ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತ ವ್ಯಕ್ತಿಗೆ ಕೊನೆಗೂ ಸಿಕ್ಕಿತು ನ್ಯಾಯ

25 ವರ್ಷಗಳ ಹಿಂದಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ
Last Updated 23 ಏಪ್ರಿಲ್ 2018, 19:59 IST
ಅಕ್ಷರ ಗಾತ್ರ

ನವದೆಹಲಿ : 25 ವರ್ಷಗಳ ಹಿಂದಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮೃತ ವ್ಯಕ್ತಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ತಂದೆಯ ಮರಣಾನಂತರ, ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಅವರ ಪುತ್ರ ದೆಹಲಿ ಹೈಕೋರ್ಟ್ ಮೊರೆ ಹೋಗಿ, ನ್ಯಾಯ ದಕ್ಕಿಸಿಕೊಂಡಿದ್ದಾರೆ.

1993ರಲ್ಲಿ ಸೋದರ ಸಂಬಂಧಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನು ಕೋರ್ಟ್ ದೋಷಮುಕ್ತಗೊಳಿಸಿದೆ. ಅಲ್ಲದೇ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಕಾಯ್ದಿರಿಸಿದೆ.

2016ರಲ್ಲಿ ಮೃತಪಟ್ಟಿರುವ ವ್ಯಕ್ತಿಯ ವಿರುದ್ಧದ ಆರೋಪ ಸಾಬೀತಾಗದ ಕಾರಣ ಆತನನ್ನು ದೋಷಮುಕ್ತಗೊಳಿಸಲಾಗಿದೆ. ಶೇ 100ರಷ್ಟು ಸುಟ್ಟ ಗಾಯದಿಂದ ಮಹಿಳೆ ಮೃತಪಟ್ಟಿದ್ದನ್ನು ಆಧರಿಸಿ ಆರೋಪ ಹೊರಿಸುವುದು ಸರಿಯಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ದೆಹಲಿ ಹೈಕೋರ್ಟ್ ನೀಡಿದ ಈ ತೀರ್ಪು ಅತನ ಕುಟುಂಬಕ್ಕೆ ಹೊಸ ಚೈತನ್ಯ ನೀಡಿದೆ. ಕೆಲಸದಿಂದ ವಜಾಗೊಳಿಸಿದ್ದ ಆದೇಶವನ್ನು ಹಿಂಪಡೆದು, ಆತನಿಗೆ ಸಲ್ಲಬೇಕಾದ ವೇತನ ಹಾಗೂ ಬಾಕಿ ಮೊತ್ತ ಪಾವತಿಸುವಂತೆ ಸರ್ಕಾರಿ ಸ್ವಾಮ್ಯದ ಎಂಜಿನಿಯರ್ ಇಂಡಿಯಾ ಲಿಮಿಟೆಡ್ ಸಂಸ್ಥೆಗೆ ಕೋರ್ಟ್ ಸೂಚಿಸಿದೆ.

ಸೂಕ್ತ ವಿಚಾರಣೆ ನಡೆಸುವಲ್ಲಿ ಪೊಲೀಸರು ಹಾಗೂ ಅಪರಾಧವನ್ನು ದೃಢೀಕರಿಸುವಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ವಿಫಲರಾಗಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಐ.ಎಸ್. ಮೆಹ್ತಾ ಹಾಗೂ ಎಸ್. ಮುರಳೀಧರ್ ಅವರಿದ್ದ ಪೀಠ ಹೇಳಿತು.

ಮಹಿಳೆಯು ಸಾವಿಗೀಡಾಗುವ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದನ್ನು ವಿಧಿವಿಜ್ಞಾನ ಪ್ರಯೋಗಾಲಯವು ದೃಢಪಡಿಸಿಲ್ಲ. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತೆಯು ಆತ್ಮಹತ್ಯೆಗೆ ಯತ್ನಿಸಿರಬಹುದಾದ ಸಾಧ್ಯತೆಯನ್ನು ಪ್ರಾಸಿಕ್ಯೂಷನ್ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಕೋರ್ಟ್ ಹೇಳಿದೆ.

ಹೆಂಡತಿಯ ಮೇಲೆ ಆಕೆಯ ಭಾವ ಅತ್ಯಾಚಾರ ಎಸಗಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ ಎಂದು ಸಂತ್ರಸ್ತೆಯ ಪತಿ ಪೊಲೀಸರಿಗೆ ದೂರು ನೀಡಿದ್ದ. ಹೀಗಾಗಿ ಮಹಿಳೆಯ ಭಾವನ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಲಾಗಿತ್ತು.
**
ಪ್ರಕರಣಕ್ಕೆ  ಮರುಜೀವ 
2002ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅರ್ಜಿ ಸಲ್ಲಿಸಿದ್ದ ಆತ 2016ರಲ್ಲಿ ಮೃತಪಟ್ಟಿದ್ದ. 2018ರ ಜನವರಿಯಲ್ಲಿ ಈ ವಿಚಾರ ಕೋರ್ಟ್ ಗಮನಕ್ಕೆ ಬಂದಿತು. ಆತನ ಪರವಾಗಿ ವಿಚಾರಣೆಗೆ ಯಾರೂ ಹಾಜರಾಗದ್ದನ್ನು ಗಮನಿಸಿದ ಹೈಕೋರ್ಟ್, ಪ್ರಕರಣವನ್ನು ವಿಲೇವಾರಿ ಮಾಡಿತ್ತು.

ಆದರೆ ವಿಚಾರಣೆಯನ್ನು ಪುನರ್‌ ಆರಂಭಿಸುವಂತೆ ಕೋರಿ ಆತನ ಪುತ್ರ ಕೋರ್ಟ್ ಮೆಟ್ಟಿಲೇರಿದ ಬಳಿಕ ಪ್ರಕರಣಕ್ಕೆ ಮರುಜೀವ ಬಂದಿತು. ‘ತಮ್ಮ ತಾಯಿಗೆ ವಯಸ್ಸಾಗಿದ್ದು, ಮಾನಸಿಕವಾಗಿ ಅವರು ಆಘಾತಕ್ಕೊಳಗಾಗಿದ್ದಾರೆ. ನಾವು ಒಡಹುಟ್ಟಿದವರು ಆರು ಜನರಿದ್ದೇವೆ. ವಿಚಾರಣಾ ನ್ಯಾಯಾಲಯದ ತೀರ್ಪು ಆಧರಿಸಿ ತಂದೆಗೆ ಬರಬೇಕಾದ ವೇತನ ಹಾಗೂ ಬಾಕಿಯನ್ನು ತಡೆಹಿಡಿಯಲಾಗಿದ್ದು, ಅದನ್ನು ಕೊಡಿಸಿ’ ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನು ಕೋರ್ಟ್ ಮಾನ್ಯ ಮಾಡಿತ್ತು.
** 
ಅಂದು ಆಗಿದ್ದೇನು? 
‘ತೀವ್ರ ಸುಟ್ಟಗಾಯಗಳಾಗಿದ್ದ ಮಹಿಳೆಯು ಪೊಲೀಸರ ಎದುರು ಹೇಳಿಕೆ ನೀಡುವಷ್ಟು ಸಮರ್ಥಳಾಗಿದ್ದಳೇ’ ಎಂಬ ಬಗ್ಗೆ ಕೋರ್ಟ್ ಅನುಮಾನ ವ್ಯಕ್ತಪಡಿಸಿತು.

‘ಮಗನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಮನೆಗೆ ಬರುವಂತೆ ನನ್ನನ್ನು ಆತ ಕರೆಸಿಕೊಂಡಿದ್ದ. ಆದರೆ ಮಗು ಮನೆಯಲ್ಲಿ ಇರಲಿಲ್ಲ. ಮನೆಯ ಬಾಗಿಲನ್ನು ಬಂದ್ ಮಾಡಿದ ಆತ, ನನ್ನ ಮೇಲೆ ಅತ್ಯಾಚಾರ ಎಸಗಿದ. ನಂತರ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ’ ಎಂದು ಗಾಯಾಳು ಮಹಿಳೆಯು ಪೊಲೀಸರ ಎದುರು ಹೇಳಿಕೆ ನೀಡಿದ್ದಳು.

ಒಳಗಿನಿಂದ ಬಾಗಿಲು ಬಂದ್ ಮಾಡಲಾಗಿತ್ತು ಮತ್ತು ಬೆಂಕಿ ನಂದಿಸಲು ನೀರು ಎರಚಲಾಗಿತ್ತು ಎಂಬ ಹೇಳಿಕೆಯನ್ನು ಕೋರ್ಟ್ ಗಮನಿಸಿತು. ಆದರೆ ಆರೋಪಿಯು ಸ್ಥಳದಲ್ಲಿ ಇದ್ದ ಎಂಬುದನ್ನು ಖಚಿತಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ತಿಳಿಸಿತು. ಘಟನಾ ಸ್ಥಳದಲ್ಲಿ ಸೀಮೆಎಣ್ಣೆಯ ಡಬ್ಬಿಯನ್ನು ಪೊಲೀಸರು ಪತ್ತೆ ಹಚ್ಚಿದ್ದರೂ, ಮಹಿಳೆಯ ಮರಣೋತ್ತರ ಪರೀಕ್ಷೆ ವೇಳೆ ಆಕೆಯ ತಲೆ ಹಾಗೂ ಕೂದಲಿನಲ್ಲಿ ಸೀಮೆ ಎಣ್ಣೆಯ ವಾಸನೆಯು ಕಂಡುಬಂದಿಲ್ಲ ಎಂದು ಕೋರ್ಟ್ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT