ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಸ್ಟಿನ್‌, ಪೀಲಟ್‌ ಕೈಚಳಕ

‘ಎ’ ಗುಂಪಿನ ಪಂದ್ಯ: ಶುಭಾರಂಭ ಮಾಡಿದ ಅರ್ಜೆಂಟೀನಾ, ಸ್ಪೇನ್‌ ತಂಡಕ್ಕೆ ನಿರಾಸೆ
Last Updated 29 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಭುವನೇಶ್ವರ: ಅಗಸ್ಟಿನ್‌ ಮಜಿಲ್ಲಿ ಮತ್ತು ಗೊಂಜಾಲೊ ಪೀಲಟ್‌ ಅವರು ಗುರುವಾರ ಕಳಿಂಗ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.

ಇವರ ಕೈಚಳಕದಲ್ಲಿ ಅರಳಿದ ತಲಾ ಎರಡು ಗೋಲುಗಳ ಬಲದಿಂದ ಅರ್ಜೆಂಟೀನಾ ತಂಡ ಹಾಕಿ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿತು.

‘ಎ’ ಗುಂಪಿನ ಹಣಾಹಣಿಯಲ್ಲಿ ಪೆಡ್ರೊ ಇಬಾರ ಸಾರಥ್ಯದ ಅರ್ಜೆಂಟೀನಾ 4–3 ಗೋಲುಗಳಿಂದ ಡೆಲಾಸ್‌ ಮಿಗೆಲ್‌ ಮುಂದಾಳತ್ವದ ಸ್ಪೇನ್‌ ತಂಡವನ್ನು ಪರಾಭವಗೊಳಿಸಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನ ಹೊಂದಿದ್ದ ಸ್ಪೇನ್‌ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಈ ತಂಡಕ್ಕೆ ಮೂರನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಗೊಂಜಾಲೆಜ್‌ ಎನ್ರಿಕ್‌ ಫೀಲ್ಡ್‌ ಗೋಲು ಬಾರಿಸಿದರು. ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ಅರ್ಜೆಂಟೀನಾ ತಂಡದವರು ಅವಕಾಶ ನೀಡಲಿಲ್ಲ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿರುವ ಈ ತಂಡ ನಾಲ್ಕನೇ ನಿಮಿಷದಲ್ಲಿ ತಿರುಗೇಟು ನೀಡಿತು. ಅಗಸ್ಟಿನ್‌ ಮಜಿಲ್ಲಿ ಫೀಲ್ಡ್‌ ಗೋಲು ಹೊಡೆದು 1–1 ಸಮಬಲಕ್ಕೆ ಕಾರಣರಾದರು.

ನಂತರ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. 14ನೇ ನಿಮಿಷದಲ್ಲಿ ಸ್ಪೇನ್‌ ಮುನ್ನಡೆ ಗಳಿಸಿತು. ರೋಮಿಯೊ ಜೋಸೆಫ್‌, ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಚುರುಕಾಗಿ ಚೆಂಡನ್ನು ಗುರಿ ತಲುಪಿಸಿ ‘ರೆಡ್‌ ಸ್ಟಿಕ್ಸ್‌’ ಪಾಳಯದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು.

ಮರು ನಿಮಿಷದಲ್ಲೇ (15) ಅರ್ಜೆಂಟೀನಾ ಸಮಬಲ ಸಾಧಿಸಿತು. ಅಗಸ್ಟಿನ್‌ ಮಜಿಲ್ಲಿ ಮತ್ತೊಮ್ಮೆ ಕೈಚಳಕ ತೋರಿದರು. ಫೀಲ್ಡ್‌ ಗೋಲು ಗಳಿಸಿದ ಅವರು ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿದರು. ಇದರ ಬೆನ್ನಲ್ಲೇ ಅರ್ಜೆಂಟೀನಾಗೆ ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕಿತು. ಇದನ್ನು ಗೊಂಜಾಲೊ ಪೀಲಟ್‌ ಸದುಪಯೋಗಪಡಿಸಿಕೊಂಡರು. ಅವರು ಬಾರಿಸಿದ ಚೆಂಡು ಮಿಂಚಿನ ಗತಿಯಲ್ಲಿ ಸಾಗಿ ಎದುರಾಳಿ ಗೋಲುಪೆಟ್ಟಿಯೊಳಗೆ ಸೇರುತ್ತಿದ್ದಂತೆ ಇಬಾರ ಪಡೆಯ ಆಟಗಾರರು ಸಂಭ್ರಮಿಸಿದರು.

ಎರಡನೇ ಕ್ವಾರ್ಟರ್‌ನಲ್ಲಿ ತುರುಸಿನ ಪೈಪೋಟಿ ಏರ್ಪಟ್ಟಿತು. 15 ನಿಮಿಷಗಳ ಆಟದಲ್ಲಿ ಯಾವ ತಂಡಕ್ಕೂ ಚೆಂಡನ್ನು ಗುರಿ ತಲುಪಿಸಲು ಆಗಲಿಲ್ಲ. ದ್ವಿತೀಯಾರ್ಧದಲ್ಲಿ ಸ್ಪೇನ್‌ ತಂಡ ಮೇಲುಗೈ ಸಾಧಿಸಿತು. 35ನೇ ನಿಮಿಷದಲ್ಲಿ ರೂಯಿಜ್ ವಿಕೆನ್ಸ್‌ ಗೋಲು ಹೊಡೆದು 3–3 ಸಮಬಲಕ್ಕೆ ಕಾರಣರಾದರು.

ಹೀಗಾಗಿ ಅಂತಿಮ ಕ್ವಾರ್ಟರ್‌ನ 15 ನಿಮಿಷಗಳ ಆಟ ಉಭಯ ತಂಡಗಳ ಪಾಲಿಗೂ ಮಹತ್ವದ್ದೆನಿಸಿತ್ತು. 49ನೇ ನಿಮಿಷದಲ್ಲಿ ಅರ್ಜೆಂಟೀನಾ ತಂಡಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್‌ ಲಭ್ಯವಾಯಿತು. ಈ ಅವಕಾಶದಲ್ಲಿ ಪೀಲಟ್‌ ಚೆಂಡನ್ನು ಚುರುಕಾಗಿ ಗುರಿ ತಲುಪಿಸಿದರು. ಹೀಗಾಗಿ ಇಬಾರ ಪಡೆ 4–3ರ ಮುನ್ನಡೆ ಗಳಿಸಿ ಗೆಲುವಿನ ಹಾದಿ ಸುಗಮ ಮಾಡಿಕೊಂಡಿತು. ನಂತರದ ಅವಧಿಯಲ್ಲಿ ಅರ್ಜೆಂಟೀನಾ ತಂಡ ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿತು. ಈ ತಂಡದ ಗೋಲ್‌ಕೀಪರ್‌ ವುವಾನ್‌ ವಿವಾಲ್ಡಿ, ಸ್ಪೇನ್‌ ಆಟಗಾರರ ಪ್ರಯತ್ನಗಳನ್ನು ವಿಫಲಗೊಳಿಸಿ ಅಭಿಮಾನಿಗಳ ಮನ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT