ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರ್ಜಿತ್‌ ಕೌರ್‌ ಕೈಚಳಕ

ಒಲಿಂಪಿಕ್‌ ಟೆಸ್ಟ್‌ ಹಾಕಿ: ಭಾರತದ ವನಿತೆಯರ ಶುಭಾರಂಭ
Last Updated 17 ಆಗಸ್ಟ್ 2019, 19:31 IST
ಅಕ್ಷರ ಗಾತ್ರ

ಟೋಕಿಯೊ : ಪೆನಾಲ್ಟಿ ಕಾರ್ನರ್‌ ಪರಿಣಿತೆ ಗುರ್ಜಿತ್‌ ಕೌರ್‌ ಅವರ ಆಕರ್ಷಕ ಆಟದ ಬಲದಿಂದ ಭಾರತದ ವನಿತೆಯರ ತಂಡದವರು ಒಲಿಂಪಿಕ್‌ ಹಾಕಿ ಟೆಸ್ಟ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಶನಿವಾರ ನಡೆದ ಹೋರಾಟದಲ್ಲಿ ರಾಣಿ ರಾಂಪಾಲ್‌ ಸಾರಥ್ಯದ ಭಾರತ 2–1 ಗೋಲುಗಳಿಂದ ಆತಿಥೇಯ ಜಪಾನ್‌ ಎದುರು ಗೆದ್ದಿತು.

ಒಲಿಂಪಿಕ್‌ ನಿಯಮದ ಪ್ರಕಾರ ಎರಡೂ ತಂಡಗಳು 16 ಸದಸ್ಯರೊಂದಿಗೆ ಕಣಕ್ಕಿಳಿದಿದ್ದವು.

ಭಾರತ ತಂಡದವರು ಪಂದ್ಯದ ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಆರಂಭದ ಎಂಟು ನಿಮಿಷಗಳ ಆಟದಲ್ಲಿ ಎದುರಾಳಿಗಳಿಂದ ಅಲ್ಪ ಪ್ರತಿರೋಧ ಎದುರಿಸಿದ ರಾಣಿ ಬಳಗವು ಒಂಬತ್ತನೇ ನಿಮಿಷದಲ್ಲಿ ಖಾತೆ ತೆರೆಯಿತು. ಗುರ್ಜಿತ್‌ ಕೌರ್‌, ಚೆಂಡನ್ನು ಗುರಿ ಮುಟ್ಟಿಸಿದರು. ಅವರು ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸುತ್ತಿದ್ದಂತೆ ಭಾರತದ ಪಾಳಯದಲ್ಲಿ ಸಂಭ್ರಮ ಗರಿಗೆದರಿತು.

ಎರಡನೇ ಕ್ವಾರ್ಟರ್‌ನಲ್ಲಿ ಜಪಾನ್‌ ತಿರುಗೇಟು ನೀಡಿತು. 16ನೇ ನಿಮಿಷದಲ್ಲಿ ಆತಿಥೇಯ ತಂಡದ ಅಕಿ ಮಿತ್ಸುಹಾಶಿ ಕೈಚಳಕ ತೋರಿದರು. 29 ವರ್ಷದ ಈ ಆಟಗಾರ್ತಿ ಫೀಲ್ಡ್‌ ಗೋಲು ಹೊಡೆದರು. ನಂತರದ ಅವಧಿಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ ಉಭಯ ತಂಡಗಳು 1–1 ಸಮಬಲದೊಂದಿಗೆ ವಿರಾಮಕ್ಕೆ ಹೋದವು.

ಮೂರನೇ ಕ್ವಾರ್ಟರ್‌ನ ಆರಂಭದ ಐದು ನಿಮಿಷಗಳಲ್ಲಿ ರಾಣಿ ಪಡೆಯ ಆಟಗಾರ್ತಿಯರು ಪಾರಮ್ಯ ಮೆರೆದರು. 35ನೇ ನಿಮಿಷದಲ್ಲಿ ಗುರ್ಜಿತ್‌ ಕೌರ್‌ ಮೋಡಿ ಮಾಡಿದರು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಕೈಚಳಕ ತೋರಿದ 23ರ ಹರೆಯದ ಗುರ್ಜಿತ್‌, ತಂಡದ ಖಾತೆಗೆ ಮತ್ತೊಂದು ಗೋಲು ಸೇರ್ಪಡೆ ಮಾಡಿದರು. ರಾಣಿ ಪಡೆಯ ಗೆಲುವಿನ ಕನಸಿಗೆ ಬಲ ತುಂಬಿದರು.

ನಂತರದ ಅವಧಿಯಲ್ಲಿ ಜಪಾನ್‌ ತಂಡ ಸಮಬಲದ ಗೋಲು ಗಳಿಸಲು ಸಾಕಷ್ಟು ಪ್ರಯತ್ನಿಸಿತು. ಈ ತಂಡಕ್ಕೆ ಹಲವು ಅವಕಾಶಗಳೂ ಸಿಕ್ಕಿದ್ದವು. ಇವನ್ನು ಕೈಚೆಲ್ಲಿದ್ದರಿಂದ ನಿರಾಸೆ ಕಾಡಿತು.

ಮನದೀಪ್‌ ಮೋಡಿ; ಗುರುಸಾಹೀಬ್‌ ಗರ್ಜನೆ

ಪುರುಷರ ವಿಭಾಗದಲ್ಲಿ ಭಾರತ ತಂಡ ಜಯಭೇರಿ ಮೊಳಗಿಸಿತು.ತನ್ನ ಮೊದಲ ಹಣಾಹಣಿಯಲ್ಲಿ ಭಾರತ 6–0 ಗೋಲುಗಳಿಂದ ಮಲೇಷ್ಯಾ ತಂಡವನ್ನು ಸೋಲಿಸಿತು.

ಆರಂಭದಿಂದಲೇ ಅಬ್ಬರದ ಆಟಕ್ಕೆ ಅಣಿಯಾದ ಹರ್ಮನ್‌ಪ್ರೀತ್‌ ಸಿಂಗ್‌ ಬಳಗವು ಎಂಟನೇ ನಿಮಿಷದಲ್ಲಿ ಖಾತೆ ತೆರೆಯಿತು. ಗುರಿಂದರ್‌ ಸಿಂಗ್‌ ಅವರು ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಇದರ ಬೆನ್ನಲ್ಲೇ ಭಾರತಕ್ಕೆ ನಾಲ್ಕು ಪೆನಾಲ್ಟಿ ಕಾರ್ನರ್‌ ಲಭ್ಯವಾಗಿತ್ತು. ಈ ಅವಕಾಶಗಳನ್ನು ತಂಡ ಕೈಚೆಲ್ಲಿತು.

ದ್ವಿತೀಯ ಕ್ವಾರ್ಟರ್‌ನಲ್ಲಿ ಹರ್ಮನ್‌ಪ್ರೀತ್‌ ಪಡೆ ಇನ್ನಷ್ಟು ಚುರುಕಾಗಿ ಆಡಿತು. 18ನೇ ನಿಮಿಷದಲ್ಲಿ ಗೋಲು ಹೊಡೆದ ಗುರುಸಾಹೀಬ್‌ಜಿತ್‌ ಸಿಂಗ್‌ 2–0 ಮುನ್ನಡೆಗೆ ಕಾರಣರಾದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಮಲೇಷ್ಯಾ ತಂಡ ಕೂಡ ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಿಕೊಂಡಿತ್ತು. ಈ ತಂಡದ ಆಟಗಾರರ ಪ್ರಯತ್ನಗಳಿಗೆ ಭಾರತದ ಗೋಲ್‌ಕೀಪರ್‌ ಸೂರಜ್‌ ಕರ್ಕೇರಾ ಅಡ್ಡಿಯಾದರು.

ಮೂರನೇ ಕ್ವಾರ್ಟರ್‌ನಲ್ಲೂ ಭಾರತ ಪ್ರಾಬಲ್ಯ ಮೆರೆಯಿತು. ಉಪ ನಾಯಕ ಮನದೀಪ್‌ ಸಿಂಗ್‌ 33ನೇ ನಿಮಿಷದಲ್ಲಿ ಕೈಚಳಕ ತೋರಿದರು. ಜಸ್‌ಕರಣ್‌ ಸಿಂಗ್‌ ತಮ್ಮತ್ತ ತಳ್ಳಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಮನದೀಪ್‌ ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ತಲುಪಿಸಿದರು.

ಅಂತಿಮ ಕ್ವಾರ್ಟರ್‌ನಲ್ಲೂ ಮಲೇಷ್ಯಾ ಮಂಕಾಯಿತು. 46ನೇ ನಿಮಿಷದಲ್ಲಿ ಮನದೀಪ್‌ ಮತ್ತೊಮ್ಮೆ ಮೋಡಿ ಮಾಡಿದರು. ವೈಯಕ್ತಿಕ ಎರಡನೇ ಗೋಲು ಹೊಡೆದ ಅವರು ತಂಡವು 4–0 ಮುನ್ನಡೆ ಪಡೆಯಲು ನೆರವಾದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನ ಹೊಂದಿರುವ ಭಾರತ ನಂತರವೂ ಆಕ್ರಮಣಕಾರಿ ಆಟ ಆಡಿ ಎದುರಾಳಿ ಪಾಳಯದ ರಕ್ಷಣಾ ಕೋಟೆಯನ್ನು ಧ್ವಂಸಗೊಳಿಸಿತು. 56ನೇ ನಿಮಿಷದಲ್ಲಿ ಗುರುಸಾಹೀಬ್‌ ಸಿಂಗ್‌ ಗೋಲು ಹೊಡೆದು ಗೆಲುವು ಖಾತ್ರಿ ಪಡಿಸಿದರು. ಅಂತಿಮ ನಿಮಿಷದಲ್ಲಿ (60) ಕನ್ನಡಿಗ ಎಸ್‌.ವಿ.ಸುನಿಲ್‌ ಚೆಂಡನ್ನು ಗುರಿ ತಲುಪಿಸುತ್ತಿದ್ದಂತೆ ಭಾರತದ ಆಟಗಾರರು ಖುಷಿಯ ಕಡಲಲ್ಲಿ ತೇಲಿದರು.

ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ ಸವಾಲು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT