ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ ಶೂಟರ್‌ಗಳ ತರಬೇತಿ ಶಿಬಿರ ಮುಂದೂಡಿದ ಎನ್ಆರ್‌ಎಐ

Last Updated 31 ಜುಲೈ 2020, 7:17 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಶೂಟರ್‌ಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕಾಗಿದ್ದ ಶಿಬಿರವನ್ನು ರಾಷ್ಟ್ರೀಯ ಶೂಟಿಂಗ್ ಫೆಡರೇಷನ್ (ನ್ಯಾಷನಲ್ ರೈಫಲ್ಸ್ ಅಸೋಸಿಯೇಷನ್ ಆಫ್‌ ಇಂಡಿಯಾ–ಎನ್‌ಆರ್‌ಎಐ) ಮುಂದೂಡಿದೆ.

ಇಲ್ಲಿನ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಜೂನ್ ಒಂದರಿಂದ ಶಿಬಿರ ಆಯೋಜಿಸಲು ಫೆಡರೇಷನ್ ನಿರ್ಧರಿಸಿತ್ತು. ಇದಕ್ಕೆ ಹಾಜರಾತಿ ಕಡ್ಡಾಯ ಎಂದು ಕೆಲವು ದಿನಗಳ ಹಿಂದೆಯೇ ತಿಳಿಸಿತ್ತು.

ಇಲ್ಲಿನ ಮಹಿಳಾ ಕೋಚ್ ಒಬ್ಬರಿಗೆ ಕೋವಿಡ್–19 ಇರುವುದು ಗುರುವಾರ ದೃಢಪಟ್ಟಿತ್ತು. ಆದರೂ ತರಬೇತಿ ಶಿಬಿರ ನಿಗದಿತ ದಿನದಂದೇ ಆರಂಭವಾಗಲಿದೆ ಎಂದು ಫೆಡರೇಷನ್ ತಿಳಿಸಿತ್ತು. ಆದರೆ ಶುಕ್ರವಾರ ಬೆಳಿಗ್ಗೆ ಏಕಾಏಕಿ ಶಿಬಿರ ಮುಂದೂಡುವ ನಿರ್ಧಾರ ಪ್ರಕಟಸಿದೆ. ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದರಿಂದ ಶಿಬಿರ ಆಯೋಜಿಸುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದೆ.

‘ಸದ್ಯ ಶಿಬಿರವನ್ನು ಮುಂದೂಡಲು ನಿರ್ಧರಿಸಲಾಗಿದೆ. ಬದಲಿ ವ್ಯವಸ್ಥೆಯ ಹುಡುಕಾಟದಲ್ಲಿದ್ದು ಮುಂದಿನ ಒಂದು ವಾರದ ಒಳಗೆ ಸ್ಪಷ್ಟ ಚಿತ್ರಣವನ್ನು ನೀಡಲಾಗುವುದು’ ಎಂದು ಎನ್‌ಆರ್‌ಎಐ ಕಾರ್ಯದರ್ಶಿ ರಾಜೀವ್ ಭಾಟಿಯಾ ತಿಳಿಸಿದರು.

ಕರ್ಣಿ ಸಿಂಗ್ ರೇಂಜ್‌ ಅನ್ನು ಜುಲೈ ಎಂಟರಂದು ತರಬೇತಿಗೆ ಮುಕ್ತಗೊಳಿಸಲಾಗಿತ್ತು. ಸದ್ಯ ಕೆಲವು ಶೂಟರ್‌ಗಳು ಅಭ್ಯಾಸ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆಯ ಮಾರ್ಗದರ್ಶನಗಳನ್ನು ಪಾಲಿಸಿಕೊಂಡು ಅವರು ತರಬೇತಿ ಮುಂದುವರಿಸಲಿದ್ದಾರೆ. ಒಲಿಂಪಿಕ್ಸ್‌ಗೆ ತೆರಳುವವರಿಗಾಗಿ ನಡೆಸುವ ಶಿಬಿರಕ್ಕೆ ಮಾತ್ರ ತೊಂದರೆಯಾಗಿದೆ. ಪರಿಸ್ಥಿತಿ ಸುಧಾರಿಸಿದರೆ ಆಗಸ್ಟ್ ಎರಡನೇ ವಾರದಲ್ಲಿ ತರಬೇತಿ ಆರಂಭಿಸಲಾಗುವುದು ಎಂದು ಭಾಟಿಯಾ ವಿವರಿಸಿದರು.

ವಿಶ್ವಕಪ್‌ನಲ್ಲಿ ಪದಕ ಗೆದ್ದಿರುವ ಸಂಜೀವ್ ರಜಪೂತ್‌, ಮನು ಭಾಕರ್, ಅನೀಶ್ ಭಾನ್ವಾಲಾ ಮುಂತಾದವರು ಇಲ್ಲಿ ಕೆಲವು ದಿನಗಳಿಂದ ಅಭ್ಯಾಸ ಮಾಡುತ್ತಿದ್ದಾರೆ. ಅವರೊಂದಿಗೆ ಶಾರ್ಟ್‌ಗನ್ ಪಟುಗಳಾದ ಸಿರಾಜ್ ಶೇಖ್, ಮೈರಾಜ್ ಅಹಮ್ಮದ್ ಮತ್ತಿತರರೂ ಇದ್ದಾರೆ.

ದೆಹಲಿ ಮತ್ತು ಹರಿಯಾಣ ಭಾಗದ ಶೂಟರ್‌ಗಳಿಗೆ ತರಬೇತಿಗೆ ತೆರಳುವುದು ಸುಲಭವಾಗಿದ್ದರೂ ರಾಷ್ಟ್ರೀಯ ರಾಜಧಾನಿ ವಲಯದ (ಎನ್‌ಸಿಆರ್) ಹೊರಗಿನ ಕ್ರೀಡಾಪಟುಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಶೂಟಿಂಗ್ ರೇಂಜ್‌ಗೆ ತೆರಳುವುದು ಕಷ್ಟವಾಗುತ್ತಿದೆ. ಹೀಗಾಗಿಯೇಸಂಜೀವ್ ರಜಪೂತ್, ಅನೀಶ್ ಭಾನ್ವಾಲಾ ಮತ್ತು ಮನು ಭಾಕರ್ ಅವರು ಇಷ್ಟು ತುರ್ತಾಗಿ ಅಭ್ಯಾಸ ಆರಂಭಿಸುವ ಅಗತ್ಯ ಏನಿತ್ತು ಎಂದು ಕೆಲವು ಶೂಟರ್‌ಗಳು ಮತ್ತು ಕೋಚ್‌ಗಳು ಪ್ರಶ್ನಿಸಿದ್ದಾರೆ. ಭಾಕರ್ ಮತ್ತು ರಜಪೂತ್ ಈಗಾಗಲೇ ಒಲಿಂಪಕ್ಸ್‌ಗೆ ಅರ್ಹತೆ ಪಡೆದಿದ್ದು ಭಾನ್ವಾಲಾ ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ ಎನ್ನಲಾಗಿದೆ. ಒಟ್ಟು 15 ಮಂದಿಯ ಒಲಿಂಪಿಕ್ಸ್ ಕೋಟಾ ಈಗಾಗಲೇ ಭರ್ತಿಯಾಗಿದೆ. ಈ 15 ಮಂದಿ ಒಳಗೊಂಡಂತೆ 34 ಮಂದಿಯ ತರಬೇತಿಗೆ ಹಾಜರಾತಿ ಕಡ್ಡಾಯಗೊಳಿಸಿ ಈ ಹಿಂದೆ ರಾಷ್ಟ್ರೀಯ ರೈಫಲ್ ಸಂಸ್ಥೆ ಆದೇಶ ಹೊರಡಿಸಿತ್ತು. ಮಾಜಿ ರಾಷ್ಟ್ರೀಯ ಶೂಟರ್ ರೋನಕ್ ಪಂಡಿತ್ ಅವರನ್ನು ಹೈ ಪರ್ಫಾರ್ಮೆನ್ಸ್ ಮ್ಯಾನೇಜರ್ ಆಗಿ ಸಂಸ್ಥೆ ನೇಮಕ ಮಾಡಿತ್ತು.

‘ಕೋವಿಡ್ ದೃಢಪಟ್ಟಿರುವುದಾಗಿ ಮಹಿಳಾ ಕೋಚ್ ತಿಳಿಸಿದ್ದಾರೆ. ಆದರೆ ಅವರು ಶೂಟಿಂಗ್ ರೇಂಜ್‌ಗೆ ತೆರಳದೇ ಇದ್ದುದರಿಂದ ಮತ್ತು ಯಾವ ಕ್ರೀಡಾಪಟು ಜೊತೆಯೂ ಸಂಪರ್ಕ ಹೊಂದಿಲ್ಲದ ಕಾರಣ ಶೂಟಿಂಗ್ ರೇಂಜ್‌ ಮುಚ್ಚುವ ಅಗತ್ಯ ಇಲ್ಲ’ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT