ಬುಧವಾರ, ಸೆಪ್ಟೆಂಬರ್ 18, 2019
25 °C
ಪ್ರೊ ಕಬಡ್ಡಿ ಲೀಗ್‌ ಬೆಂಗಳೂರು ಲೆಗ್‌ : ಅಭಿಷೇಕ್‌ ಸಿಂಗ್‌ ಸೂಪರ್‌ ಟೆನ್‌; ಮಿಂಚಿದ ಮಂಜೀತ್‌

ರೋಚಕ ಟೈನಲ್ಲಿ ಮುಂಬಾ–ಪುಣೇರಿ

Published:
Updated:
Prajavani

ಬೆಂಗಳೂರು: ಅಭಿಷೇಕ್‌ ಸಿಂಗ್‌ ಅದ್ಭುತ ಸೂಪರ್‌ ಟೆನ್‌ ರೈಡ್‌ (ಒಟ್ಟು 11 ಪಾಯಿಂಟ್‌) ಮಧ್ಯೆಯೂ ಯು ಮುಂಬಾಗೆ ಗೆಲುವು ಒಲಿಯಲಿಲ್ಲ. ಆರಂಭದ ಮುನ್ನಡೆಯನ್ನು ಕಾಯ್ದುಕೊಳ್ಳಲಾಗದ ತಂಡ, ಪುಣೇರಿ ಪಲ್ಟನ್‌ ವಿರುದ್ಧ 33– 33 ಪಾಯಿಂಟ್‌ಗಳ ಟೈ ಸಾಧಿಸಲಷ್ಟೇ ಯಶಸ್ವಿಯಾಯಿತು.

ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪ್ರೊ ಕಬಡ್ಡಿ ಲೀಗ್‌ ಹಣಾಹಣಿಯಲ್ಲಿ ಉಭಯ ತಂಡಗಳ ಮಧ್ಯೆ ಭಾರೀ ಪೈಪೋಟಿ ಕಂಡುಬಂತು. ಪುಣೇರಿ ಪರ ಮೊದಲ ರೈಡ್‌ ಮಾಡಿದ ನಿತಿನ್‌ ತೋಮರ್‌ ಟ್ಯಾಕಲ್‌ ಆದರು. ಮುಂಬಾ ಖಾತೆ ತೆರೆಯಿತು. 

ಪಂದ್ಯ ಸೊಗಸಾದ ಟ್ಯಾಕಲ್ಸ್ ಹಾಗೂ ರೈಡ್‌ಗಳ ಸಂಗಮವಾಗಿ ಪರಿಣಮಿಸಿತು. ಮೊದಲಾರ್ಧ ಮುಕ್ತಾಯಕ್ಕೆ ಯು ಮುಂಬಾ 16–12ರ ಮುನ್ನಡೆಯಲ್ಲಿತ್ತು. ಮುಂಬಾ ತಂಡ ಪದೇ ಪದೇ ರೈಡರ್‌ಗಳ ಬದಲಾವಣೆ ಮೂಲಕ ಯಶಸ್ಸಿನತ್ತ ಸಾಗಿತ್ತು.

ದ್ವಿತೀಯಾರ್ಧದ ಒಂದನೇ ನಿಮಿಷದಲ್ಲಿ ಯಶಸ್ವಿ ರೈಡ್‌ ಮಾಡಿದ ಪಲ್ಪನ್‌ ತಂಡದ ಪಂಕಜ್‌ ಮೊಹಿತೆ ಪ್ರೊ ಕಬಡ್ಡಿಯಲ್ಲಿ 50 ರೈಡ್‌ ಮೈಲುಗಲ್ಲು ತಲುಪಿದರು.

ದ್ವಿತೀಯಾರ್ಧದ ಐದನೇ ನಿಮಿಷದಲ್ಲಿ ಮುಂಬಾ ತಂಡ ಆಲ್‌ ಔಟ್‌ ಆಗುವ ಮೂಲಕ ಪಂದ್ಯ 20–20ರ ಸಮಬಲವಾಯಿತು. ಆಟ ಇನ್ನಷ್ಟು ರೋಚಕವಾಯಿತು. ಮುಂಬಾ ಮತ್ತೇ ಮುನ್ನಡೆಯತ್ತ ಸಾಗಿತ್ತು. ಪಂದ್ಯ ಮುಕ್ತಾಯಕ್ಕೆ ಒಂಬತ್ತು ನಿಮಿಷ ಉಳಿದಿರುವಾಗ ಮುಂಬಾ ತಂಡದ ಸಂದೀಪ್‌ ನರ್ವಾಲ್‌ ಅವರನ್ನು ಶಂಭು ಸಿಂಧೆ ಸೂಪರ್‌ ಟ್ಯಾಕಲ್‌ ಮಾಡಿದ ಮಾಡಿದರು. ಈ ವೇಳೆ ಪಲ್ಟನ್‌ 23–25ರ ಹಿನ್ನಡೆಯಲ್ಲಿತ್ತು. ಇದಾದ ಎರಡು ನಿಮಿಷಗಳ ಬಳಿಕ ಸೂಪರ್‌ ರೈಡ್‌ ಮಾಡಿದ ಮಂಜೀತ್‌ ಪುಣೇರಿಗೆ 26–25ರ ಮುನ್ನಡೆ ತಂದರು. ಪಂದ್ಯ ಮುಕ್ತಾಯಕ್ಕೆ ಐದು ನಿಮಿಷಗಳಿರುವಾಗ ಮುಂಬಾ ಮತ್ತೊಮ್ಮೆ ಆಲೌಟ್‌ ಆಯಿತು. ಪಲ್ಟನ್‌ಗೆ 32–26ರ ಮುನ್ನಡೆ ಸಿಕ್ಕಿತು.

ಮುಂಬಾ ತಿರುಗೇಟು ನೀಡಿತು. ಪಂದ್ಯ ಮುಗಿಯಲು 28 ಸೆಕೆಂಡು ಉಳಿದಿರುವಾಗ ಆ ತಂಡ 32–33ಕ್ಕೆ ಹಿನ್ನಡೆ ತಗ್ಗಿಸಿಕೊಂಡಿತ್ತು. ಆ ಬಳಿಕ ಅಭಿಷೇಕ್‌ ಸಿಂಗ್‌ ಯಶಸ್ವಿ ರೈಡ್‌ ಮೂಲಕ ಪಂದ್ಯವನ್ನು ರೋಚಕ ಟೈನತ್ತ ಕೊಂಡೊಯ್ದರು. 

ಪುಣೇರಿ ತಂಡದ ಮಂಜೀತ್‌  ಒಟ್ಟು 10 ಪಾಯಿಂಟ್‌ ಗಳಿಸಿದರು. 

ಇಂದಿನ ಪಂದ್ಯಗಳು

ಪಟ್ನಾ ಪೈರೇಟ್ಸ್–ಯುಪಿ ಯೋಧಾ. ರಾತ್ರಿ 7:30

ಬೆಂಗಳೂರು ಬುಲ್ಸ್– ತೆಲುಗು ಟೈಟನ್ಸ್. ರಾತ್ರಿ 8:30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Post Comments (+)