ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌: ಸಿಂಧು–ಮರಿನ್‌ ಮುಖಾಮುಖಿ

ಹೈದರಾಬಾದ್‌ಗೆ ಪುಣೆ ಸವಾಲು
Last Updated 21 ಡಿಸೆಂಬರ್ 2018, 18:34 IST
ಅಕ್ಷರ ಗಾತ್ರ

ಮುಂಬೈ: ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ನಾಲ್ಕನೇ ಆವೃತ್ತಿಗೆ ಶನಿವಾರ ಇಲ್ಲಿ ಚಾಲನೆ ಸಿಗಲಿದೆ.

ದಿ ನ್ಯಾಷನಲ್‌ ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಇಂಡಿಯಾದಲ್ಲಿ ನಡೆಯುವ ಮೊದಲ ಹಣಾಹಣಿಯಲ್ಲಿ ಹೈದರಾ ಬಾದ್‌ ಹಂಟರ್ಸ್‌ ಮತ್ತು ಪುಣೆ 7 ಏಸಸ್‌ ತಂಡಗಳು ಸೆಣಸಲಿವೆ. ಒಲಿಂಪಿಯನ್‌ಗಳಾದ ಪಿ.ವಿ.ಸಿಂಧು ಮತ್ತು ಸ್ಪೇನ್‌ನ ಕ್ಯಾರೋಲಿನ್‌ ಮರಿನ್ ಅವರ ಮುಖಾಮುಖಿಗೆ ಈ ಪಂದ್ಯ ವೇದಿಕೆಯಾಗಲಿದೆ. ಹೀಗಾಗಿ ಅಭಿಮಾನಿ ಗಳಲ್ಲಿ ಕುತೂಹಲ ಗರಿಗೆದರಿದೆ.

ಇತ್ತೀಚೆಗೆ ನಡೆದಿದ್ದ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿರುವ ಸಿಂಧು, ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಮರಿನ್‌ ಅವರನ್ನು ಸುಲಭವಾಗಿ ಮಣಿಸುವ ವಿಶ್ವಾಸ ಹೊಂದಿದ್ದಾರೆ.

ಹೈದರಾಬಾದ್‌ ತಂಡ ಹಿಂದಿನ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿತ್ತು. ಬಾಲಿ ವುಡ್‌ ನಟಿ ತಾಪ್ಸಿ ಪನ್ನು ಒಡೆತನದ ಪುಣೆ ಏಸಸ್‌ ಮೊದಲ ಬಾರಿ ಲೀಗ್‌ನಲ್ಲಿ ಆಡುತ್ತಿದೆ. ಸಿಂಧು ಸಾರಥ್ಯದ ಹಂಟರ್ಸ್‌ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲೊಂದೆನಿಸಿದೆ. ಮರಿನ್‌ ನೇತೃತ್ವದ ಏಸಸ್‌ ತಂಡದಲ್ಲೂ ಪ್ರತಿಭಾನ್ವಿತ ಕ್ರೀಡಾ ಪಟುಗಳಿದ್ದಾರೆ.

ಕಿಮ್‌ ಸಾ ರೊಂಗ್‌, ಬೊಡಿನ್‌ ಇಸಾರ ಮತ್ತು ಲೀ ಹ್ಯೂನ್‌ ಇಲ್‌ ಅವರು ಹಂಟರ್ಸ್‌ ತಂಡದ ಶಕ್ತಿಯಾಗಿದ್ದಾರೆ.

ಬ್ರೈಸ್‌ ಲೆವರೆಡೆಜ್‌, ವ್ಲಾದಿಮಿರ್‌ ಇವಾನೊವ್‌, ಸೋನಿ ಡ್ವಿ ಕುಂಕೊರೊ ಮತ್ತು ಅಜಯ್‌ ಜಯರಾಮ್‌ ಅವರು ಏಸಸ್‌ ತಂಡದ ಆಧಾರ ಸ್ಥಂಭಗಳಾಗಿದ್ದಾರೆ. ಈ ಬಾರಿ ಒಟ್ಟು ಒಂಬತ್ತು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. 17 ವಿವಿಧ ರಾಷ್ಟ್ರಗಳ 90 ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ.

ಪುಣೆ ಮತ್ತು ಅಹಮದಾಬಾದ್‌ನಲ್ಲೂ ಪಂದ್ಯಗಳು ಆಯೋಜನೆಯಾಗಿವೆ. ಫೈನಲ್‌ ಪಂದ್ಯ ಜನವರಿ 13ರಂದು ಬೆಂಗಳೂರಿನಲ್ಲಿ ನಿಗದಿಯಾಗಿದೆ.

ಲೀಗ್‌, ಒಟ್ಟು ₹6 ಕೋಟಿ ಬಹುಮಾನ ಮೊತ್ತ ಹೊಂದಿದೆ. ಈ ಪೈಕಿ ಚಾಂಪಿಯನ್ನರಿಗೆ ₹ 3 ಕೋಟಿ ಸಿಗಲಿದೆ. ರನ್ನರ್ಸ್‌ ಅಪ್‌ ತಂಡ ₹1.5 ಕೋಟಿ ಜೇಬಿಗಿಳಿಸಲಿದೆ.

ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸುವ ತಂಡಗಳಿಗೆ ತಲಾ ₹75 ಲಕ್ಷ ಸಿಗಲಿದೆ. ‘ಈ ಬಾರಿ ಹೈದರಾಬಾದ್‌ ಹಂಟರ್ಸ್‌ ಪರ ಆಡುತ್ತಿದ್ದೇನೆ. ಹೀಗಾಗಿ ತವರಿನ ಅಭಿಮಾನಿಗಳಿಂದ ಸಾಕಷ್ಟು ಬೆಂಬಲ ಸಿಗುವ ನಿರೀಕ್ಷೆ ಇದೆ. ನಮ್ಮ ತಂಡದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದಾರೆ. ಎಲ್ಲರೂ ಪ್ರಶಸ್ತಿ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ’ ಎಂದು ಸಿಂಧು ಹೇಳಿದ್ದಾರೆ.

ಪಂದ್ಯಗಳು ಆರಂಭ: ಸಂಜೆ 7.00

ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT