ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾದಲ್ಲಿ ಮಲ್ಲಕಂಬ, ಯೋಗಾಸನ

Last Updated 11 ಏಪ್ರಿಲ್ 2022, 14:03 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲಕಂಬ ಮತ್ತು ಯೋಗಾಸನವನ್ನು ಈ ಬಾರಿಯ ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ (ಕೆಐಯುಜಿ) ಸೇರಿಸಲಾಗಿದೆ. ಇದರೊಂದಿಗೆ ಕೂಟದ ಎರಡನೇ ಆವತ್ತಿ 20 ವಿಭಾಗಗಳ ಸ್ಪರ್ಧೆಗೆ ವೇದಿಕೆಯಾಗಲಿದೆ.

ಇದೇ 24ರಿಂದ ಮೇ 3ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಕೂಟಕ್ಕೆ ಈಗಾಗಲೇ 189 ವಿಶ್ವವಿದ್ಯಾಲಯಗಳಿಂದ 4,529 ಕ್ರೀಡಾಪಟುಗಳು ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಕೇಂದ್ರದ ಕ್ರೀಡಾ ಇಲಾಖೆಯ ಕಾರ್ಯದರ್ಶಿ ಸುಜಾತಾ ಚತುರ್ವೇದಿ ತಿಳಿಸಿದರು.

ವಿಧಾನಸೌಧದಲ್ಲಿ ಸೋಮವಾರ ನಡೆದ ಆಯೋಜನಾ ಸಮಿತಿಯ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜೈನ್ ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ ಆಯೋಜಿಸಿರುವ ಕ್ರೀಡಾಕೂಟ ಕಳೆದ ವರ್ಷ ನಡೆಯಬೇಕಾಗಿತ್ತು. ಆದರೆ ಕೋವಿಡ್‌–19ರಿಂದಾಗಿ ಮುಂದೂಡಲಾಗಿತ್ತು’ ಎಂದರು.

‘ಈ ಬಾರಿ ಒಟ್ಟು 275 ಚಿನ್ನದ ಪದಕಗಳಿಗಾಗಿ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಪಾಲ್ಗೊಳ್ಳುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಒಡಿಶಾದಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ 3150 ಮಂದಿ ಭಾಗವಹಿಸಿದ್ದರು’ ಎಂದು ವಿವರಿಸಿದರು.

‘ಕುಸ್ತಿ, ವೇಟ್‌ಲಿಫ್ಟಿಂಗ್‌, ಜೂಡೊ, ಕಬಡ್ಡಿ, ವಾಲಿಬಾಲ್‌, ಈಜು, ಮಲ್ಲಕಂಬ, ಯೋಗಾಸನ, ಆರ್ಚರಿ, ಫೆನ್ಸಿಂಗ್‌, ಕರಾಟೆ, ಬಾಕ್ಸಿಂಗ್‌ ಮತ್ತು ಫುಟ್ಬಾಲ್‌ ಸ್ಪರ್ಧೆಗಳು ಕನಕಪುರ ರಸ್ತೆಯಲ್ಲಿರುವ ಜೈನ್‌ ವಿವಿ ಆವರಣದಲ್ಲಿ ನಡೆಯಲಿವೆ. ಫುಟ್ಬಾಲ್‌, ಟೇಬಲ್‌ ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಟೆನ್ನಿಸ್‌ ಸ್ಪರ್ಧೆಗಳು ಜೈನ್‌ ಸ್ಪೋರ್ಟ್ಸ್‌ ಸ್ಕೂಲ್‌ನಲ್ಲಿ ನಡೆಯಲಿವೆ. ಅಥ್ಲೆಟಿಕ್ಸ್‌ ಹಾಗೂ ಬ್ಯಾಸ್ಕೆಟ್‌ಬಾಲ್‌ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು ಶೂಟಿಂಗ್‌ ಭಾರತ ಕ್ರೀಡಾ ಪ್ರಾಧಿಕಾರದ ನೇತಾಜಿ ಸುಭಾಶ್ಚಂದ್ರ ಬೋಸ್‌ ಶೂಟಿಂಗ್‌ ರೇಂಜ್‌ನಲ್ಲಿ ನಡೆಯಲಿದೆ’ ಎಂದರು.

ರಾಜ್ಯದ ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಸಿ ನಾರಾಯಣ ಗೌಡ, ಆಯುಕ್ತ ಎಚ್‌.ಎನ್‌.ಗೋಪಾಲಕೃಷ್ಣ, ಭಾರತ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕ ಸಂದೀಪ್ ಪ್ರಧಾನ್, ಕಾರ್ಯದರ್ಶಿ ರೋಹಿತ್ ಭಾರದ್ವಾಜ್‌, ಭಾರತ ವಿಶ್ವವಿದ್ಯಾಲಯಗಳ ಸಂಘದ ಜಂಟಿ ಕಾರ್ಯದರ್ಶಿ ಬಲ್ಜೀತ್ ಸಿಂಗ್‌ ಮತ್ತಿತರರು ಇದ್ದರು.

ಡೋಪಿಂಗ್ ತಡೆಗೆ ಕಟ್ಟುನಿಟ್ಟಿನ ಕ್ರಮ

ಕೆಐಯುಜಿಯಲ್ಲಿ ಡೋಪಿಂಗ್ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಡೋಪಿಂಗ್ ವಿರುದ್ಧ ಜಾಗೃತಿ ಮೂಡಿಸುವುದಕ್ಕೂ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಆಯೋಜನಾ ಸಮಿತಿಯ ಅಧ್ಯಕ್ಷರೂ ಆಗಿರುವ ಸುಜಾತಾ ಚತುರ್ವೇದಿ ವಿವರಿಸಿದರು. ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವನೆಗೆ ಸಂಬಂಧಿಸಿದ ಪರೀಕ್ಷೆಗೆ ಒಳಗಾಗುವುದು ಕಡ್ಡಾಯ. ಇದಕ್ಕಾಗಿ ಎಲ್ಲ ಕಡೆ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

ಈ ಬಾರಿ ಹಸಿರು ಕ್ರೀಡಾಕೂಟ ಘೋಷಣೆಯಡಿ ಸ್ಪರ್ಧೆಗಳು ನಡೆಯುವ ಸ್ಥಳಗಳನ್ನು ಪ್ಲಾಸ್ಟಿಕ್ ಮುಕ್ತ ಮತ್ತು ಕಸಮುಕ್ತ ಮಾಡಲಾಗುವುದು. ಓಡಾಡಲು ವಿದ್ಯುತ್‌ ಚಾಲಿತ ವಾಹನಗಳನ್ನು ಬಳಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT