ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಜರಿ ನಂತರ ಪಾಂಡ್ಯ ಫಿಟ್‌ನೆಸ್‌ ಕಸರತ್ತು

Last Updated 29 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್‌ ತಂಡದ ಭರವಸೆಯ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕಳೆದ ಅಕ್ಟೋಬರ್‌ನಲ್ಲಿ ಬೆನ್ನೆಲುಬಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ವೈದ್ಯರು16 ವಾರಗಳ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು. ಆರೇಳು ತಿಂಗಳು ಹೊರಗುಳಿಯುತ್ತಾರೆ ಎಂದೇ ಕೆಲವರು ಅಂದಾಜಿಸಿದ್ದರು. ಆದರೆ, ಮೂರೇ ತಿಂಗಳಿಗೆ ಮತ್ತೆ ಅಂಗಳಕ್ಕಿಳಿದ್ದಾರೆ. ಡಿ.19ರ ಇಳಿ ಸಂಜೆಯಲ್ಲಿ ನೆಟ್‌ ಅಭ್ಯಾಸದಲ್ಲಿ ತೊಡಗಿದ್ದ ಅವರು ಚೆಂಡನ್ನು‍ಪೆವಿಲಿಯನ್‌ಗೆ ಅಟ್ಟುತ್ತಿರುವ ವಿಡಿಯೊವೊಂದನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಮೂರು ತಿಂಗಳಲ್ಲಿ ಅವರು ಮೊದಲಿನಂತಾಗಲು ಪಟ್ಟ ಪರಿಶ್ರಮ ಅವರ ಕ್ರಿಕೆಟ್‌‍ಪ್ರೀತಿಯನ್ನು ತೋರಿಸಿದೆ. ಸಾವಿರಾರು ಅಭಿಮಾನಿಗಳು ಅವರ ಫಿಟ್‌ನೆಸ್‌ ಕಸರತ್ತಿಗೆ ಬೆರಗಾಗಿದ್ದಾರೆ. ಅಕ್ಟೋಬರ್‌ನ ಮೊದಲ ವಾರದಲ್ಲಿ ‘ಬೇಬಿ ಸ್ಟೆಪ್ಸ್‌’ ಎಂದು ತಮ್ಮ ಫಿಟ್‌ನೆಸ್‌ ಅಭ್ಯಾಸವನ್ನು ಆರಂಭಿಸಿದಾಗ ಅವರು ಇನ್ನೊಬ್ಬರ ಸಹಾಯ ಪಡೆದು ನಡೆಯಬೇಕಿತ್ತು. ಆಗ ಹಲವು ಅಭಿಮಾನಿಗಳು ಕಣ್ಣೀರಿಟ್ಟಿದ್ದರು. ಆದರೆ, ಇದೇ ತಿಂಗಳಆರಂಭಕ್ಕೆ ಓಡುತ್ತಿರುವ ವಿಡಿಯೊ ಹಂಚಿಕೊಂಡಿರುವುದು ಎಲ್ಲ ಕ್ರಿಕೆಟ್‌ಪ್ರಿಯರಿಗೂ ಖುಷಿಯನ್ನು ತರಿಸಿತ್ತು.

ಇದೇ ಸೆ.23ರಂದು ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟ್ವೆಂಟಿ–20 ಪಂದ್ಯವೇ ಪಾಂಡ್ಯ ಆಡಿದ ಕೊನೆಯ ಪಂದ್ಯವಾಗಿತ್ತು. ಮುಂದಿನ ವರ್ಷದ ಐಪಿಎಲ್‌ ವೇಳೆಗೆ ಫಿಟ್‌ ಆಗುವ ನಿರೀಕ್ಷೆಯನ್ನು ಹೊತ್ತಿದ್ದರು. ಆದರೆ, ಜನವರಿ 2020ರ ವೇಳೆಗೆ ಆರಂಭವಾಗಲಿರುವ ನ್ಯೂಜಿಲೆಂಡ್‌ ಸರಣಿಗೆ ಆಯ್ಕೆ ಆಗುವ ಆತ್ಮವಿಶ್ವಾಸವನ್ನು ಪ್ರದರ್ಶಿಸಿದ್ದಾರೆ.

ತಂಡಕ್ಕೆ ಮರಳುವ ವಿಶ್ವಾಸ

ಆರಂಭದಲ್ಲಿ ಪಿಲಾಟಿಸ್‌ ತರಬೇತುದಾರರೊಂದಿಗೆ ಸ್ನಾಯು ಮತ್ತು ಮೂಳೆಗಳು ಬಲವಾಗಲು ಅಭ್ಯಾಸ ನಡೆಸಿದರು. ಹಲವು ದಿನಗಳ ಶ್ರಮ ಅವರ ದೇಹ ಸಾಮರ್ಥ್ಯವನ್ನು ಇಮ್ಮಡಿಗೊಳಿಸಿತು. ತಟ್ಟೆಬಟ್ಟುಗಳನ್ನು ಎತ್ತುವ (ಪವರ್‌ ಲಿಫ್ಟ್) ಸಾಹಸಕ್ಕೆ ನಿಧಾನವಾಗಿ ಅಣಿಯಾಗುತ್ತಿದ್ದಾರೆ. ಮೊದಲ ಪವರ್‌ ಟ್ರೈನಿಂಗ್‌ ಅಭ್ಯಾಸಕ್ಕೆ ಹೊರಳುವಷ್ಟು ಚೈತನ್ಯವನ್ನು ಇದೀಗ ತುಂಬಿಕೊಂಡಿದ್ದಾರೆ. ನ್ಯೂಜಿಲೆಂಡ್‌ ಸರಣಿ ಜನವರಿ ಕೊನೆಗೆ ಆರಂಭವಾಗಲಿದ್ದು, ಆ ವೇಳೆಗೆ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

ಭಯವಾಗಿತ್ತು!

‘ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ತಡಮಾಡುವಂತಿರಲಿಲ್ಲ. ಇದು ಕತ್ತಿಯಂಚಿನ ದಾರಿ ಎಂದು ಗೊತ್ತಿತ್ತು. ಅಂಗಳವನ್ನು ಕೆಲ ತಿಂಗಳು ಕಳೆದುಕೊಳ್ಳುತ್ತೇನೆ ಎಂಬುದೂ ತಿಳಿದಿತ್ತು. ಇದೀಗ ನಿರ್ಲಕ್ಷಿಸಿದರೆ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟ್ವೆಂಟಿ20 ವಿಶ್ವಕಪ್‌ನ ಟಿಕೆಟ್‌ ಮಿಸ್‌ ಆಗುವ ಭಯ ಶುರುವಾಯಿತು. ಮುಂದೆ ದೊಡ್ಡ ಮಟ್ಟದಲ್ಲಿ ನೋವುಗಳು ಎದುರಾಗುವ ಮೊದಲು ಈ ಶಸ್ತ್ರಚಿಕಿತ್ಸೆಗೊಳಗಾಗಬೇಕೆಂದು ನಿರ್ಧರಿಸಿದೆ. ಇದೀಗ ಚೇತರಿಸಿಕೊಂಡಿದ್ದೇನೆ. ಫಿಟ್‌ ಆಗಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಲಯಕ್ಕೆ ಹೊರಳಿದ ಪಾಂಡ್ಯ

ಕಳೆದ ಎರಡು ತಿಂಗಳಿನಿಂದ ನೆಟ್‌ ಅಭ್ಯಾಸವನ್ನು ಬಿಟ್ಟಿದ್ದ ಪಾಂಡ್ಯ ಮತ್ತೆ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಮೂಳೆ, ಸ್ನಾಯುಗಳನ್ನು ಬಲವಾಗಿಸಲು ಶ್ರಮಪಟ್ಟಿದ್ದಾರೆ. ಜಿಮ್‌ಗೆ ಹೋಗುವ ಮುಂಚೆ ಎಂದಿನಂತೆ ಕ್ರಿಕಟ್‌ ಮೈದಾನದಲ್ಲಿ ಓಡುವ ಪಾಂಡ್ಯ, ಜಿಮ್‌ನಲ್ಲಿ ಕಡಿಮೆ ತೂಕದ ತಟ್ಟೆಬಟ್ಟುಗಳನ್ನು ಎತ್ತುತ್ತಿದ್ದಾರೆ. ಕಾರ್ಡಿಯೊ ವ್ಯಾಯಾಮಗಳಿಗೆ ಈಗ ಹೆಚ್ಚು ಒತ್ತುನೀಡಿದ್ದಾರೆ.ಇಷ್ಟದ ‘ಎಬಿಎಸ್‌’ ವರ್ಕ್‌ಔಟ್‌ನ‍ಆರಂಭದ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ. ಇದೀಗ ಅವರ ಗುರಿ ಏನಿರುವುದು ತಮ್ಮ ದೇಹ ಸಾಮರ್ಥ್ಯವನ್ನು ಮೊದಲಿನ ಲಯಕ್ಕೆ ತರುವುದು. ಮೊದಲು ಮಾಡುತ್ತಿದ್ದವೇಟ್‌ ಲಿಫ್ಟಿಂಗ್‌, ಲೆಗ್‌ ಸ್ಕ್ವಾಟ್‌, ಪುಶ್‌ ಅಪ್‌, ಪುಲ್‌ ಅಪ್‌, ಸಿಟ್‌ ಅಪ್‌, ಕ್ರಂಚ್‌ ವ್ಯಾಯಾಮಗಳನ್ನು ಮತ್ತೆ ಆರಂಭಿಸಿದ್ದಾರೆ. ಇದಕ್ಕಾಗಿಯೇ ಅವರು ತಮ್ಮ ವಿಡಿಯೊ ಹಂಚಿಕೊಳ್ಳುವಾಗ ‘ಎಲ್ಲವೂ ಮೊದಲಿನಿಂದ’ ಎಂದು ಬರೆದುಕೊಂಡಿದ್ದರು.

ಕ್ರಿಕೆಟ್‌ ಮೂರೂ ಮಾದರಿಗಳಿಗೆ ಮತ್ತೆ ಸಿದ್ಧರಾಗುವ ಕನಸು ಅವರದು. ಕ್ಯಾಲ್ಸಿಯಂ, ವಿಟಮಿನ್‌ ಡಿ, ವಿಟಮಿನ್‌ ಸಿ, ಪೋಷಕಾಂಶಗಳಿರುವ ಆಹಾರವನ್ನು ಹೆಚ್ಚು ಸೇವಿಸುತ್ತಿದ್ದಾರೆ. ಆಗಾಗ ಸಲಾಡ್‌, ಹಣ್ಣಿನ ರಸ, ಮಧ್ಯಾಹ್ನ ಮತ್ತು ರಾತ್ರಿ ಭರ್ತಿ ಊಟ ಅವರಿಗೆ ಪ್ರಿಯ. ಬಿಡುವಾದಾಗೆಲ್ಲ ವ್ಯಾಯಾಮ ಮಾಡುವುದು ಅವರ ಇಷ್ಟದ ಹವ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT