ಭಾನುವಾರ, ಸೆಪ್ಟೆಂಬರ್ 19, 2021
24 °C

ಎನ್ಐಎಸ್‌ನಿಂದ ಕ್ರೀಡಾ ಫಿಸಿಯೊಥೆರಪಿ, ನ್ಯೂಟ್ರಿಷಿಯನ್ ಕೋರ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಟಿಯಾಲದ ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್‌ಎಸ್‌ಎನ್ಐಎಸ್) ಮತ್ತು ಚೆನ್ನೈನ ಸಿಎಸ್‌ಎಸ್‌–ಎಸ್ಆರ್‌ಐಎಚ್‌ಇಆರ್ ಸಂಸ್ಥೆಗಳು ಕ್ರೀಡಾ ಫಿಸಿಯೋಥೆರಪಿ ಮತ್ತು ನ್ಯೂಟ್ರಿಷಿಯನ್‌ ವಿಷಯದಲ್ಲಿ ಆರು ತಿಂಗಳ ಆನ್‌ಲೈನ್ ಕೋರ್ಸ್ ಆರಂಭಿಸಲು ನಿರ್ಧರಿಸಿವೆ. ಕ್ರೀಡಾ ವಿಜ್ಞಾನವನ್ನು ತಳಮಟ್ಟದಿಂದ ಬೆಳೆಸುವ ಉದ್ದೇಶದಿಂದ ಈ ಸರ್ಟಿಫಿಕೆಟ್ ಕೋರ್ಸ್‌ಗಳ ಉದ್ದೇಶ ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.

ಮೊದಲ ಘಟ್ಟದಲ್ಲಿ ಕ್ರೀಡಾ ಫಿಸಿಯೋಥೆರಪಿ ಮತ್ತು ನ್ಯೂಟ್ರಿಷಿಯನ್‌ ವಿಷಯದಲ್ಲಿ ಮಾತ್ರ ಕೋರ್ಸ್‌ಗಳನ್ನು ನಡೆಸಲಾಗುತ್ತಿದ್ದು ಸೋಮವಾರವೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಎರಡನೇ ಹಂತದಲ್ಲಿ ಫಿಸಿಯಾಲಜಿ, ಕ್ರೀಡಾ ಬಯೋಮೆಕಾನಿಕ್ಸ್, ಸ್ಟ್ರೆಂತ್ ಆ್ಯಂಡ್ ಕಂಡಿಷನಿಂಗ್‌ನಲ್ಲಿ ಕೋರ್ಸ್‌ಗಳನ್ನು ಆರಂಭಿಸಲು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಚಿಂತನೆ ನಡೆಸಿದೆ ಎಂದು ತಿಳಿಸಲಾಗಿದೆ.

‘ಎನ್‌ಎಸ್‌ಎನ್ಐಎಸ್ ಮತ್ತು ಸಿಎಸ್‌ಎಸ್‌–ಎಸ್ಆರ್‌ಐಎಚ್‌ಇಆರ್ ಸಂಸ್ಥೆಗಳ ಕೋರ್ಸ್‌ಗಳಲ್ಲಿ ನೇರ ತರಬೇತಿಯೂ ಇದೆ. ಅದನ್ನು ಕೋವಿಡ್–19 ನಿಯಂತ್ರಣಕ್ಕೆ ಬಂದ ನಂತರ ಆಯೋಜಿಸಲಾಗುವುದು ಎಂದು ತಿಳಿಸಲಾಗಿದೆ. ಪಾಲ್ಗೊಂಡವರಿಗೆ ಆನ್‌ಲೈನ್‌ನಲ್ಲೇ ಕ್ವಿಜ್ ಮತ್ತು ಪರೀಕ್ಷೆ ನಡೆಸಿ ಪ್ರಮಾಣಪತ್ರಗಳನ್ನು ನೀಡಲಾಗುವುದು’ ಎಂದು ಸಾಯ್ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಆರ್‌.ಎಸ್‌.ಬಿಷ್ನೋಯ್ ತಿಳಿಸಿದರು.

‘ಕೋರ್ಸ್ ಮುಗಿಸಿದವರು ಕೋಚ್‌ಗಳ ಜೊತೆ ಕಾರ್ಯನಿರ್ವಹಿಸಲು ಅರ್ಹರಾಗಿರುತ್ತಾರೆ. ಹೊಸ ತಲೆಮಾರಿನ ಅಥ್ಲೀಟ್‌ಗಳ ಮೇಲೆ ಇವರು ಹೆಚ್ಚು ಗಮನಹರಿಸಲಿದ್ದಾರೆ. ಫಿಸಿಯೊಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಫಿಸಿಯೊಥೆರಪಿಯಲ್ಲಿ ಪದವಿ ಗಳಿಸಿ ಕ್ರೀಡಾ ಸಂಸ್ಥೆಗಳಲ್ಲಿ ಮೂರು ವರ್ಷ ಕೆಲಸ ಮಾಡಿದ ಅನುಭವ ಇರುವವರು ಕೂಡ ಅರ್ಜಿ ಸಲ್ಲಿಸಬಹುದು. ನ್ಯೂಟ್ರಿಷಿಯನ್ ಕೋರ್ಸ್‌ಗೆ ಅರ್ಜಿ ಸಲ್ಲಿಸುವವರು ಆಹಾರ ನ್ಯೂಟ್ರಿಷಿಯನ್‌, ಅಪ್ಲೈಡ್ ನ್ಯೂಟ್ರಿಷಿಯನ್‌, ಸಾರ್ವಜನಿಕ ಆರೋಗ್ಯ ನ್ಯೂಟ್ರಿಷಿಯನ್‌, ಕ್ಲಿನಿಕಲ್ ನ್ಯೂಟ್ರಿಷಿಯನ್‌, ಆಹಾರ ವಿಜ್ಞಾನ ಮತ್ತು ಕ್ವಾಲಿಟಿ ಕಂಟ್ರೋಲ್‌ಗೆ ಸಂಬಂಧಿಸಿದ ಯಾವುದಾದರೂ ಕೋರ್ಸ್ ಮುಗಿಸಿರಬೇಕು’ ಎಂದು ಅವರು ವಿವರಿಸಿದರು. 

ಕೋರ್ಸ್‌ಗಳಿಗೆ ಸೇರಬಯಸುವವರಿಗೆ ಆಗಸ್ಟ್ 10ರ ವರೆಗೆ ಅರ್ಜಿಗಳು ಲಭ್ಯವಿದ್ದು ಆಗಸ್ಟ್ 16ರಂದು ಆನ್‌ಲೈನ್ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಗಸ್ಟ್ 24ರಂದು ಕೋರ್ಸ್‌ಗಳು ಆರಂಭವಾಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು