ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೆನ್ನೈ ಸೀನಿಯರ್ ಕಿಂಗ್ಸ್‌’ ತಂಡಕ್ಕೆ ಮೆಚ್ಚುಗೆ

ದೋನಿ, ಅಂಬಟಿ ರಾಯುಡು ಆಟಕ್ಕೆ ಮನಸೋತ ದಿಗ್ಗಜರು
Last Updated 27 ಏಪ್ರಿಲ್ 2018, 14:40 IST
ಅಕ್ಷರ ಗಾತ್ರ

ಬೆಂಗಳೂರು: ‘ವಾವ್..ಅಂತಿಮ ಓವರ್‌ಗಳಲ್ಲಿ ಸಿಎಸ್‌ಕೆ ಆಡಿದ ರೀತಿ ಅದ್ಭುತ. ದೀರ್ಘ ಕಾಲದ ಅನುಭವದಿಂದ ಇದು ಸಾಧ್ಯವಾಗಿದೆ’–

ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡದ ಆಟದ ಕುರಿತು ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಅಲ್ಬೀ ಮಾರ್ಕೆಲ್ ಅವರು ಟ್ವಿಟ ರ್‌ನಲ್ಲಿ ವ್ಯಕ್ತಪಡಿಸಿರುವ ಮೆಚ್ಚುಗೆ ಇದು.

ಹೋದ ಜನವರಿಯಲ್ಲಿ ಐಪಿಎಲ್ ತಂಡಗಳಿಗೆ ಆಟಗಾರರ ಆಯ್ಕೆಗಾಗಿ ನಡೆದಿದ್ದ ಹರಾಜು ಪ್ರಕ್ರಿಯೆಯಲ್ಲಿ ಸಿಎಸ್‌ಕೆ ತಂಡವನ್ನು ನೋಡಿ ವ್ಯಂಗ್ಯ ಮಾಡಿದವರೇ ಹೆಚ್ಚು. ತಂಡದಲ್ಲಿರುವ ಹತ್ತು ಪ್ರಮುಖ ಆಟಗಾರರು 30 ವರ್ಷ ವಯಸ್ಸು ದಾಟಿದವರೇ ಆಗಿದ್ದರಿಂದ ಹಲವರು ಹುಬ್ಬೇರಿಸಿದ್ದರು.

ಉಳಿದ ತಂಡಗಳಲ್ಲಿರುವ ಯುವ ಆಟಗಾರರಿಗೆ ಸರಿಸಮನಾಗಿ ಆಡಬಲ್ಲರೇ ಎಂಬ ಪ್ರಶ್ನೆಗಳೂ ಸುಳಿದಾಡಿದ್ದವು. ಮಹೇಂದ್ರಸಿಂಗ್ ದೋನಿ (36 ವರ್ಷ), ಇಮ್ರಾನ್ ತಾಹೀರ್ (38), ಹರ್ಭಜನ್ ಸಿಂಗ್ (37), ಶೇನ್ ವಾಟ್ಸನ್ (36), ಡ್ವೇನ್ ಬ್ರಾವೊ (34), ಫಾಫ್ ಡುಪ್ಲೆಸಿ (33), ಕೇದಾರ್ ಜಾಧವ್ (32), ಸುರೇಶ್ ರೈನಾ (31), ಅಂಬಟಿ ರಾಯುಡು (32), ಕರಣ್ ಶರ್ಮಾ (31) ಅವರ ತಂಡವನ್ನು ಕೆಲವರು ‘ಚೆನ್ನೈ ಸೀನಿಯರ್ ಕಿಂಗ್ಸ್’ ಎಂದು ಟ್ವೀಟ್ ಮಾಡಿದ್ದರು.

ಆದರೆ ಈಗ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿರುವ ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

ಅದರಲ್ಲೂ ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಅಮೋಘ ಆಟವಾಡಿದ ಅಂಬಟಿ ರಾಯುಡು (82; 53ಎ, 3ಬೌಂ, 8ಸಿ) ಮತ್ತು ದೋನಿ (70; 34ಎ, 1ಬೌಂ, 7ಸಿ) ಅವರ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 205 ರನ್‌ ಗಳಿಸಿತ್ತು. ಕಠಿಣ ಗುರಿಯನ್ನು ಬೆನ್ನತ್ತಿದ್ದ ಸಿಎಸ್‌ಕೆ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತ್ತು.

9 ಓವರ್‌ಗಳಲ್ಲಿ 74 ರನ್‌ಗಳು ಸೇರುವಷ್ಟರಲ್ಲಿ ನಾಲ್ವರು ಪ್ರಮುಖ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಸೇರಿದ್ದರು. ದೋನಿ ಮತ್ತು ರಾಯುಡು ಅವರು ಐದನೇ ವಿಕೆಟ್ ಜೊತೆಯಾಟದಲ್ಲಿ ಗಳಿಸಿದ 101 ರನ್‌ಗಳ ಬಲದಿಂದ ತಂಡವು 19.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 207 ರನ್‌ ಗಳಿಸಿತು.

‘ದೋನಿ ತಮ್ಮ ಕಥೆಯನ್ನು ತಾವೇ ಬರೆದುಕೊಳ್ಳುತ್ತಾರೆ. ಅವರಿಗೆ ಅವರೇ ಸಾಟಿ’ ಎಂದು ಇಂಗ್ಲಿಷ್‌ ವಾಹಿನಿಯ ವೀಕ್ಷಕ ವಿವರಣೆಕಾರ ಅಲನ್ ವಿಲ್ಕಿನ್ಸ್‌ ಟ್ವೀಟ್ ಮಾಡಿದ್ದಾರೆ.

’ಇದು ಅದ್ಭುತ ಕ್ರಿಕೆಟ್ ಪಂದ್ಯ. ಅಂಬಟಿ ರಾಯುಡು, ದೋನಿ ಮತ್ತು ಆರ್‌ಸಿಬಿಯ ಎಬಿ ಡಿವಿಲಿಯರ್ಸ್‌ ಅವರ ಬ್ಯಾಟಿಂಗ್‌ ನೋಡುವುದು ಬಹಳ ವಿಶೇಷ ಅನುಭವ ನೀಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಕ್ರಿಕೆಟ್ ವಾತಾವರಣ ಎಷ್ಟೊಂದು ಅಮೋಘವಾಗಿದೆ’ ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಮೈಕೆಲ್ ಹಸ್ಸಿ ಬರೆದಿದ್ದಾರೆ.

‘ಓ ದೇವರೆ, ದಯವಿಟ್ಟು ನನ್ನನ್ನು ಮಲಗಲು ಬಿಡು. ದೋನಿಯ ಚೆಂದದ ಬ್ಯಾಟಿಂಗ್ ಕಾಡುತ್ತಿದೆ. ಅವರೇ ನಿಜ ವಾದ ಯುನಿವರ್ಸ್ ಬಾಸ್’ ಎಂದು ಆಸ್ಟ್ರೇಲಿಯಾದ ಹಿರಿಯ ಆಟಗಾರ ಮ್ಯಾಥ್ಯೂ ಹೆಡನ್ ಶ್ಲಾಘಿಸಿದ್ದಾರೆ.

ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಸಲಹೆಗಾರ ವೀರೇಂದ್ರ ಸೆಹ್ವಾಗ್ ಕೂಡ ದೋನಿಯನ್ನು ಶ್ಲಾಘಿಸುವಲ್ಲಿ ಹಿಂದೆ ಬಿದ್ದಿಲ್ಲ. ‘ಎಂ.ಎಸ್. ದೋನಿ ಯಾವಾಗಲೂ ಚಮತ್ಕಾರವನ್ನೇ ಮಾಡ್ತಾ ಇರ್ತಿರಿ. ಮತ್ತೊಮ್ಮೆ ನೀವು ಶ್ರೇಷ್ಠ ಎಂದು ತೋರಿಸಿದ್ದೀರಿ. ಚೆನ್ನಾಗಿ ಆಡಿದಿರಿ’ ಎಂದು ಟ್ವೀಟ್ ಮಾಡಿದ್ದಾರೆ.

ಕೊಹ್ಲಿಗೆ ದಂಡ
ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಎದುರು ನಡೆದ ಪಂದ್ಯದಲ್ಲಿ ನಿಗದಿಯ ವೇಳೆಯಲ್ಲಿ ಓವರ್‌ಗಳನ್ನು ಬೌಲಿಂಗ್ ಮಾಡದ ಕಾರಣ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ₹ 12 ಲಕ್ಷ ದಂಡ ವಿಧಿಸಲಾಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 205 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಸಿಎಸ್‌ಕೆ ತಂಡವು 5 ವಿಕೆಟ್‌ಗಳಿಂದ ಜಯಿಸಿತ್ತು.

‘ಆರ್‌ಸಿಬಿ ತಂಡವು ಈ ಟೂರ್ನಿಯಲ್ಲಿ ಮಾಡಿರುವ ಮೊದಲ ಪ್ರಮಾದ ಇದು. ನಿಗದಿಪಡಿಸಿದ ಸಮಯದಲ್ಲಿ ಓವರ್‌ಗಳು ಮುಗಿಯಲಿಲ್ಲ. ಆದ್ದರಿಂದ ದಂಡ ವಿಧಿಸಲಾಗಿದೆ’ ಎಂದು ಐಪಿಎಲ್ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

‘ಬೌಲರ್‌ಗಳದ್ದೇ ಅಪರಾಧ’
ಬೆಂಗಳೂರು:
ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ತಮ್ಮ ತಂಡವು ಸೋಲಲು ಬೌಲರ್‌ಗಳ ಕಳಪೆ ಆಟವೇ ಕಾರಣ ಎಂದು ಆರ್‌ಸಿಬಿ ತಂಡದ ನಾಯಕ ವಿರಾ‌ಟ್ ಕೊಹ್ಲಿ ಕಿಡಿ ಕಾರಿದ್ದಾರೆ. ತಮ್ಮ ತಂಡದ ಬೌಲರ್‌ಗಳು ಈ ರೀತಿ ಬೌಲಿಂಗ್‌ ಮಾಡುವುದು ‘ಅಪರಾಧ’ ಎಂದು ಹೇಳಿದ್ದಾರೆ.

ಬುಧವಾರ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಬೌಲರ್‌ಗಳು ಬೌಲಿಂಗ್ ಮಾಡಿದ ರೀತಿಯು ಸಮ್ಮತವಲ್ಲ. ಸಿಎಸ್‌ಕೆ ತಂಡವು 72 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ನಂತರದ ಅವಧಿಯಲ್ಲಿ ಕಬಳಿಸಿದ್ದು ಕೇವಲ ಒಂದು ವಿಕೆಟ್ ಮಾತ್ರ. ಇದು ಅಪರಾಧವೇ ಸರಿ. 205 ರನ್‌ಗಳ ಒಳ್ಳೆಯ ಮೊತ್ತದ ಬಲದಿಂದ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಬೌಲರ್‌ಗಳು ಸಫಲರಾಗಲಿಲ್ಲ’ ಎಂದರು.

‘ಪಿಚ್ ಸ್ಪರ್ಧಾತ್ಮಕವಾಗಿತ್ತು. ಸ್ಪಿನ್ ಬೌಲರ್‌ಗಳು ಉತ್ತಮವಾಗಿ ಆಡಿದರು. ಮುಂದಿನ ಪಂದ್ಯಗಳಿಗೆ ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ತುಂಬಬೇಕಿದೆ. ಅಲ್ಪಮೊತ್ತವಿದ್ದರೂ ಗೆಲ್ಲುವ ಛಲದ ಆಟವಾಡುವ ಗುಣವನ್ನು ಬೌಲರ್‌ಗಳಲ್ಲಿ ಬೆಳೆಸಬೇಕಿದೆ. ಅಂಬಟಿ ರಾಯುಡು ಚೆನ್ನಾಗಿ ಆಡಿದರು. ಈ ಟೂರ್ನಿಯಲ್ಲಿ ಮಹೇಂದ್ರಸಿಂಗ್ ಅವರ ಆಟ ಶ್ರೇಷ್ಠವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT