ಪೂವಮ್ಮ, ಜೀವನ್‌ಗೆ ಚಿನ್ನ

ಶನಿವಾರ, ಮಾರ್ಚ್ 23, 2019
34 °C
ಅಥ್ಲೆಟಿಕ್ಸ್‌: ಕರ್ನಾಟಕದ ಸ್ಪರ್ಧಿಗಳ ಪ್ರಾಬಲ್ಯ

ಪೂವಮ್ಮ, ಜೀವನ್‌ಗೆ ಚಿನ್ನ

Published:
Updated:
Prajavani

ಪಂಚಕುಲ: ಕರ್ನಾಟಕದ ಎಂ.ಆರ್‌.ಪೂವಮ್ಮ ಮತ್ತು ಕೆ.ಎಸ್‌.ಜೀವನ್‌ ಅವರು ಇಂಡಿಯನ್‌ ಗ್ರ್ಯಾನ್‌ ಪ್ರಿ–4 ಅಥ್ಲೆಟಿಕ್ಸ್‌ನಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ 400 ಮೀಟರ್ಸ್‌ ಓಟದ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಬುಧವಾರ ನಡೆದ ಸ್ಪರ್ಧೆಯಲ್ಲಿ ಮಂಗಳೂರಿನ ‍ಪೂವಮ್ಮ ಆರಂಭದಿಂದಲೇ ಮಿಂಚಿನ ಗತಿಯಲ್ಲಿ ಓಡಿದರು. ಅವರು 53.73 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದರು.

ಕೇರಳದ ಜಿಸ್ನಾ ಮ್ಯಾಥ್ಯೂ ಬೆಳ್ಳಿಯ ಪದಕ ಪಡೆದರು. ಅವರು ಅಂತಿಮ ರೇಖೆ ಮುಟ್ಟಲು 54.17 ಸೆಕೆಂಡು ತೆಗೆದುಕೊಂಡರು. ಈ ವಿಭಾಗದ ಕಂಚಿನ ಪದಕ ಪಶ್ಚಿಮ ಬಂಗಾಳದ ಸೋನಿಯಾ ಬೈಶ್ಯಾ (54.77ಸೆ.) ಅವರ ಪಾಲಾಯಿತು.

ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಜೀವನ್‌ 46.81 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಕೇರಳದ ಜಿತು ಬೇಬಿ (46.93ಸೆ.) ಮತ್ತು ನೊಹ್‌ ನಿರ್ಮಲ್‌ ಟಾಮ್‌ (47.68ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.

ಪುರುಷರ 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಜಗದೀಶ್‌ ಚಂದ್ರ (51.44ಸೆ.) ಕಂಚಿನ ಪದಕ ಜಯಿಸಿದರು. ಹೈಜಂಪ್‌ನಲ್ಲಿ ಬಿ.ಚೇತನ್‌, ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಅವರು 2.16 ಮೀಟರ್ಸ್‌ ಸಾಮರ್ಥ್ಯ ತೋರಿದರು.

ಮಹಿಳೆಯರ 200 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ  ಎನ್‌.ಎಸ್‌.ಇಂಚರ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರು. ಅವರು ನಿಗದಿತ ದೂರ ಕ್ರಮಿಸಲು 24.05 ಸೆಕೆಂಡು ತೆಗೆದುಕೊಂಡರು.

ಮಹಿಳೆಯರ 400 ಮೀಟರ್ಸ್‌ ಹರ್ಡಲ್ಸ್‌ ವಿಭಾಗದ ಚಿನ್ನದ ಪದಕ ಎಂ.ಅರ್ಪಿತಾ ಅವರ ಪಾಲಾಯಿತು. ಅರ್ಪಿತಾ, 57.93 ಸೆಕೆಂಡುಗಳಲ್ಲಿ ಗುರಿ ಸೇರಿದರು. ಟ್ರಿಪಲ್‌ ಜಂಪ್‌ನಲ್ಲಿ 13.04 ಮೀಟರ್ಸ್‌ ಸಾಮರ್ಥ್ಯ ತೋರಿದ ಜಿ.ಪಿ.ಅನುಷಾ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !