನಿತೇಶ್ ಅವರು ಮೊದಲ ಬಾರಿ ನಾಯಕನ ಸ್ಥಾನ ವಹಿಸಿಕೊಂಡಿದ್ದರು.

’ಮಾಸ್ಟರ್ ಆಫ್‌ ಆ್ಯಂಕಲ್ ಹೋಲ್ಡ್‌’ ಎಂದು ಹೆಸರು ಗಳಿಸಿರುವ ನಿತೇಶ್ 67 ಪಂದ್ಯಗಳಲ್ಲಿ ಒಟ್ಟು 224 ಪಾಯಿಂಟ್ ಕಲೆ ಹಾಕಿದ್ದಾರೆ. ಈ ಮೂಲಕ ಪ್ರೊ ಕಬಡ್ಡಿ ಲೀಗ್‌ನ ಅಪರೂಪದ ಆಟಗಾರ ಎನಿಸಿಕೊಂಡಿದ್ದಾರೆ.

‘ತಂಡವನ್ನು ಮುನ್ನಡೆಸಲು ಅವಕಾಶ ನೀಡಿರುವುದು ಅತ್ಯಂತ ಖುಷಿ ತಂದಿದೆ. ಇದರಿಂದ ಜವಾಬ್ದಾರಿ ಹೆಚ್ಚಾಗಿದೆ. ತಂಡವು ಈ ವರೆಗೆ ಬಲಿಷ್ಠ ರಕ್ಷಣಾ ವಿಭಾಗಕ್ಕೆ ಹೆಸರುವಾಸಿಯಾಗಿತ್ತು. ಈ ಬಾರಿ ರೈಡಿಂಗ್ ವಿಭಾಗದಲ್ಲೂ ಬಲ ಪಡೆದುಕೊಂಡಿದೆ. ಪ್ರದೀಪ್ ನರ್ವಾಲ್‌, ಜೇಮ್ಸ್‌ ಮುಂತಾದವರು ತಂಡದ ಭರವಸೆ ಹೆಚ್ಚಿಸಿದ್ದಾರೆ’ ಎಂದು ನಿತೇಶ್ ಹೇಳಿದರು.

ಹಾಲಿ ಚಾಂಪಿಯನ್‌ ಬೆಂಗಾಲ್ ವಾರಿಯರ್ಸ್‌ ಎದುರಿನ ಪಂದ್ಯದ ಮೂಲಕ ಉದ್ಘಾಟನಾ ದಿನದಂದು ಯು.ಪಿ.ಯೋಧಾ ಈ ಬಾರಿಯ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ರಾತ್ರಿ 9.30ಕ್ಕೆ ನಡೆಯಲಿದೆ.

ಕೋವಿಡ್‌ನಿಂದಾಗಿ ಎರಡು ವರ್ಷ ನಡೆಯದೇ ಇದ್ದ ಲೀಗ್‌ನ ಎಂಟನೇ ಆವೃತ್ತಿ ಇದೇ 22ರಂದು ಆರಂಭವಾಗಲಿದೆ. ಸುರಕ್ಷತೆಗೆ ಒತ್ತು ನೀಡಿ ಒಂದೇ ಸ್ಥಳದಲ್ಲಿ ಎಲ್ಲ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ನಗರದ ವೈಟ್‌ಫೀಲ್ಡ್‌ನ ಹೋಟೆಲ್ ಶೆರಟಾನ್‌ನ ಸಭಾಂಗಣದಲ್ಲಿ ‘ಮ್ಯಾಟ್’ ಸಿದ್ಧಪಡಿಸಲಾಗಿದೆ. ತಂಡಗಳು ಈಗಾಗಲೇ ಇಲ್ಲಿಗೆ ಬಂದಿದ್ದು ಆಟಗಾರರು ಬಯೊಬಬಲ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT