ಶುಕ್ರವಾರ, ಜನವರಿ 22, 2021
22 °C

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ನಾಳೆಯಿಂದ: ಸೈನಾ, ಸಿಂಧು ಮೇಲೆ ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಕಾಕ್‌: ಕೋವಿಡ್‌ –19 ಪಿಡುಗಿನ ಹಿನ್ನೆಲೆಯಲ್ಲಿ ಸುಮಾರು 10 ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಸ್ಪರ್ಧೆಗಳಿಗೆ ಥಾಯ್ಲೆಂಡ್ ಓಪನ್‌ ಸೂಪರ್ 1000 ಟೂರ್ನಿಯ ಮೂಲಕ ಚಾಲನೆ ದೊರೆಯಲಿದೆ.

ಮಂಗಳವಾರ ಆರಂಭವಾಗುವ ಈ ಟೂರ್ನಿಯಲ್ಲಿ ಭಾರತದ ತಾರಾ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಕಣಕ್ಕಿಳಿಯಲಿದ್ದಾರೆ. ಜಪಾನ್ ಹಾಗೂ ಚೀನಾ ತಂಡಗಳು ಹಿಂದೆ ಸರಿದಿರುವ ಕಾರಣ ಟೂರ್ನಿಗೆ ಅಷ್ಟೊಂದು ಕಳೆ ಇಲ್ಲ.

ಕಳೆದ ಎರಡು ತಿಂಗಳಿನಿಂದ ಲಂಡನ್‌ನಲ್ಲಿ ತರಬೇತಿ ನಿರತರಾಗಿದ್ದ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಲಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಕೋವಿಡ್‌–19 ಪಿಡುಗಿಗೆ ತುತ್ತಾಗಿದ್ದ ಸೈನಾ ಚೇತರಿಸಿಕೊಂಡಿದ್ದು, ಉತ್ತಮ ಸಾಮರ್ಥ್ಯ ತೋರುವ ಹಂಬಲದಲ್ಲಿದ್ದಾರೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ಆಲ್ ಇಂಗ್ಲೆಂಡ್‌ ಓಪನ್‌ ಚಾಂಪಿಯನ್‌ಷಿಪ್ ಮುಗಿದ ಬಳಿಕ ಬಹುತೇಕ ಟೂರ್ನಿಗಳು ಸ್ಥಗಿತಗೊಂಡಿದ್ದವು. ಡೆನ್ಮಾರ್ಕ್‌ ಓಪನ್ ಹಾಗೂ ಸಾರ್‌ಲೊರ್ ಲಕ್ಷ್‌ ಟೂರ್ನಿಗಳು ನಡೆದಿದ್ದರೂ ಸಿಂಧು ಮತ್ತು ಸೈನಾ ಅವುಗಳಲ್ಲಿ ಸ್ಪರ್ಧಿಸಿರಲಿಲ್ಲ.

ಥಾಯ್ಲೆಂಡ್‌ ಓಪನ್‌ನಲ್ಲಿ ಚೀನಾ ಹಾಗೂ ಜಪಾನ್ ಆಟಗಾರರ ಗೈರು ಹಾಜರಿಯು, ಭಾರತದವರಿಗೆ ಉತ್ತಮ ಅವಕಾಶವನ್ನು ಸೃಷ್ಟಿಸಿದೆ. ಥಾಯ್ಲೆಂಡ್‌ನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಚೀನಾ ಹಿಂದೆ ಸರಿದಿತ್ತು. ಅಗ್ರಕ್ರಮಾಂಕದ ಆಟಗಾರ ಕೆಂಟೊ ಮೊಮೊಟಾ ಅವರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ತನ್ನ ಆಟಗಾರರು ಕಣಕ್ಕಿಳಿಯುತ್ತಿಲ್ಲ ಎಂದು ಜಪಾನ್ ಹೇಳಿತ್ತು.

ಸಿಂಧು ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್‌ ಅವರನ್ನು ಎದುರಿಸಲಿದ್ದರೆ, ಸೈನಾ ಅವರಿಗೆ ಮಲೇಷ್ಯಾದ ಕಿಸೋನಾ ಸೆಲ್ವಾಡುರಾಯ್‌ ಮುಖಾಮುಖಿಯಾಗಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್‌, ಬಿ.ಸಾಯಿ ಪ್ರಣೀತ್‌, ಎಚ್‌.ಎಸ್‌.ಪ್ರಣಯ್‌, ಸೌರಭ್ ವರ್ಮಾ, ಪರುಪಳ್ಳಿ ಕಶ್ಯಪ್‌ ಮತ್ತು ಸಮೀರ್ ವರ್ಮಾ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ, ,ಮನು ಅತ್ರಿ– ಬಿ. ಸುಮಿತ್ ರೆಡ್ಡಿ, ಎಮ್.ಆರ್‌. ಅರ್ಜುನ–ಧೃವ ಕಪಿಲ, ಮಹಿಳಾ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ–ಎನ್‌.ಸಿಕ್ಕಿರೆಡ್ಡಿ, ಮಿಶ್ರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌–ಅಶ್ವಿನಿ ಕಣಕ್ಕಿಳಿಯಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು