ಮತ್ತೆ ಓಡಿದಳು ಅಮ್ಮನ ಮಗಳು

7

ಮತ್ತೆ ಓಡಿದಳು ಅಮ್ಮನ ಮಗಳು

Published:
Updated:
Deccan Herald

‘ಬೆನ್ನುಹುರಿಯ ಎಲ್4-ಎಲ್5 ಮೂಳೆಗಳ ಹಿಡಿದಿಟ್ಟ ಚಪ್ಪಟೆಯ ಭಾಗಕ್ಕೆ ಹಾನಿಯಾಗಿದೆ’-ವೈದ್ಯರು ಕೊಟ್ಟ ಈ ಸಾರಾಂಶ ಇರುವ ಚೀಟಿ ಹಿಡಿದು ನಿಂತ ಅಥ್ಲೀಟ್ ಪೂವಮ್ಮನ ಎದೆಬಡಿತ ಜೋರಾಗಿತ್ತು. ಹೀಗೆ ಆಗಿದ್ದು 2012ರಲ್ಲಿ. 

2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅತಿ ಕಿರಿಯ ಅಥ್ಲೀಟ್ ಎಂಬ ಹೆಮ್ಮೆ ಈ ಪ್ರತಿಭಾವಂತೆಯದ್ದಾಗಿತ್ತು. 400 ಮೀಟರ್ ಓಟದಲ್ಲಿ ಏಷ್ಯಾ ದಿಗ್ಗಜರ ಪಟ್ಟಿ ಮಾಡಿದರೆ, ಅದರಲ್ಲಿ ಪೂವಮ್ಮ ಹೆಸರು ಇರಲೇಬೇಕು.

ಅಂಥ ಸಾಧನೆ ಮಾಡಿದ್ದ ಓಟಗಾರ್ತಿ ದೇಹತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡುತ್ತಿದ್ದಾಗ ಬೆನ್ನುಹುರಿಯ ಮೂಳೆಗಳನ್ನು ಹಿಡಿದಿಟ್ಟ ಚಪ್ಪಟೆಯ ಭಾಗಕ್ಕೆ ಹಾನಿಯಾಗಿತ್ತು. ರಾತ್ರಿ ನಿದ್ದೆ ಬರುತ್ತಿರಲಿಲ್ಲ. ವಿಪರೀತ ಬೆನ್ನುನೋವು. ಮತ್ತೆ ಓಡುವುದಾದರೂ ಹೇಗೆ ಎಂಬ ಚಿಂತೆ ಒಂದಿಷ್ಟು ದಿನ ಕಾಡಿದ್ದು ನಿಜ. ವಿವಿಧ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾಗ ಬೆನ್ನುತಟ್ಟಿದ್ದ ಎಷ್ಟೋ ಜನರಿಗೆ ಪೂವಮ್ಮನ ನೋವು ಎಂಥದ್ದೆಂದು ಗೊತ್ತೇ ಇರಲಿಲ್ಲ. ದೇಶದ ಅಥ್ಲೆಟಿಕ್ ಸಂಸ್ಥೆಯವರು ಕೂಡ ಅವರ ಆರೋಗ್ಯದ ಕುರಿತು ವಿಚಾರಿಸಿರಲಿಲ್ಲ. ಸಹಜವಾಗಿಯೇ ಆಗ ಅವರಿಗೆ ಬೇಸರವಾಗಿತ್ತು.

ಪುಟಿದೆದ್ದರು. ನೋವಿನ ಜೊತೆಗೇ ಒಂದಿಷ್ಟು ವ್ಯಾಯಾಮ ಮಾಡಿದರು. ನೋಡ ನೋಡುತ್ತಲೇ ಚೇತರಿಸಿಕೊಂಡು, ಮತ್ತೆ ಓಡಲಾರಂಭಿಸಿದರು. ಏಪ್ರಿಲ್ 2013ರಲ್ಲಿ ಪುಣೆಯಲ್ಲಿ ನಡೆದ ಏಷ್ಯನ್ ಚಾಂಪಿಯನ್‌ ಷಿಪ್‌ನ 400 ಮೀಟರ್ ಓಟದಲ್ಲಿ ಬೆಳ್ಳಿ ಗೆದ್ದರು. ಅದೇ ವರ್ಷ ಲಖನೌದಲ್ಲಿ 51.75 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ ವೈಯಕ್ತಿಕ ದಾಖಲೆಯನ್ನು ಉತ್ತಮಪಡಿಸಿಕೊಂಡದ್ದೂ ಸುದ್ದಿಯಾಯಿತು.

ಮಂಗಳೂರಿನ ಪೂವಮ್ಮ 2005ರಿಂದ ವೃತ್ತಿಪರ ಅಥ್ಲೀಟ್ ಆಗಿ ಓಡಲಾರಂಭಿಸಿದಾಗಿನಿಂದ ದೇಸಿ ಸ್ಪರ್ಧೆಗಳಲ್ಲಿ ಹುರಿದುಂಬಿಸಲು ಅವರಮ್ಮ ಜತೆಗೆ ಇರುತ್ತಿದ್ದರು. ಮಗಳ ಓಟದ ಮೊದಲ ಅಭಿಮಾನಿ ಅವರು. 2003ರಲ್ಲಿ 14 ವರ್ಷದೊಳಗಿನವರ ಅಥ್ಲೆಟಿಕ್ಸ್ ನಡೆದಾಗ ಮಂಗಳೂರಿನಲ್ಲಿ ಮಗಳ ಜತೆ ಹೋಗಿದ್ದವರೂ ಅವರೇ.

ಪಟಿಯಾಲಾದಲ್ಲಿ ಫೆಡರೇಷನ್ ಕಪ್ ಸ್ಪರ್ಧೆ ನಡೆದಾಗ ಮಾತ್ರ ಅಮ್ಮನಿಗೆ ಮಗಳ ಜತೆ ಹೋಗಲು ಆಗಲಿಲ್ಲ. ಅದಕ್ಕೂ ಮುಂಚಿನ ಹತ್ತು ವರ್ಷಗಳಲ್ಲಿ ಮಗಳ ಯಾವ ದೇಸಿ ಸ್ಪರ್ಧೆಯನ್ನೂ ಅವರು ತಪ್ಪಿಸಿಕೊಂಡಿರಲಿಲ್ಲ. ಆಗ ಅವರಿಗೆ ಬೆನ್ನುನೋವು ಕಾಡಿತ್ತು. ಮನೆಯಿಂದಲೇ ಫೋನ್‌ನಲ್ಲಿ ಮಗಳನ್ನು ಹುರಿದುಂಬಿಸಲು ಯತ್ನಿಸಿದರು. ಆದರೆ, ಇತ್ತ ಪೂವಮ್ಮ ಅಳಲಾರಂಭಿಸಿದರು. ಮಗಳ ಅಳು ಕೇಳಿದ್ದೇ ಮಹಾತಾಯಿ ಜಾಜಿ ಹೊರಟು, ಪಟಿಯಾಲಾಕ್ಕೆ ಬಂದರು. 400 ಮೀಟರ್ ಓಟದಲ್ಲಿ ಆಗ 52.48 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಪೂವಮ್ಮ ಗೆಲುವನ್ನು ತಮ್ಮದಾಗಿಸಿಕೊಂಡು, ಅಮ್ಮನನ್ನು ಅಪ್ಪಿಕೊಂಡಿದ್ದರು.

‘ಓಡಿ ಓಡಿ ಮೀನಖಂಡಗಳಲ್ಲಿ ಮಡುಗಟ್ಟುವ ನೋವನ್ನು ನಾನು ಅಮ್ಮನ ಕಣ್ಣುಗಳ ಬೆಳಕಲ್ಲಿ ಮರೆಯುತ್ತಿದ್ದೆ. ನನ್ನ ಶ್ವಾಸದ ಏದುಸಿರನ್ನು ಅವಳ ನಗು ಹದ್ದುಬಸ್ತಿಗೆ ತರುತ್ತಿತ್ತು. ಅಮ್ಮನೇ ನನ್ನ ಕಸುವು’ ಎಂದು ಹಿಂದೊಮ್ಮೆ ಪೂವಮ್ಮ ಹೇಳಿಕೊಂಡಿದ್ದರು.

ಈಗ ಪೂವಮ್ಮ ಭಾರತದ ಹಿರಿಯ ಅಥ್ಲೀಟ್‌ಗಳಲ್ಲಿ ಒಬ್ಬರು. 2013ರ ಒಲಿಂಪಿಕ್ಸ್‌ನಲ್ಲಿ ರಿಸರ್ವ್ ಓಟಗಾರ್ತಿ ಆಗಬೇಕಾಗಿ ಬಂದ ಸಂದರ್ಭದ ಕಹಿ ಅನುಭವ ಈಗಲೂ ನೆನಪಿನಲ್ಲಿದೆ. ಅದಕ್ಕೂ ಅವರ ಬೆನ್ನುನೋವೇ ಕಾರಣವಾಗಿತ್ತು.

ಕಹಿಗಳನ್ನೆಲ್ಲ ಬದಿಗಿರಿಸಿ ಅವರು ಜಕಾರ್ತಾದಲ್ಲಿ 4X400 ಮೀಟರ್ ರಿಲೇಯಲ್ಲಿ ಮೊನ್ನೆ ‘ಏಷ್ಯಾಡ್’ನಲ್ಲಿ ಉಸಿರು ಬಿಗಿಹಿಡಿದು ಓಡಿದರು. ದೇಶಕ್ಕೆ ಮತ್ತೆರಡು ಪದಕಗಳ ಗೌರವ ದಕ್ಕಿಸಿಕೊಟ್ಟರು. ‘ಈಗ ಬೆನ್ನು ಹೇಗಿದೆ’ ಎಂದು ಆಪ್ತರೊಬ್ಬರು ಕೇಳಿದಾಗ ಪೂವಮ್ಮ ‘ಪರವಾಗಿಲ್ಲ’ ಎನ್ನುತ್ತಾ ನಕ್ಕರು.

ಅಮ್ಮನ ತುಂಬು ಪ್ರೀತಿ, ಆತ್ಮವಿಶ್ವಾಸ, ಕ್ರೀಡಾಭಿಮಾನ ಪೂವಮ್ಮ ಪಾಲಿಗೆ ಎಂದೂ ಖಾಲಿಯಾಗಿಲ್ಲ. ಅದಕ್ಕೇ ಅವರು ಈಗಲೂ ಹೀಗೆ ಓಡುತ್ತಿರುವುದು.

Tags: 

ಬರಹ ಇಷ್ಟವಾಯಿತೆ?

 • 23

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !