ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಪಟುಗಳು, ಕೋಚ್‌ಗಳ ಪ್ರತಿಭಟನೆ

Last Updated 5 ಏಪ್ರಿಲ್ 2021, 16:09 IST
ಅಕ್ಷರ ಗಾತ್ರ

ಬೆಂಗಳೂರು: ಕೋಚ್‌ಗಳು, ಈಜುಪಟುಗಳು ಮತ್ತು ಅವರ ಪಾಲಕರ ಸಹನೆಯ ಕಟ್ಟೆಯೊಡೆಯಿತು. ನಗರದ ಕಂಠೀರವ ಕ್ರೀಡಾಂಗಣ ಆವರಣದಲ್ಲಿರುವ ರಾಜ್ಯ ಈಜುಸಂಸ್ಥೆಯ ಕಚೇರಿ ಬಳಿ ಸೋಮವಾರ ಜಮಾಯಿಸಿದ 600ಕ್ಕೂ ಹೆಚ್ಚು ಮಂದಿ ಈಜುಕೇಂದ್ರ ಪುನರಾರಂಭಿಸಲು ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಇದೇ ವೇಳೆ ರಾಜ್ಯ ಈಜು ಸಂಸ್ಥೆಯ ಅಧ್ಯಕ್ಷ ಗೋಪಾಲ ಹೊಸೂರು ಅವರ ನೇತೃತ್ವದಲ್ಲಿ ನಿಯೋಗವೊಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈಜುಕೊಳಗಳನ್ನು ಆದಷ್ಟು ಶೀಘ್ರ ಪುನರಾರಂಭಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಮತ್ತು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರೊಂದಿಗೆ ಬೆಳಿಗ್ಗೆ ಚರ್ಚಿಸಲಾಯಿತು. 20 ದಿನ ಈಜುಕೊಳಗಳನ್ನು ಮುಚ್ಚಲು ಆದೇಶ ನೀಡಿರುವುದರಿಂದ ಸ್ಪರ್ಧಿಗಳ ತರಬೇತಿಗೆ ತೊಂದರೆಯಾಗಿದೆ. ಒಲಿಂಪಿಕ್ಸ್‌ಗೆ ಅಭ್ಯಾಸ ಮಾಡುವವರಿಗೆ ತೀವ್ರ ನಿರಾಸೆಯಾಗಿದೆ. ಹೊಸ ಮಾರ್ಗಸೂಚಿಯಿಂದಾಗಿ ಸಾವಿರಕ್ಕೂ ಹೆಚ್ಚು ಈಜುಪಟುಗಳ ಅಭ್ಯಾಸಕ್ಕೆ ಕುತ್ತುಂಟಾಗಿದೆ’ ಎಂದು ಗೋಪಾಲ ಹೊಸೂರ್ ತಿಳಿಸಿದ್ದಾರೆ.

ಕೋವಿಡ್–19ರ ಕಾರಣದಿಂದ ಕಳೆದ ವರ್ಷ ಅನೇಕ ತಿಂಗಳು ಈಜುಕೊಳಗಳನ್ನು ಮುಚ್ಚಲಾಗಿತ್ತು. ಇದರಿಂದ ಕ್ರೀಡಾಪಟುಗಳ ಅಭ್ಯಾಸಕ್ಕೂ ಕೋಚ್‌ಗಳು ಮತ್ತು ಈಜುಕೊಳ ಸಿಬ್ಬಂದಿಯ ನಿತ್ಯಜೀವನಕ್ಕೂ ತೊಂದರೆಯಾಗಿತ್ತು. ಈ ವರ್ಷದ ಆರಂಭದಲ್ಲಿ ಈ ಕ್ಷೇತ್ರ ಚೇತರಿಕೆಯ ಹಾದಿಗೆ ಮರಳಿತ್ತು. ಅಷ್ಟರಲ್ಲಿ ಮತ್ತೆ ಆಘಾತವಾಗಿದೆ.

ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಈಜುಕೊಳವನ್ನು ಆಶ್ರಯಿಸಿದ್ದಾರೆ. ರಾಜ್ಯದಲ್ಲಿ ಅಭ್ಯಾಸ ಮಾಡಿದ ಅನೇಕ ಮಂದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಪದಕಗಳನ್ನು ಗಳಿಸಿಕೊಟ್ಟಿದ್ದಾರೆ. ಮೂರು ದಶಕಗಳಲ್ಲಿ ದೇಶದಲ್ಲಿ ರಾಜ್ಯದ ಈಜುಪಟುಗಳು ಪ್ರಾಬಲ್ಯ ಸಾಧಿಸಿದ್ದಾರೆ. ದುರದೃಷ್ಟವಶಾತ್‌ ಈಗ ಅಭ್ಯಾಸಕ್ಕೆ ತೊಂದರೆಯಾಗಿದೆ’ ಎಂದು ರಾಜ್ಯ ಈಜುಸಂಸ್ಥೆಯ ಕಾರ್ಯದರ್ಶಿ ಸತೀಶ್‌ ಎಂ. ಕುಮಾರ್ ತಿಳಿಸಿದ್ದಾರೆ.

ನಿರ್ಬಂಧ ತೆರವಿಗೆ ಒತ್ತಾಯ
ಮೈಸೂರು:
‘ಕೋವಿಡ್‌–19 ಹೊಸ ಮಾರ್ಗಸೂಚಿಯಂತೆ ಈಜುಕೊಳ ಮುಚ್ಚಿರುವುದರಿಂದ ತರಬೇತಿಗೆ ತೊಂದರೆಯಾಗಿದೆ. ಚಿತ್ರಮಂದಿರ ಮತ್ತು ಜಿಮ್ ಮಾದರಿಯಲ್ಲೇ ಈಜುಕೊಳ ತೆರೆಯಲು ಅವಕಾಶ ನೀಡಬೇಕು’ ಎಂದು ರಾಜ್ಯ ಈಜು ಸಂಸ್ಥೆ ಕಾರ್ಯಕಾರಿ ಸಮಿತಿ ಸದಸ್ಯ ಎಸ್‌.ಸುಂದರೇಶ್‌ ಒತ್ತಾಯಿಸಿದರು.

‘ಈಜುಕೊಳಗಳ ಮೇಲೆ ಹೇರಿರುವ ನಿರ್ಬಂಧದಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧಿಗಳ ತರಬೇತಿಗೆ ಅಡ್ಡಿಯಾಗಿದೆ. ರಾಜ್ಯದಲ್ಲಿರುವ 50ಕ್ಕೂ ಹೆಚ್ಚು ಈಜುಕೊಳಗಳಲ್ಲಿ ನಿತ್ಯ ಸಾವಿರಾರು ಸ್ಪರ್ಧಿಗಳು ಅಭ್ಯಾಸ ಮಾಡುತ್ತಾರೆ. ಈಗ ಅವರೆಲ್ಲ ತೊಂದರೆಗೆ ಸಿಲುಕಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಾರ್ವಜನಿಕ ಹಾಗೂ ಖಾಸಗಿ ಈಜುಕೊಳಗಳಲ್ಲಿ ಸುರಕ್ಷಾ ನಿಯಮಾವಳಿ ಪಾಲಿಸಲಾಗುತ್ತಿದೆ. ಕ್ಲೋರಿನೇಟೆಡ್‌ ಈಜುಕೊಳದ ನೀರಿನಲ್ಲಿ ಕೋವಿಡ್‌ ಹರಡಲು ಸಾಧ್ಯವಿಲ್ಲ. ಈಜುವುದರಿಂದ ಶ್ವಾಸಕೋಶಗಳು ಬಲವಾಗುತ್ತವೆ’ ಎಂದರು. ಈ ವೇಳೆ ಸಂಸ್ಥೆ ಜಂಟಿ ಕಾರ್ಯದರ್ಶಿ ನಾಭಿರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT