ಶನಿವಾರ, ನವೆಂಬರ್ 23, 2019
17 °C

ಏಷ್ಯನ್‌ ಕಿರಿಯರ ಟಿ.ಟಿ: ಸೆಮಿಫೈನಲ್‌ಗೆ ಪಾಯಸ್‌ ಜೈನ್‌

Published:
Updated:

ಉಲಾನ್‌ಬಾತರ್‌, ಮಂಗೋಲಿಯಾ (ಪಿಟಿಐ): ಏಳನೇ ಶ್ರೇಯಾಂಕದ ಪಾಯಸ್‌ ಜೈನ್‌, 25ನೇ ಏಷ್ಯನ್‌ ಜೂನಿಯರ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಕೆಡೆಟ್‌ ಬಾಲಕರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ತಲುಪಿಸಿದ್ದಾನೆ. ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಆಟಗಾರ ಐದು ಸೆಟ್‌ಗಳ ಹೋರಾಟದಲ್ಲಿ ಮೂರನೇ ಶ್ರೇಯಾಂಕದ ಐಝಾಕ್‌ ಕ್ವೆಕ್‌ (ಸಿಂಗಪುರ) ವಿರುದ್ಧ 9–11, 11–6, 8–11, 11–6, 14–12 ರಲ್ಲಿ 3–2 ರಲ್ಲಿ ಜಯಗಳಿಸಿದ.

ಪಾಯಸ್‌ ಜೈನ್‌ನಿಗೆ ಈಗ ಕನಿಷ್ಠ ಕಂಚಿನ ಪದಕ ಖಚಿತವಾಗಿದ್ದು, ವಿಶ್ವ ಕೆಡೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಏಷ್ಯಾ ತಂಡದಲ್ಲೂ ಸ್ಥಾನ ದೊರೆಯಲಿದೆ. ಈ ಚಾಂಪಿಯನ್‌ಷಿಪ್‌ ಮುಂದಿನ ತಿಂಗಳು ಪೋಲೆಂಡ್‌ನ ವ್ಲಾಡಿಸ್ಲಾವೊವೊ ಎಂಬಲ್ಲಿ ನಡೆಯಲಿದೆ.

ಜೂನಿಯರ್‌ ಬಾಲಕರ ವಿಭಾಗದಲ್ಲಿ ಭಾರತ ಬೆಳ್ಳಿಯ ಪದಕ ಗೆದ್ದುಕೊಂಡಿತ್ತು. ಈಗ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ  ಎರಡನೇ ಪದಕ ಖಚಿತವಾಗಿದೆ.

ಇದಕ್ಕೆ ಮೊದಲು, ಆದರ್ಶ್‌ ಓಮ್‌ ಚೇಟ್ರಿ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ ಮಾಜಿ ನಂಬರ್‌ ಒನ್‌ ಆಟಗಾರ ಯಿಯು ಕ್ವಾನ್‌ ಟೊ (ಹಾಂಗ್‌ಕಾಂಗ್‌) ಮೇಲೆ ಜಯಗಳಿಸಿದ್ದ. ಆದರೆ ಎಂಟರ ಘಟ್ಟಕ್ಕಿಂತ ಮೇಲೆ ಹೋಗಲು ಸಾಧ್ಯವಾಗಿರಲಿಲ್ಲ. ಆದರ್ಶ್‌ 3–11, 11–9, 8–11, 6–11ರಲ್ಲಿ ಅಗ್ರ ಶ್ರೇಯಾಂಕದ ಯುವಾನ್ಯು ಚೆನ್‌ (ಚೀನಾ) ಎದುರು ಸೋಲನುಭವಿಸಿದ. ಭಾರತದ ಇನ್ನೊಬ್ಬ ಆಟಗಾರ ವಿಶ್ವ ದೀನದಯಾಳನ್‌ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ನಿರ್ಗಮಿಸಿದ್ದ.

ಜೂನಿಯರ್‌ ಬಾಲಕರ ಸಿಂಗಲ್ಸ್‌ನಲ್ಲಿ ಎಡಗೈ ಆಟಗಾರ ಮಾನುಷ್‌ ಷಾ (ಭಾರತ) 11–9, 11–5, 11–9, 10–12, 7–11, 5–11, 11–8ರಲ್ಲಿ ಸಿಂಗಪುರದ ಕುನ್‌ ಟಿಂಗ್‌ ಬೇ  ವಿರುದ್ಧ ಜಯಗಳಿಸಿ ಎಂಟರ ಘಟ್ಟ ತಲುಪಿದ್ದಾನೆ. ಮಾನುಷ್‌ ಮುಂದಿನ ಎದುರಾಳಿ ಜಪಾನ್‌ನ ಹಿರೊಟೊ ಶಿನೊಜುಕಾ.

ಕೆಡೆಟ್‌ ಬಾಲಕಿಯರ ವಿಭಾಗದಲ್ಲಿ ಭಾರತ ತಂಡದಲ್ಲಿರುವ ಕರ್ನಾಟಕದ ಆಟಗಾರ್ತಿ ಯಶಸ್ವಿನಿ ಘೋರ್ಪಡೆ ಎಂಟರ ಘಟ್ಟಕ್ಕೆ ಮುನ್ನಡೆದಿದ್ದಾಳೆ. ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಯಶಸ್ವಿನಿ 12–10, 11–8, 11–13, 9–11, 16–14ರಲ್ಲಿ ಹಾಂಗ್‌ಕಾಂಗ್‌ನ ಶಿಯು ಲಾಮ್‌ ಚೆ ಚಾನ್‌ ವಿರುದ್ಧ ಗೆದ್ದಳು. ಕರ್ನಾಟಕದ ಇನ್ನೋರ್ವ ಆಟಗಾರ್ತಿ ಅನರ್ಘ್ಯ ಮಂಜುನಾಥ್‌ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಥಾಯ್ಲೆಂಡ್‌ನ ವಾನ್ವಿಸ್‌ ಆಯವಿರಿಯಯೊಥಿನ್‌ ಎದುರು ಸೋಲನುಭವಿಸಿದಳು.

 

ಪ್ರತಿಕ್ರಿಯಿಸಿ (+)