ಪಿಬಿಎಲ್ ಹೊಸತನದ ಗರಡಿ

7

ಪಿಬಿಎಲ್ ಹೊಸತನದ ಗರಡಿ

Published:
Updated:
Prajavani

ಪಿಬಿಎಲ್ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಈ ಲೀಗ್ ಆಯೋಜಿಸಿದವರ ಬಗ್ಗೆ ನನಗೆ ತುಂಬ ಹೆಮ್ಮೆ ಇದೆ. ಇಂಥ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರುವುದು ನನ್ನ ಅದೃಷ್ಟ ಎಂದೇ ಭಾವಿಸಿದ್ದೇನೆ.

ಈ ಬಾರಿಯ ಮಿಶ್ರ ಡಬಲ್ಸ್‌ನಲ್ಲಿ ನಿಮ್ಮ ಜೋಡಿ ಮಥಾಯಸ್‌ ಕ್ರಿಸ್ಟಿಯನ್‌ಸೆನ್‌ ಕುರಿತು ಏನು ಹೇಳುತ್ತೀರಿ?

ಕ್ರಿಸ್ಟಿಯನ್‌ಸೆನ್ ಬಗ್ಗೆ ಎಷ್ಟು ಹೇಳಿದರೂ ಸಾಲದು. ತುಂಬ ಒಳ್ಳೆಯ ವ್ಯಕ್ತಿ, ಉತ್ತಮ ಆಟಗಾರ. ಆತನೊಂದಿಗೆ ಆಡಲು ಅವಕಾಶ ಸಿಕ್ಕಿರುವುದು ತುಂಬ ಖುಷಿಯ ವಿಷಯ. 24 ವರ್ಷದಲ್ಲೇ ಸಾಕಷ್ಟು ಕಲಿತಿದ್ದಾನೆ. ಅವರ ಪಾದಚಲನೆ, ಚುರುಕು ಇತ್ಯಾದಿಗಳನ್ನು ಕಂಡು ನಾನು ಕೂಡ ಬಹಳಷ್ಟು ಕಲಿತಿದ್ದೇನೆ. ಭವಿಷ್ಯದಲ್ಲಿ ಆತ ದೊಡ್ಡ ಸಾಧಕನಾಗುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ.

ಒಂದು ಹಣಾಹಣಿಯಲ್ಲಿ ಮೊದಲ ಪಂದ್ಯದಲ್ಲಿ ಮತ್ತು ಮೂರು ಹಣಾಹಣಿಗಳಲ್ಲಿ ಕೊನೆಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದೀರಿ. ಈ ಸಂದರ್ಭಗಳಲ್ಲಿ ಒತ್ತಡವನ್ನು ಹೇಗೆ ನಿಭಾಯಿಸಿಕೊಂಡಿರಿ?

ಎಲ್ಲ ಪಂದ್ಯಗಳಲ್ಲೂ ಒತ್ತಡ ಇದ್ದೇ ಇರುತ್ತದೆ. ಅದನ್ನು ಮೀರಿ ಆಟದ ಕಡೆಗೆ ಹೆಚ್ಚು ಗಮನ ಕೊಡುವುದು ಮುಖ್ಯ. ಇಲ್ಲಿ ಮಹತ್ವದ ಜವಾಬ್ದಾರಿ ಸಿಕ್ಕಿದ್ದು ಒಳ್ಳೆಯದಾಯಿತು ಎಂದೆನಿಸುತ್ತದೆ. ಯಾಕೆಂದರೆ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾದದ್ದು ಭವಿಷ್ಯದಲ್ಲಿ ಮಹತ್ವದ ಟೂರ್ನಿಗಳಲ್ಲಿ ಆಡಲು ಸಹಕಾರಿಯಾಗಬಹುದು.

ರಾಷ್ಟ್ರೀಯ ತಂಡದಲ್ಲಿ ನಿಮ್ಮ ಜೊತೆ ಆಡುವ ಸಾತ್ವಿಕ್ ‌ಮತ್ತು ಸಿಕ್ಕಿ ರೆಡ್ಡಿ ವಿರುದ್ಧ ಪಿಬಿಎಲ್‌ನಲ್ಲಿ ಆಡುವಾಗ ಏನನಿಸಿತ್ತು?

ರಾಷ್ಟ್ರೀಯ ಶಿಬಿರದಲ್ಲಿ ಒಟ್ಟಿಗೇ ಇದ್ದು, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಜೊತೆಯಾಗಿ ಆಡಿದವರ ವಿರುದ್ಧ ಇಲ್ಲಿ ಆಡುವುದು ಒಂದರ್ಥದಲ್ಲಿ ಸಂತಸದ ವಿಷಯವೇ. ಅದು ಒಂದು ಭಿನ್ನ ಅನುಭವ. ಎದುರಾಳಿಯ ತಂತ್ರಗಳು, ಆಟದ ಶೈಲಿ ಎಲ್ಲವೂ ತಿಳಿದಿರುವುದರಿಂದ ಹೆಚ್ಚು ತಲೆಕೆಡಿಸಿಕೊಳ್ಳುವಂಥಾದ್ದು ಏನೂ ಇರುವುದಿಲ್ಲ.

ಹೈದರಾಬಾದ್ ಹಂಟರ್ಸ್ ಎದುರಿನ ಹಣಾಹಣಿಯಲ್ಲಿ ಎದುರಾಳಿಗಳ ಟ್ರಂಪ್ ಪಂದ್ಯದಲ್ಲಿ ಗೆದ್ದು ಸಂಭ್ರಮಿಸಿದ್ದೀರಿ. ಆ ಪಂದ್ಯವನ್ನು ಹೇಗೆ ವಿಶ್ಲೇಷಿಸುತ್ತೀರಿ?

ಟ್ರಂಪ್‌ ಪಂದ್ಯದ ಕಲ್ಪನೆಯೇ ತುಂಬ ಖುಷಿ ಉಂಟು ಮಾಡಿದೆ. ಎದುರಾಳಿಯ ಟ್ರಂಪ್ ಪಂದ್ಯದಲ್ಲಿ ಗೆಲ್ಲುವುದು ಎಂದರೆ ದೊಡ್ಡ ಸವಾಲೇ ಸರಿ. ಸ್ವಂತ ತಂಡದ ಟ್ರಂಪ್ ಪಂದ್ಯವನ್ನು ಗೆದ್ದು ಪಾಯಿಂಟ್ ಉಳಿಸಿಕೊಳ್ಳುವುದು ಕೂಡ ಸವಾಲಿನ ಸಂಗತಿ. ಟ್ರಂಪ್ ಪಂದ್ಯಗಳಲ್ಲಿ ನಾನು ಖುಷಿಯಿಂದ ಆಡಿದ್ದೇನೆ.

ಪುಣೆ, ಬೆಂಗಳೂರು ಮತ್ತು ಡೆಲ್ಲಿ ತಂಡಗಳಲ್ಲಿ ಆಡಿ ಈಗ ಅವಧ್ ವಾರಿಯರ್ಸ್ ಪರ ಕಣಕ್ಕಿಳಿದಿದ್ದೀರಿ. ಈ ತಂಡಗಳ ಬಗ್ಗೆ ಏನನಿಸುತ್ತದೆ?

ಬೇರೆ ಬೇರೆ ತಂಡಗಳಲ್ಲಿ ಆಡಿದ್ದೇನೆ. ಹಿಂದೆ ಆಡಿದ ಎಲ್ಲ ತಂಡಗಳೂ ಮರೆಯಲಾರದ ಅನುಭವ ಸಂಪತ್ತನ್ನು ನೀಡಿವೆ. ಈ ಬಾರಿ ಅವಧ್ ವಾರಿಯರ್ಸ್‌ ಪರವಾಗಿ ತುಂಬ ಖುಷಿಯಿಂದ ಆಡುತ್ತಿದ್ದೇನೆ. ತಂಡದ ಸಹ ಆಟಗಾರರು, ಆಡಳಿತ ಮತ್ತು ಸಿಬ್ಬಂದಿ ತಂಡದೊಂದಿಗೆ ಅನ್ಯೋನ್ಯವಾಗಿದ್ದಾರೆ. ಅವರನ್ನೆಲ್ಲ ನೋಡಿ ಕಲಿತದ್ದು ಬಹಳ ಇದೆ. ಪಂದ್ಯ ಗೆದ್ದರೆ ಖುಷಿ, ಸೋತರೆ ಸಪ್ಪೆ ಮೋರೆ ಹಾಕುವವರು ಯಾರೂ ತಂಡದಲ್ಲಿಲ್ಲ. ಎಲ್ಲರ ಸಹಕಾರದಿಂದ ತಂಡ ಉತ್ತಮ ಸಾಧನೆ ಮಾಡಿದೆ.

ಲೀಗ್‌ನಲ್ಲಿ ಒಂದೇ ತಂಡದಲ್ಲಿ ಆಡುತ್ತಿರುವ ಏಕೈಕ ದಂಪತಿ ಕ್ರಿಸ್ ಅಡ್ಕಾಕ್‌ ಮತ್ತು ಗ್ಯಾಬ್ರಿಯೆಲಿ ಅಡ್ಕಾಕ್‌. ಅವರ ಬಗ್ಗೆ ಏನು ಹೇಳಬಯುಸುತ್ತೀರಿ?

ದಂಪತಿ ಮತ್ತು ಗೆಳೆಯ–ಗೆಳತಿಯರು ಜೊತೆಯಾಗಿ ಆಡುವ ಅವಕಾಶ ಸಿಗುವುದು ಕಡಿಮೆ. ಅಡ್ಕಾಕ್ ದಂಪತಿ ಈ ನಿಟ್ಟಿನಲ್ಲಿ ಅಪರೂಪದ ಜೋಡಿ. ಜೊತೆಯಾಗಿ ಪ್ರಯಾಣಿಸುತ್ತಾರೆ. ಒಟ್ಟಾಗಿ ಆಡುತ್ತಾರೆ. ಅವರನ್ನು ನೋಡಲು ಖುಷಿಯಾಗುತ್ತದೆ. ಜೊತೆಯಾಗಿ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕುವುದು ವಿಶಿಷ್ಟವಾದ ಅನುಭವವೇ ಸರಿ.

ರಾಷ್ಟ್ರೀಯ ಕೋಚ್‌ ಮತ್ತು ಪಿಬಿಎಲ್‌ ಕೋಚ್ ಬಗ್ಗೆ ಏನು ಹೇಳುತ್ತೀರಿ?

ರಾಷ್ಟ್ರೀಯ ತಂಡದ ಕೋಚ್‌ ಸದಾ ನಮ್ಮ ನೆರವಿಗೆ ನಿಲ್ಲತ್ತಾರೆ. ಪಿಬಿಎಲ್‌ನಲ್ಲಿ ಸಣ್ಣ ಅವಧಿಯಲ್ಲೇ ಕೋಚ್‌ಗಳಾದ ಅನೂಪ್ ಮತ್ತು ಅರುಣ್‌ ನಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ. ಆಟಗಾರರನ್ನು ಹುರಿದುಂಬಿಸಿ, ಜಯದತ್ತ ಗಮನ ಹರಿಸುವಂತೆ ಮಾಡುವುದರಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.

ಈ ಬಾರಿಯ ಪಿಬಿಎಲ್‌ನಿಂದ ನೀವು ಕಲಿತ ದೊಡ್ಡ ಪಾಠ ಯಾವುದು?

ಪ್ರತಿ ಬಾರಿಯೂ ಪಿಬಿಎಲ್‌ನಿಂದ ಅನೇಕ ಸಂಗತಿಗಳನ್ನು ಕಲಿತಿದ್ದೇನೆ. ಈ ಲೀಗ್‌ನಿಂದಾಗಿ ನನ್ನ ಕ್ರೀಡಾ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಒತ್ತಡವನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಕಲಿಯಲು ಈ ಲೀಗ್ ಸೂಕ್ತ ವೇದಿಕೆ. ಬೇರೆ ಬೇರೆ ದೇಶಗಳ ಆಟಗಾರರ ಜೊತೆ ಬೆರೆಯಲು ಸಿಗುವ ಅವಕಾಶಕ್ಕೂ ಬೆಲೆ ಕಟ್ಟಲಾಗದು.

ಈ ಬಾರಿಯ ಪಿಬಿಎಲ್‌ನಲ್ಲಿ ನೆನಪಿಟ್ಟುಕೊಳ್ಳುವಂಥ ಯಾವುದಾದರೂ ಪಂದ್ಯ ನಿಮ್ಮ ಮನಸ್ಸಿನಲ್ಲಿದೆಯಾ?

ಎಲ್ಲ ಪಂದ್ಯಗಳೂ ಖುಷಿ ನೀಡಿವೆ. ಆದರೆ ತಂಡದ ಕೊನೆಯ ಲೀಗ್‌ ಹಣಾಹಣಿಯಲ್ಲಿ ನಾರ್ತ್ ಈಸ್ಟರ್ನ್ ವಾರಿಯರ್ಸ್‌ ವಿರುದ್ಧ ಆಡಿದ ಟ್ರಂಪ್‌ ಪಂದ್ಯ ನನ್ನ ಪಾಲಿಗೆ ಮಹತ್ವದ್ದಾಗಿತ್ತು. ಪುರುಷರ ಸಿಂಗಲ್ಸ್‌ನಲ್ಲಿ ಲೀಗ್‌ ಡಾಂಗ್ ಕ್ಯೂನ್ ಗಳಿಸಿಕೊಟ್ಟ ಜಯವನ್ನು ಮುಂದುವರಿಸಿ ಎರಡು ಪಾಯಿಂಟ್ ಕಲೆ ಹಾಕುವ ಜಬಾಬ್ದಾರಿ ನಮ್ಮ ಮೇಲೆ ಇತ್ತು. ನೇರ ಗೇಮ್‌ಗಳಲ್ಲಿಇ ಎದುರಾಳಿ ಜೋಡಿಯನ್ನು ಮಣಿಸಿ ನಾವು ಅದನ್ನು ಸಾಧಿಸಿದೆವು.

ಪಿಬಿಎಲ್‌ನಿಂದಾಗಿ ಭಾರತದ ಬ್ಯಾಡ್ಮಿಂಟನ್‌ ಕ್ಷೇತ್ರದ ಮೇಲೆ ಮಹತ್ತರ ಪರಿಣಾಮ ಉಂಟಾಗಿದೆ ಎಂದು ನೀವು ನಂಬುತ್ತೀರಾ?

ಖಂಡಿತ. ಸಿಂಧು, ಸೈನಾ, ಜ್ವಾಲಾ ಗುಟ್ಟಾ (ಈಗ ಆಡುತ್ತಿಲ್ಲ) ಮುಂತಾದವರಿಂದಾಗಿ ಪಿಬಿಎಲ್‌ ಮಹತ್ವ ಪಡೆದುಕೊಂಡಿದೆ. ಇದು ಭಾರತದ ಬ್ಯಾಡ್ಮಿಂಟನ್ ಮೇಲೆ ಪೂರಕ ಪರಿಣಾಮ ಬೀರಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್‌ ಪ್ರೀತಿಸುವ ಸಾವಿರಾರು ಮಂದಿ ಇದ್ದಾರೆ. ಆದರೆ ಎಲ್ಲರಿಗೂ ಇಲ್ಲಿ ಮಹತ್ವದ ಪಂದ್ಯಗಳನ್ನು ವೀಕ್ಷಿಸಲು ಆಗುವುದಿಲ್ಲ. ಇಂಥ ನಗರಗಳು ಇನ್ನೂ ಅನೇಕ ಇವೆ. ಅಲ್ಲೆಲ್ಲ ಪಿಬಿಎಲ್‌ ನಡೆಸುವುದರಿಂದ ಈ ಕ್ರೀಡೆ ಸಹಜವಾಗಿ ಬೆಳೆಯುತ್ತದೆ.

ಲೀಗ್‌ನಲ್ಲಿ ಆಡಿದ ಶ್ರೇಯಾಂಸಿ ಅವರಂಥ ಯುವ ಆಟಗಾರರ ಬಗ್ಗೆ ಏನು ಹೇಳಬಯಸುತ್ತೀರಿ?

ಲೀಗ್‌ನಲ್ಲಿ ಆಡುತ್ತಿರುವ ಯುವ ಆಟಗಾರರು ಅನುಭವದ ಮೂಟೆ ಹೊತ್ತುಕೊಂಡು ವಾಪಸಾಗುತ್ತಾರೆ. ದೊಡ್ಡ ಆಟಗಾರರ ಜೊತೆ ತರಬೇತಿ ಪಡೆಯಲು ಅವಕಾಶ ಸಿಗುವುದೇ ಅವರ ಪಾಲಿಗೆ ಮಹತ್ವದ ವಿಷಯ.

ಭಾರತದಲ್ಲಿ ಈಗ ಬ್ಯಾಡ್ಮಿಂಟನ್ ಕ್ಷೇತ್ರ ಯಾವ ಮಟ್ಟದಲ್ಲಿದೆ? ದೇಶದಲ್ಲಿ ಬ್ಯಾಡ್ಮಿಂಟನ್‌ ಬೆಳವಣಿಗೆಯನ್ನು ಹೇಗೆ ವಿಶ್ಲೇಷಿಸುತ್ತೀರಿ?

ಭಾರತದಲ್ಲಿ ಬ್ಯಾಡ್ಮಿಂಟನ್ ಕ್ರೀಡೆ ಬೆಳೆಯುತ್ತಿದೆ. ಇದರಲ್ಲಿ ಪಿಬಿಎಲ್‌ನ ಪಾತ್ರವೂ ಮಹತ್ವದ್ದು. ವಿಶ್ವದ ಶ್ರೇಷ್ಠ ಆಟಗಾರರು ಇಲ್ಲಿ ಬಂದು ಆಡುತ್ತಿರುವುದರಿಂದ ಯುವ ಜನತೆಯ ಮೇಲೆ ಪರಿಣಾಮ ಆಗಿದೆ. ವೀಕ್ಷಕರ ಮತ್ತು ಪ್ರೇಕ್ಷಕರ ಸಂಖ್ಯೆಯೂ ದಿನೇ ದಿನೇ ಬೆಳೆಯುತ್ತಿರುವುದರಿಂದ ಕ್ರೀಡೆಯ ಮೇಲೆ ತುಂಬ ಪರಿಣಾಮ ಬೀರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !