ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ದಶಕಗಳ ನಂತರ ಕೆಜಿಎಫ್ ಕಾಂಗ್ರೆಸ್ ಮಡಿಲಿಗೆ

Last Updated 16 ಮೇ 2018, 13:03 IST
ಅಕ್ಷರ ಗಾತ್ರ

ಕೆಜಿಎಫ್: ಕಾಂಗ್ರೆಸ್ ಅಭ್ಯರ್ಥಿ ರೂಪಕಲಾ ಭರ್ಜರಿ ಜಯಗಳಿಸುವುದರೊಂದಿಗೆ ಕಾಂಗ್ರೆಸ್ ಪಕ್ಷವು ಐವತ್ತು ವರ್ಷಗಳ ನಂತರ ಮೊದಲ ಬಾರಿಗೆ ಶಾಸಕ ಸ್ಥಾನವನ್ನು ಹೊಂದಿದೆ.

ಸಂಸದ ಕೆ.ಎಚ್‌.ಮುನಿಯಪ್ಪ ಅವರ ಹಿರಿಯ ಪುತ್ರಿಯಾದ ರೂಪಕಲಾ ಕಳೆದ ಎಂಟು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕಿಯಾದ ನಂತರ ಬ್ಯಾಂಕ್‌ನಿಂದ ಮನೆ ಬಾಗಿಲಿಗೆ ಸಾಲ ನೀಡುವ ಯೋಜನೆ ಅವರನ್ನು ಜನಪ್ರಿಯಗೊಳಿಸಿತು. ಮಹಿಳೆಯರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡ ಅವರು ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಸಾಲವನ್ನು ಖುದ್ದಾಗಿ ವಿತರಣೆ ಮಾಡಿದ್ದಾರೆ. ಒಂದು ವರ್ಷದಿಂದೀಚೆಗೆ ಪ್ರತಿ ವಾರವೂ ಗ್ರಾಮೀಣ ಮತ್ತು ನಗರ ಪ್ರದೇಶದ ಬಡಾವಣೆಗಳಲ್ಲಿ ಸಾಲ ವಿತರಣೆ ಮಾಡುವ ಮೂಲಕ ಮತದಾರರಿಗೆ ಚಿರಪರಿಚಿತರಾದರು. ಮೈನಿಂಗ್ ಪ್ರದೇಶದಲ್ಲಿ ಮಹಿಳೆಯರೊಂದಿಗೆ ವ್ಯವಹರಿಸಲು ತಮಿಳು ಕಲಿತು, ಅದರಲ್ಲಿಯೇ ಭಾಷಣವನ್ನು ಕೂಡ ಮಾಡಲು ಶುರು ಮಾಡಿದ್ದು, ಅವರ ಜನಪ್ರಿಯತೆ ಹೆಚ್ಚಲು ಕಾರಣವಾಯಿತು.

ತಂದೆಯವರು ಕ್ಷೇತ್ರಕ್ಕೆ ಸಾಕಷ್ಟು ಸೇವೆ ಮಾಡಿದ್ದಾರೆ. ಅವರ ನೆರಳಿನಲ್ಲಿಯೇ ನಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಎನ್ನುತ್ತಲೇ, ತನ್ನದೇ ಆದ ವಲಯವನ್ನು ಅವರು ರಚಿಸಿಕೊಂಡಿದ್ದರು. ಕೆ.ಎಚ್‌.ಮುನಿಯಪ್ಪರವರಿಗಿಂತ ರೂಪಕಲಾ ಎಲ್ಲ ವರ್ಗಗಳಿಗೂ ಪರಿಚಿತರಾಗಿದ್ದರು. ಇದರ ಮಧ್ಯೆ ಮಾಜಿ ಶಾಸಕ ವೈ.ಸಂಪಂಗಿ ಕುಟುಂಬದ ವಿರುದ್ಧ ಇದ್ದ ವಿರೋಧಿ ಅಲೆ ಕೂಡ ರೂಪ ಅವರಿಗೆ ಹೆಚ್ಚು ಮತ ಗಳಿಸುವಲ್ಲಿ ಕಾರಣವಾಯಿತು.

ನಗರ ಮತ್ತು ಗ್ರಾಮೀಣ ಭಾಗದ ಬಿಜೆಪಿ ಮುಖಂಡರು ನೇರವಾಗಿ ಈ ಬಾರಿ ಕಣಕ್ಕೆ ಇಳಿದರು. ಹೊರಗಿನಿಂದ ಬಂದು ಇಲ್ಲಿನ ಮೂಲ ಬಿಜೆಪಿಯವರನ್ನು ಕಡೆಗಣಿಸಿರುವ ಸಂಪಂಗಿ ಕುಟುಂಬವನ್ನು ಸೋಲಿಸಿದರೆ, ಮುಂದಿನ ದಿನಗಳಲ್ಲಿ ಸ್ಥಳೀಯ ಬಿಜೆಪಿ ಅಭ್ಯರ್ಥಿಯನ್ನು ಕೂಡಬಹುದು. ಪಕ್ಷವನ್ನು ಸಂಘಟಿಸಬಹುದು ಎಂಬ ಕಾರಣದಿಂದ ಬಹುತೇಕ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ನೇರ ಬೆಂಬಲ ವ್ಯಕ್ತಪಡಿಸಿದರು. ಕಾಂಗ್ರೆಸ್ ಕಾರ್ಯಕರ್ತರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಚುನಾವಣೆಯಲ್ಲಿ ಕೆಲಸ ಮಾಡಿ, ಬಿಜೆಪಿಯ ಅಶ್ವಿನಿ ಸೋಲಿಗೆ ಕಾರಣವಾದರು.

ಮೊದಲು ವೈ.ಸಂಪಂಗಿ, ನಂತರ ಅವರ ತಾಯಿ ವೈ.ರಾಮಕ್ಕ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮಗಳು ಅಶ್ವಿನಿ. ನಂತರ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಅಶ್ವಿನಿ ಅಭ್ಯರ್ಥಿಯಾಗಿದ್ದು, ವಿರೋಧಿಗಳಿಗೆ ದೊಡ್ಡ ವರದಾನವಾಯಿತು. ಸಂಪಂಗಿ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದು, ಜೈಲು ಪಾಲಾಗಿದ್ದು, ನಂತರ ಯಡಿಯೂರಪ್ಪ ಸರ್ಕಾರ ಉರುಳಿಸಲು ವಿರೋಧಿ ಮುಖಂಡರ ಜೊತೆ ಕೈಜೋಡಿಸಿದ್ದು ಬಹು ಚರ್ಚಿತವಾಯಿತು. ಇಡೀ ಕ್ಷೇತ್ರದ ಬಿಜೆಪಿಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಸಂಪಂಗಿಯವರಿಗೆ ಈಚೆಗೆ ಅಮಿತ್ ಷಾ ಬಂದಾಗ, ವೇದಿಕೆಯಲ್ಲಿ ಸ್ಥಾನ ಕಲ್ಪಿಸಲಿಲ್ಲ. ಅದೇ ರೀತಿ ನರೇಂದ್ರ ಮೋದಿ ಸಭೆಯಲ್ಲಿ ಸಹ ವೇದಿಕೆಗೆ ಆಹ್ವಾನವಿರಲಿಲ್ಲ.ಈ ಎಲ್ಲ ಘಟನೆಗಳು ಕಾಂಗ್ರೆಸ್ ಪಕ್ಷಕ್ಕೆ ನೆರವಾದವು.

ಮೂರು ಬಾರಿ ಶಾಸಕರಾಗಿದ್ದ ಎಂ.ಭಕ್ತವತ್ಸಲಂ‌ (ಜೆಡಿಎಸ್‌) ಮತ್ತು ಎರಡು ಬಾರಿ ಶಾಸಕರಾಗಿದ್ದ ಎಸ್‌.ರಾಜೇಂದ್ರನ್ (ಆರ್‌ಪಿಐ) ಕೂಡ ದಯನೀಯ ಸೋಲನ್ನು ಅನುಭವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT