ಶನಿವಾರ, ಜೂನ್ 6, 2020
27 °C
ಕೋವಿಡ್‌: ಭಾರತ ಬಾಕ್ಸಿಂಗ್‌ ಫೆಡರೇಷನ್‌ನ ನಿಯಮಾವಳಿಗಳು ಬಿಡುಗಡೆ

ವಯೋವೃದ್ಧ ಅಧಿಕಾರಿಗಳಿಗೆ ಇಲ್ಲ ರಿಂಗ್‌ ಪ್ರವೇಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಹವಾನಿಯಂತ್ರಿತ ವ್ಯವಸ್ಥೆಯ ಬದಲಿಗೆ ಉತ್ತಮ ಗಾಳಿ ಸಿಗುವ ಸ್ಥಳದಲ್ಲಿ ಬೌಟ್‌ ಆಯೋಜನೆ, ಪ್ರೇಕ್ಷಕರ ಜೊತೆಗೆ 60 ವರ್ಷಕ್ಕಿಂತ ಮೇಲಿನ ಅಧಿಕಾರಿಗಳಿಗೂ ಸ್ಪರ್ಧಾ ಅಂಗಣ ಪ್ರವೇಶವಿಲ್ಲ...

ಕೋವಿಡ್‌–19 ಭೀತಿಯ ಹಿನ್ನೆಲೆಯಲ್ಲಿ ಭಾರತ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ರೂಪಿಸಿರುವ ಹೊಸ ನಿಯಮಗಳಲ್ಲಿ ಇವೂ ಸೇರಿವೆ.

ಕೋವಿಡ್‌ ಮಹಾಮಾರಿ ನಿಯಂತ್ರಣಕ್ಕೆ ಬಂದು ಟೂರ್ನಿಗಳು ಶುರುವಾಗುವ ವೇಳೆ ಪಾಲಿಸಬೇಕಾದ ನಿಯಮಗಳ ಕುರಿತು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಸೂಚಿಸಿದ ಮಾರ್ಗಸೂಚಿಗಳ ಮಾದರಿಯಲ್ಲಿಯೇ ಬಿಎಫ್‌ಐ ತನ್ನ 19 ಪುಟಗಳ ನಿಯಮಾವಳಿಗಳನ್ನು ಸಿದ್ಧಪಡಿಸಿದೆ.

‘ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಗೆ ಅಗತ್ಯವಿರುವ ಸೀಮಿತ ವ್ಯಕ್ತಿಗಳಿಗೆ ಮಾತ್ರ ಪ್ರವೇಶ ಇರುತ್ತದೆ. ಸ್ವಯಂ ಸೇವಕರು ಅಥವಾ ಸಹಾಯಕರ ಸಂಖ್ಯೆಯನ್ನು ಕಡಿತಗೊಳಿಸಲಾಗುವುದು’ ಎಂದು ರಾಜ್ಯ ಮತ್ತು ರಾಷ್ಟ್ರಮಟ್ಟದ ಟೂರ್ನಿಗಳಿಗಾಗಿ ಬಿಎಫ್ಐ ರೂಪಿಸಿರುವ ಪರಿಷ್ಕೃತ ನಿಯಮಾವಳಿಗಳು ಹೇಳುತ್ತವೆ.

ಬಿಎಫ್‌ಐ ಮುಂದೆ ಸದ್ಯ ಯಾವುದೇ ಟೂರ್ನಿಗಳಿಲ್ಲ. ಸಾಮಾನ್ಯವಾಗಿ ಆರಂಭವಾಗುವ ಅಕ್ಟೋಬರ್‌–ನವಂಬರ್‌ ವೇಳೆಯಲ್ಲಿ ಟೂರ್ನಿಗಳನ್ನು ಆಯೋಜಿಸಲು ಅದು ಬಯಸಿದೆ. ಅಂದರೆ ಡಿಸೆಂಬರ್‌ನಲ್ಲಿ ನಡೆಯುವ ಏಷ್ಯನ್‌ ಚಾಂಪಿಯನ್‌ಷಿಪ್‌ಗಿಂತ ಮೊದಲು.

‘ 60 ವರ್ಷಕ್ಕಿಂತ ಮೇಲಿನವರಿಗೆ ಕೊರೊನಾ ಸೋಂಕು ಹರಡುವ ಅಪಾಯ ಹೆಚ್ಚು ಇರುವುದರಿಂದ ಅಂತಹ ಅಧಿಕಾರಿಗಳಿಗೆ ಬಾಕ್ಸಿಂಗ್ ರಿಂಗ್‌ ಪ್ರವೇಶವಿಲ್ಲ’ ಎಂದು ನಿಯಮಾವಳಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿ ವಿರಾಮಕ್ಕೊಮ್ಮೆ ಸ್ಪರ್ಧಾಕಣದ ನೈರ್ಮಲ್ಯೀಕರಣ (ಸ್ಯಾನಿಟೈಜೇಷನ್‌), ಸೋಂಕು ನಿವಾರಕ ಮಾರ್ಗಗಳು, ಗಾಯಗೊಂಡಲ್ಲಿ ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳ ಕುರಿತು ನಿಯಮಾವಳಿಗಳಲ್ಲಿ ತಿಳಿಸಲಾಗಿದೆ.

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು