ಶುಕ್ರವಾರ, ಜೂನ್ 5, 2020
27 °C
ನೇಷನ್ಸ್‌ ಕಪ್‌ ಆನ್‌ಲೈನ್‌ ಚೆಸ್‌: ಮಿಂಚದ ವಿದಿತ್‌

ನೇಷನ್ಸ್‌ ಕಪ್‌ ಆನ್‌ಲೈನ್‌ ಚೆಸ್ ಟೂರ್ನಿಯಲ್ಲಿ ಚೀನಾಕ್ಕೆ ಮಣಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ನೇಷನ್ಸ್‌ ಕಪ್‌ ಆನ್‌ಲೈನ್‌ ಚೆಸ್ ಟೂರ್ನಿಯ ಏಳನೇ ಸುತ್ತಿನಲ್ಲಿ ಗುರುವಾರ ವಿಶ್ವ ಇತರೆ ತಂಡವನ್ನು ಸೋಲಿಸಿ ಮೊದಲ ಜಯ ದಾಖಲಿಸಿದ್ದ ಭಾರತ ತಂಡ ನಂತರ ಮತ್ತೆ ಹಿನ್ನಡೆಯತ್ತ ಸಾಗಿದೆ. ಶನಿವಾರ ಸಂಜೆ ನಡೆದ ಚೀನಾ ಎದುರಿನ ಒಂಬತ್ತನೇ ಸುತ್ತಿನ ಹೋರಾಟದಲ್ಲಿ ತಂಡವು 1.5–2.5ರಿಂದ ನಿರಾಸೆ ಕಂಡಿದೆ. 

ಭಾರತದ ವಿದಿತ್‌ ಗುಜರಾತಿ, ಪಿ.ಹರಿಕೃಷ್ಣ ಮತ್ತು ದ್ರೋಣವಲ್ಲಿ ಹಾರಿಕಾ ಕ್ರಮವಾಗಿ ವಾಂಗ್‌ ಹಾವೊ, ವೀ ಯಿ ಮತ್ತು ಹೌ ಇಫಾನ್‌ ಎದುರು ಡ್ರಾ ಮಾಡಿಕೊಂಡರು. ಆದರೆ ಮೂರನೇ ಬೋರ್ಡ್‌ನಲ್ಲಿ ಆಡಿದ ಭಾಸ್ಕರನ್‌ ಅದಿಬನ್‌ ಅವರು ಚೀನಾದ ಯು ಯಾಂಗ್ಯಿ ಅವರಿಗೆ ಮಣಿದರು. ವಿಶ್ವನಾಥನ್‌ ಆನಂದ್‌ ಮತ್ತು ಕೊನೇರು ಹಂಪಿ ಈ ಸುತ್ತಿನಲ್ಲಿ ಆಡಿರಲಿಲ್ಲ.

ಶುಕ್ರವಾರ ಎಂಟನೇ ಸುತ್ತಿನಲ್ಲಿ ಭಾರತ 2–2 ಅಂತರದಿಂದ ಯುರೋಪ್‌ ಎದುರು ಸಮಬಲ ಸಾಧಿಸಿತ್ತು. ಆರು ತಂಡಗಳು ಟೂರ್ನಿ
ಯಲ್ಲಿ ಆಡುತ್ತಿದ್ದು, ಇನ್ನೊಂದು ಸುತ್ತಿನ ಪಂದ್ಯಗಳು ತಡರಾತ್ರಿ ನಡೆಯಲಿವೆ. ಅಗ್ರ ಎರಡು ಸ್ಥಾನ ಪಡೆಯುವ ತಂಡಗಳ ನಡುವೆ ಭಾನುವಾರ ಸಂಜೆ ಸೂಪರ್‌ ಫೈನಲ್‌ ನಡೆಯಲಿದೆ.

ಶುಕ್ರವಾರ ನಡೆದ ಇತರ ಪಂದ್ಯಗಳಲ್ಲಿ ರಷ್ಯಾ 2–2 ಅಂತರದಿಂದ ವಿಶ್ವ ಇತರೆ ತಂಡದ ಎದುರು ಸಮಬಲ ಸಾಧಿಸಿದರೆ, ಯುರೋಪ್‌ ತಂಡ 2.5–1.5 ಅಂತರದಿಂದ ಅಮೆರಿಕ ಎದುರು ಜಯ ಸಾಧಿಸಿತು. ಚೀನಾ ಈ ಟೂರ್ನಿಯಲ್ಲಿ ಅಗ್ರಸ್ಥಾನದಲ್ಲಿದೆ.

ಮೊದಲ ಜಯ: ಗುರುವಾರ ರಾತ್ರಿ ನಡೆದ ಏಳನೇ ಸುತ್ತಿನ ಹಣಾಹಣಿಯಲ್ಲಿ ಭಾರತ ತಂಡ 2.5–1.5 ಪಾಯಿಂಟ್ಸ್‌ನಿಂದ ವಿಶ್ವ ಇತರೆ ತಂಡವನ್ನು ಸೋಲಿಸಿತ್ತು. ಐದು ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್ ಆನಂದ್‌ 37 ನಡೆಗಳಲ್ಲಿ ಟಿಮೋ‌‌‌ರ್‌ ರ‍್ಯಾಡ್ಜಬೋವ್‌ ಅವರನ್ನು ಮಣಿಸಿ ಭಾರತಕ್ಕೆ ಮುನ್ನಡೆ ಒದಗಿಸಿದ್ದರು. 

ಹರಿಕೃಷ್ಣ ಅವರು ಜೋರ್ಗಿ ಕೋರಿ ಅವರನ್ನು ಸೋಲಿಸಿ ಮುನ್ನಡೆಯನ್ನು ಹೆಚ್ಚಿಸಿದ್ದರು. ಮೂರನೇ ಬೋರ್ಡ್‌ನಲ್ಲಿ ಇರಾನ್ ಆಟಗಾರ ಅಲಿರೇಜಾ ಫಿರೌಜಾ ಭಾರತದ ವಿದಿತ್‌ ಗುಜರಾತಿ ಅವರನ್ನು ಸೋಲಿಸಿ ಹಿನ್ನಡೆ ತಗ್ಗಿಸಿದರು. ಆದರೆ ಅಂತಿಮ ಪಂದ್ಯದಲ್ಲಿ ಡಿ.ಹಾರಿಕಾ, ಮರಿಯಾ ಮಝಿಚುಕ್ ಎದುರು ಡ್ರಾ ಸಾಧಿಸಿದ್ದರಿಂದ ಭಾರತ ಸಂಭ್ರಮಿಸಿತು.

ಈ ಟೂರ್ನಿ ಡಬಲ್‌ ರೌಂಡ್‌ ರಾಬಿನ್ ಮಾದರಿಯಲ್ಲಿ ನಡೆಯುತ್ತಿದೆ. 4 ಬೋರ್ಡ್‌ಗಳ ಪ್ರತಿ ಪಂದ್ಯದಲ್ಲಿ ಒಂದು ತಂಡದಿಂದ ಮೂವರು ಪುರುಷರು ಹಾಗೂ ಓರ್ವ ಮಹಿಳೆ ಕಣಕ್ಕಿಳಿಯುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು