ಒಲಿಂಪಿಕ್ಸ್: ಶೂಟಿಂಗ್ ತಂಡದೊಂದಿಗೆ ಹೆಚ್ಚುವರಿ ಕೋಚ್ ಕಳುಹಿಸಲು ಪ್ರಯತ್ನ

ನವದೆಹಲಿ: ಒಲಿಂಪಿಕ್ಸ್ ಅರ್ಹತೆ ಗಳಿಸಿರುವ ಶೂಟಿಂಗ್ ತಂಡದೊಂದಿಗೆ ಟೋಕಿಯೊಗೆ ಪ್ರಯಾಣಿಸಲು, ಅನುಮತಿ ಪಡೆದ ಏಳು ಮಂದಿಯೊಂದಿಗೆ ಇನ್ನೂ ಇಬ್ಬರು ಹೆಚ್ಚುವರಿ ತರಬೇತುದಾರರನ್ನು ಕಳುಹಿಸಲು ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಪ್ರಯತ್ನಿಸುತ್ತಿದೆ.
ಈ ನಿಟ್ಟಿನಲ್ಲಿ ಭಾರತ ಒಲಿಂಪಿಕ್ ಸಂಸ್ಥೆಯೊಂದಿಗೆ (ಐಒಎ)ಎನ್‌ಆರ್‌ಎಐ ಕಾರ್ಯನಿರತವಾಗಿದೆ. ಹೀಗಾಗಿ ತಂಡದ ನೆರವು ಸಿಬ್ಬಂದಿ ಹೆಚ್ಚಾಗುವ ಸಾಧ್ಯತೆ ಇದೆ.
ಪಿಸ್ತೂಲ್ ಹಾಗೂ ರೈಫಲ್ ವಿಭಾಗದಲ್ಲಿ ಸ್ಪರ್ಧಿಸುವ 13 ಶೂಟರ್‌ಗಳು, ಏಳು ಮಂದಿ ಕೋಚ್‌ಗಳು, ಐದು ಮಂದಿ ಫಿಸಿಯೊಥೆರಪಿಸ್ಟ್‌ಗಳು, ಇಬ್ಬರು ವಿಡಿಯೊ ಸಿಬ್ಬಂದಿ ಮೇ 11ರಂದು ಕ್ರೊವೇಷ್ಯಾದ ಜಾಗ್ರೆಬ್‌ಗೆ ತೆರಳಿದ್ದಾರೆ. ಅಲ್ಲಿ 80 ದಿನಗಳ ತರಬೇತಿ ಮತ್ತು ಸ್ಪರ್ಧೆಗಳಲ್ಲಿ ತಂಡವು ಭಾಗವಹಿಸಿದೆ. ಆ ತಂಡವನ್ನು ಇನ್ನೂ ಮೂವರು ಕೋಚ್‌ಗಳಾದ ಪಾವೆಲ್ ಸ್ಮಿರ್ನೊವ್, ಸಮರೇಶ್ ಜಂಗ್ ಮತ್ತು ರೋನಕ್ ಪಂಡಿತ್ ಸೇರಿಕೊಂಡರು.
‘ಏಳರ ಬದಲಿಗೆ ಒಂಬತ್ತು ಮಂದಿ ಕೋಚ್‌ಗಳನ್ನು ಟೋಕಿಯೊ ಕಳುಹಿಸುವ ಪ್ರಯತ್ನದಲ್ಲಿ ನಾವಿದ್ದೇವೆ. ಈ ಕುರಿತು ಫೆಡರೇಷನ್, ಐಒಎಯೊಂದಿಗೆ ಕಾರ್ಯನಿರತವಾಗಿದೆ‘ ಎಂದು ಎನ್‌ಆರ್‌ಎಐ ಕಾರ್ಯದರ್ಶಿ ರಾಜೀವ್ ಭಾಟಿಯಾ ತಿಳಿಸಿದ್ದಾರೆ.
ಕೋವಿಡ್ ಸೃಷ್ಟಿಸಿರುವ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಎನ್‌ಆರ್‌ಎಐ ಪ್ರಧಾನ ಕಾರ್ಯದರ್ಶಿ ಡಿ.ವಿ.ಸೀತಾರಾಮ ರಾವ್ ಅವರು ಟೋಕಿಯೊಗೆ ತೆರಳುತ್ತಿಲ್ಲ; ಬದಲಿಗೆ ಇಬ್ಬರು ಕೋಚ್‌ಗಳಿಗೆ ಅವಕಾಶ ನೀಡಬಹುದಾಗಿದೆ‘ ಎಂದು ಭಾಟಿಯಾ ನುಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.