ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics | ಈಜು: ಮಕಿಯಾನ, ತತಿಯಾನ ಮಿಂಚು

Last Updated 30 ಜುಲೈ 2021, 15:38 IST
ಅಕ್ಷರ ಗಾತ್ರ

ಟೋಕಿಯೊ(ಪಿಟಿಐ/ರಾಯಿಟರ್ಸ್): ಆಸ್ಟ್ರೇಲಿಯಾದ ಎಮಾ ಮಕಿಯನ್ ಶುಕ್ರವಾರ ಈಜುಕೊಳದಲ್ಲಿ ತಮ್ಮ ಛಾಪು ಮೂಡಿಸಿದರು.

ಮಹಿಳೆಯರ 100 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಚಿನ್ನ ಗೆದ್ದು ನೂತನ ಒಲಿಂಪಿಕ್ ದಾಖಲೆಯನ್ನೂ ತಮ್ಮದಾಗಿಸಿಕೊಂಡರು. ಹಾಂಗ್‌ಕಾಂಗ್‌ನ ಸಿಯಬನ್ ಹಾಗೈ ಮತ್ತು ಮತ್ತು ಆಸ್ಟ್ರೇಲಿಯಾದ ಕೇಟ್ ಕ್ಯಾಂಪ್‌ಬೆಲ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಈ ಕೂಟದಲ್ಲಿ ಇದು ಅವರ ಮೊದಲ ವೈಯಕ್ತಿಕ ಚಿನ್ನದ ಪದಕವಾಗಿದೆ. 4X100 ಮೀಟರ್ಸ್ ಫ್ರೀಸ್ಟೈಲ್ ರಿಲೆಯಲ್ಲಿ ಚಿನ್ನ ಮತ್ತು 100 ಮೀಟರ್ ಬಟರ್‌ಫ್ಲೈ, 4X200 ಮೀ ರಿಲೆಯಲ್ಲಿ ಅವರು ಕಂಚಿನ ಪದಕ ಗಳಿಸಿದ್ದಾರೆ.

‘ಒಲಿಂಪಿಕ್ ಮತ್ತು ವಿಶ್ವ ಕೂಟದಲ್ಲಿ ವೈಯಕ್ತಿಕ ಪ್ರಶಸ್ತಿ ಗೆದ್ದಿರಲಿಲ್ಲ. ಈ ಒಲಿಂಪಿಕ್ ನನಗೆ ವಿಶೇಷ. ಇಲ್ಲಿಯ ವಿಜಯವೇದಿಕೆಯಲ್ಲಿ ನಿಂತುಕೊಳ್ಳುವುದೇ ಹೆಮ್ಮೆಯ ಸಂಗತಿ’ ಎಂದು ಎಮಾ ಸಂತಸ ಹಂಚಿಕೊಂಡರು.

27 ವರ್ಷದ ಎಮಾ ಅವರ ಅಪ್ಪ ಮತ್ತು ಅಣ್ಣ ಇಬ್ಬರೂ ಒಲಿಂಪಿಯನ್ ಈಜುಪಟುಗಳು. ನ್ಯೂಸೌತ್‌ವೇಲ್ಸ್‌ನ ವೊಲ್‌ಗಾಂಗ್‌ನಲ್ಲಿ ನೆಲೆಸಿರುವ ಎಮಾ, ಹೋದ ಬಾರಿ ರಿಯೊದಲ್ಲಿ 4X100 ರಿಲೆ ಚಿನ್ನ ಸೇರಿದಂತೆ ನಾಲ್ಕು ಪದಕ ಜಯಿಸಿದ್ದರು.

ರೈಲೊವ್ ದಾಖಲೆ
ಪುರುಷರ ವಿಭಾಗದಲ್ಲಿ ರಷ್ಯಾ (ಐಒಸಿ ಧ್ವಜದಡಿಯಲ್ಲಿ ಸ್ಪರ್ಧಿಸಿದೆ) ತಂಡದ ಎವಾಗ್ನಿ ರೈಲೊವ್ ನೂತನ ದಾಖಲೆ ನಿರ್ಮಿಸಿದರು. ಅವರು 200 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ 1ನಿಮಿಷ, 53.27 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಸ್ಪರ್ಧೆಯಲ್ಲಿ ಅವರು ಅಮೆರಿಕದ ರಯಾನ್ ಮರ್ಫಿಯನ್ನು ಹಿಂದಿಕ್ಕಿದರು.

ತತಿಯಾನ ಅಚ್ಚರಿ ಜಯ
ಮಹಿಳೆಯರ 200 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ದಕ್ಷಿಣ ಆಫ್ರಿಕಾದ ತತಿಯಾನ ಶೂಮೇಕರ್ ಅಚ್ಚರಿಯ ಅಲೆ ಎಬ್ಬಿಸಿದರು. ಅವರು ಅಮೆರಿಕದ ಲಿಲಿ ಕಿಂಗ್ ಅವರನ್ನು ಹಿಂದಿಕ್ಕಿ ಚಿನ್ನದ ಪದಕ ಜಯಿಸಿದರು. ಲಿಲಿ ಬೆಳ್ಳಿ ಮತ್ತು ಆ್ಯನಿ ಲೇಜರ್ ಕಂಚಿನ ಪದಕ ಗಳಿಸಿದರು.

ಡ್ರೆಸೆಲ್ ಮುನ್ನಡೆ
ಅಮೆರಿಕದ ಕೆಲೆಬ್ ಡ್ರೆಸೆಲ್ ಅವರು ಪುರುಷರ 100 ಮೀಟರ್ ಬಟರ್‌ಫ್ಲೈ ಸೆಮಿಫೈನಲ್‌ನಲ್ಲಿ ದಾಖಲೆ ಬರೆದರು.

ಮಿಶ್ರ ರಿಲೆ ಪದಾರ್ಪಣೆ
ಒಲಿಂಪಿಕ್ಸ್ ಈಜು ಕ್ರೀಡೆಯಲ್ಲಿ ಇದೇ ಮೊದಲ ಬಾರಿಗೆ ಮಿಶ್ರ ರಿಲೆ ಫೈನಲ್ ಶನಿವಾರ ನಡೆಯಲಿದೆ. 4X100 ಮೀಟರ್ಸ್ ರಿಲೆ ನಡೆಯಲಿದ್ದು. ಪ್ರತಿ ತಂಡದಲ್ಲಿ ಇಬ್ಬರು ಪುರುಷ ಮತ್ತು ಇಬ್ಬರು ಮಹಿಳಾ ಈಜುಪಟುಗಳು ಇರುತ್ತಾರೆ.

ಬ್ಯಾಕ್‌ಸ್ಟ್ರೋಕ್, ಬ್ಯಾಕ್‌ಸ್ಟ್ರೋಕ್, ಬ್ರೆಸ್ಟ್‌ಸ್ಟ್ರೋಕ್, ಬಟರ್‌ಫ್ಲೈ ಮತ್ತು ಫ್ರೀಸ್ಟೈಲ್‌ ಇದರಲ್ಲಿರಲಿವೆ.

ಫಲಿತಾಂಶ

ಮಹಿಳೆಯರು:

100 ಮೀ ಫ್ರೀಸ್ಟೈಲ್‌: ಎಮಾ ಮಕಿಯಾನ್ (ಆಸ್ಟ್ರೇಲಿಯಾ; 51.96ಸೆ, ದಾಖಲೆ)–1, ಸಿಯಬನ್ ಹಾಗೈ (ಹಾಂಗ್‌ಕಾಂಗ್; 52.27ಸೆ)–2, ಕೇಟ್ ಕ್ಯಾಂಪ್‌ಬೆಲ್ (ಆಸ್ಟ್ರೇಲಿಯಾ; 52.52ಸೆ)–3.

200 ಮೀ ಬ್ರೆಸ್ಟ್‌ಸ್ಟ್ರೋಕ್: ತತಿಯಾನಾ ಶೂಮೇಕರ್ (ದಕ್ಷಿಣ ಆಫ್ರಿಕಾ; 2ನಿ,18.95ಸೆ) –1, ಲಿಲಿ ಕಿಂಗ್ (ಅಮೆರಿಕ; 2ನಿ,20.84ಸೆ)–2, ಆ್ಯನಿ ಲೇಜರ್ (ಅಮೆರಿಕ; 2ನಿ,20.84ಸೆ)–3.

ಪುರುಷರು

200 ಮೀ ಬ್ಯಾಕ್‌ಸ್ಟ್ರೋಕ್: ಇವಾಗ್ನಿ ರೈಲೊವ್ (ರಷ್ಯಾ; 1ನಿ,53.27ಸೆ, ದಾಖಲೆ)–1, ರೈನ್ ಮರ್ಫಿ (ಅಮೆರಿಕ;1ನಿ,54.15ಸೆ)–2, ಲೂಕ್ ಗ್ರೀನ್‌ಬ್ಯಾಂಕ್ (ಜರ್ಮನಿ; 1ನಿ,54.72ಸೆ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT