ಗುರುವಾರ , ಅಕ್ಟೋಬರ್ 29, 2020
22 °C

ಶೂಟಿಂಗ್‌: ಸ್ಪರ್ಧೆಯಲ್ಲಿ ಯಶಸ್ಸು ಸಿಕ್ಕಿದರೂ ಯಶಸ್ವಿನಿಯ ಬೆನ್ನುಬಿಡದ ವಿವಾದ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

shooter Yashaswini Singh Deswal

ಕೊರೊನಾ ಕಾಲದಲ್ಲಿ ಕ್ರೀಡಾ ಕೆಲವು ಕ್ರೀಡಾ ಚಟುವಟಿಕೆ ಆನ್‌ಲೈನ್ ಮೂಲಕವೇ ನಡೆಯುತ್ತಿದೆ. ಈ ಪ್ರಯೋಗದಲ್ಲಿ ಹೆಚ್ಚು ಯಶಸ್ಸು ಕಂಡಿರುವುದು ಚೆಸ್. ಶೂಟಿಂಗ್ ಸ್ಪರ್ಧೆಗಳನ್ನು ಕೂಡ ಆನ್‌ಲೈನ್ ಮೂಲಕ ನಡೆಸಲಾಗುತ್ತಿದೆ. ಕಳೆದ ವಾರಾಂತ್ಯದಲ್ಲಿ ನಡೆದ ಆನ್‌ಲೈನ್ ಶೂಟಿಂಗ್‌ನಲ್ಲಿ ಭಾರತದ ಯಶಸ್ವಿನಿ ದೇಸ್ವಾಲ್ ಚಿನ್ನ ಗೆದ್ದು ಸಂಭ್ರಮಿಸಿದರು. ಆದರೆ ಇದರ ಬೆನ್ನಲ್ಲೇ ಅವರು ವಿವಾದಕ್ಕೆ ಗುರಿಯಾಗಿದ್ದಾರೆ.

ಶೂಟರ್‌ಗಳು ಆನ್‌ಲೈನ್ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದನ್ನು ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ನಿಷೇಧಿಸಿದೆ. ಹೀಗಿದ್ದೂ ಈ ‘ಅನಧಿಕೃತ’ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ತಪ್ಪು ಎಂದು ಹೇಳಿರುವ ಸಂಸ್ಥೆ ಈ ಕುರಿತ ಎಚ್ಚರಿಕೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಹಾಕಿದ್ದು ನಿಯಮ 40(ಡಿ) ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.  

ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಯಶಸ್ವಿನಿ ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು. ಆನ್‌ಲೈನ್ ಶೂಟಿಂಗ್‌ನಲ್ಲಿ 241.7 ಸ್ಕೋರ್ ಕಲೆ ಹಾಕಿ ಮೊದಲಿಗರಾಗಿದ್ದರು. ‌

ಅನಧಿಕೃತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ರಾಷ್ಟ್ರೀಯ ತಂಡದಲ್ಲಿರುವ ಪ್ರತಿಯೊಬ್ಬರಿಗೂ ತಿಳಿಸಲಾಗಿದೆ. ಈ ಕುರಿತ ಮಾಹಿತಿಯನ್ನು ವೆಬ್‌ಸೈಟ್‌ನಲ್ಲೂ ಅಪ್‌ಲೋಡ್ ಮಾಡಲಾಗಿದೆ. ಆದರೂ ಯಶಸ್ವಿನಿ ಆನ್‌ಲೈನ್ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದು ಸರಿಯಲ್ಲ. ಅವರಿಂದ ಈ ಕುರಿತು ಸ್ಪಷ್ಟನೆ ಕೇಳಲಾಗುವುದು. ಸಮರ್ಪಕ ಉತ್ತರ ಲಭಿಸಿದರೆ ಈ ವಿವಾದ ಅಲ್ಲಿಗೆ ಮುಗಿಯಿತು ಎಂದುಕೊಳ್ಳಬಹುದು. ಅವರಿಂದ ಬರುವ ಉತ್ತರ ಸಮಾಧಾನಕರವಾಗಿಲ್ಲವಾದರೆ ಮುಂದಿನ ದಾರಿ ನೋಡಿಕೊಳ್ಳಬೇಕಾಗುತ್ತದೆ’ ಎಂದು ಶೂಟಿಂಗ್ ಸಂಸ್ಥೆ ಹೇಳಿದೆ. 

ಇದೇ ವೇಳೆ ಯಶಸ್ವಿನಿ ಅವರ ಕೋಚ್ ಟಿ.ಎಸ್.ಧಿಲಾನ್ ’ಕೊರೊನಾ ತಂದಿರುವ ಸಂಕಷ್ಟದಿಂದಾಗಿ ಮನೆಯೊಳಗೇ ’ಬಂಧಿ‘ಯಾಗಿದ್ದ ಯಶಸ್ವಿನಿಗೆ ಸ್ಪರ್ಧೆಯೊಂದರಲ್ಲಿ ಪಾಲ್ಗೊಳ್ಳುವ ಅವಶ್ಯಕತೆ ಇತ್ತು. ಆದ್ದರಿಂದ ಅವರು ಆನ್‌ಲೈನ್‌ ಶೂಟಿಂಗ್‌ನಲ್ಲಿ ಕಣಕ್ಕೆ ಇಳಿದಿದ್ದರು’ ಎಂದು ಹೇಳಿ ಶಿಷ್ಯೆಯ ಬೆನ್ನಿಗೆ ನಿಂತಿದ್ದಾರೆ. 

ಹರಿಯಾಣದ ಪಂಚಕುಲದಲ್ಲಿ ಜನಿಸಿದ ಯಶಸ್ವಿನಿ ಅವರಿಗೆ ಈಗ 23 ವರ್ಷ ವಯಸ್ಸು. 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದ ಪರಿಣಿತೆಯಾಗಿರುವ ಅವರು ಕಳೆದ ವರ್ಷ ರಿಯೊ ಡಿ ಜನೈರೊದಲ್ಲಿ ನಡೆದ ಮಹಿಳೆಯರ ಶೂಟಿಂಗ್ ವಿಶ್ವಕಪ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಮತ್ತು ಮಿಶ್ರ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು