ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಫ್ಟ್‌ವೇರ್‌ ಉದ್ಯೋಗಿಯ ‘ಪವರ್’

Last Updated 6 ಜನವರಿ 2019, 19:30 IST
ಅಕ್ಷರ ಗಾತ್ರ

ಕಲಬುರ್ಗಿ ಜಿಲ್ಲೆಯ ಅಳಂದ ಸಮೀಪದ ಜಮಗಾ (ಜೆ) ಗ್ರಾಮದ ವರದ್ ಪಾಟೀಲ ಅವರದ್ದು ‘ಡಬಲ್’ ಸಾಧನೆಯ ಕಥೆ ಇದು. ಹಿಂದುಳಿದ ಪ್ರದೇಶದಲ್ಲಿ ಹುಟ್ಟಿ ಬೆಳೆದರೂ ಆಟ ಮತ್ತು ಪಾಠ ಎರಡರಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಸಾಫ್ಟವೇರ್ ಕಂಪೆನಿಯ ಉದ್ಯೋಗಿಯಾಗುವ ಮಟ್ಟಕ್ಕೆ ಓದಿರುವ ವರದ್, ಅಂತರರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್‌ನಲ್ಲಿಯೂ ತಮ್ಮ ‘ಶಕ್ತಿ’ ತೋರಿಸುತ್ತಿದ್ದಾರೆ. ಅವರು ‘ರಾ’ (75 ಕೆ.ಜಿ: ಸ್ಕ್ವಾಟ್‌, ಬೆಂಚ್‌ಪ್ರೆಸ್‌, ಡೆಡ್‌ಲಿಫ್ಟ್‌) ವಿಭಾಗದಲ್ಲಿ ಮೂರು ಚಿನ್ನದ ಪದಕ ಪಡೆದಿದ್ದು, ಕ್ಲಾಸಿಕ್ ರಾ ವಿಭಾಗದಲ್ಲಿ ಉತ್ತಮ ಲಿಫ್ಟರ್ ಪ್ರಶಸ್ತಿ ಪಡೆದಿದ್ದಾರೆ.

ಅವರು ತಮ್ಮ ಸಾಧನೆ ಹಾಗೂ ಮುಂದಿನ ಗುರಿಯ ಬಗ್ಗೆ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

*ಪವರ್‌ಲಿಫ್ಟಿಂಗ್ ಆರಂಭಿಸಿದ್ದು ಹೇಗೆ?
ಚಿಕ್ಕಂದಿನಲ್ಲಿ ನನ್ನ ತಂದೆ ನನಗೆ ಕುಸ್ತಿ ಕಲಿಸುತ್ತಿದ್ದರು. ನಂತರ 2007ರಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾಗ ಕುಸ್ತಿ, ಜೂಡೊ, ವೇಟ್‌ಲಿಫ್ಟಿಂಗ್‌ ಆಡುತ್ತಿದ್ದೆ. ಈ ಸಂದರ್ಭದಲ್ಲಿ ಪವರ್‌ಲಿಫ್ಟಿಂಗ್‌ನಲ್ಲಿಯೂ ಆಸಕ್ತಿ ಮೂಡಿತು. ಈ ನಾಲ್ಕೂ ಕ್ರೀಡೆಗಳಲ್ಲಿ ವಿವಿ ಮಟ್ಟದಲ್ಲಿ ಆಡಿದ್ದೇನೆ. 2011ರಲ್ಲಿ ಕೆಲಸಕ್ಕೆ ಸೇರಿದ ನಂತರ ಸ್ಪರ್ಧೆಯಲ್ಲಿ ಭಾಗವಹಿಸುವುದು ಬಿಟ್ಟೆ.

*ಮತ್ತೆ ಪವರ್‌ಲಿಫ್ಟಿಂಗ್‌ ಆರಂಭಿಸಿದ್ದು ಹೇಗೆ?
ಎಂಜಿನಿಯರಿಂಗ್‌ ಮುಗಿದ ನಂತರ ಕ್ರೀಡೆಯಲ್ಲಿರುವ ಅವಕಾಶಗಳ ಬಗ್ಗೆ ಗೊತ್ತಿರಲಿಲ್ಲ. ಆಗ ನನಗೆ ಸರಿಯಾದ ಮಾರ್ಗದರ್ಶನ ಸಿಕ್ಕಿದ್ದರೆ ಕುಸ್ತಿಯಲ್ಲಿ ಹೆಚ್ಚಿನ ಸಾಧನೆ ಮಾಡುತ್ತಿದ್ದೆ. ಕುಸ್ತಿ, ಜೂಡೊ, ವೇಟ್‌ಲಿಫ್ಟಿಂಗ್‌ಗೆ ಸಾಕಷ್ಟು ಅಭ್ಯಾಸ ಮಾಡಬೇಕು. ಅಲ್ಲದೆ, ವಯಸ್ಸಿನ ಮಿತಿಯ ಕಾರಣಕ್ಕಾಗಿಯೂ ವೃತ್ತಿಪರವಾಗಿ ಭಾಗವಹಿಸಲು ಆಗಲಿಲ್ಲ. 2016ರಲ್ಲಿ ನಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಮಸ್ಕತ್‌ನಿಂದ ಮೊಹಮ್ಮದ್ ಅಜ್ಮತ್ ಅವರು ಬಂದರು. ಅವರು ಪವರ್‌ ಲಿಫ್ಟರ್‌. ಒಮ್ಮೆ ಅವರು ಜಿಮ್‌ನಲ್ಲಿ ಸಿಕ್ಕಾಗ ಪವರ್‌ಲಿಫ್ಟಿಂಗ್‌ನಲ್ಲಿರುವ ಅವಕಾಶಗಳ ಬಗ್ಗೆ ಹೇಳಿದರು. ಹೀಗಾಗಿ ಮತ್ತೆ ಅಭ್ಯಾಸ ಆರಂಭಿಸಿದೆ.

*ರಷ್ಯಾದಲ್ಲಿ ಮಾಡಿರುವ ಸಾಧನೆ ಬಗ್ಗೆ ಹೇಳಿ
20 ರಾಜ್ಯಗಳ 600 ಸ್ಪರ್ಧಿಗಳು ಈ ಬಾರಿ ಭಾಗವಹಿಸಿದ್ದರು. ನಮ್ಮ ದೇಶದಿಂದ 16 ಜನ ಭಾಗವಹಿಸಿದ್ದೆವು. ಅಷ್ಟು ಜನ ಸ್ಪರ್ಧಿಗಳ ನಡುವೆ ಪದಕ ಗಳಿಸಿರುವುದರಿಂದ ಹೆಮ್ಮೆಯಾಗುತ್ತಿದೆ. ಅಲ್ಲದೆ, ಇನ್ನಷ್ಟು ಸಾಧನೆ ಮಾಡಲು ಸ್ಫೂರ್ತಿ ಸಿಕ್ಕಿದೆ. ರಷ್ಯಾದ ಚೆಲಿಯಾಬೆನ್ಸ್ಕ್‌ನಲ್ಲಿ ಕಳೆದ ಜುಲೈನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿಯೂ ಮೂರು ಚಿನ್ನದ ಪದಕ ಗಳಿಸಿದ್ದೆ.

*ಪವರ್ ಲಿಫ್ಟಿಂಗ್‌ನಲ್ಲಿ ಅವಕಾಶಗಳು ಇವೆಯೇ?
ಪ್ರತಿವರ್ಷ ರಾಷ್ಟ್ರ ಮತ್ತು ಅಂತರರಾಷ್ಟ್ರೀಯಮಟ್ಟದಲ್ಲಿ ಸಾಕಷ್ಟು ಟೂರ್ನಿಗಳು ನಡೆಯುತ್ತವೆ. ಆಯಾ ವಯಸ್ಸಿಗೆ ತಕ್ಕಂತೆ ಯಾವ ಮಯೋಮಾನದವರು ಬೇಕಾದರೂ ಇದರಲ್ಲಿ ಭಾಗವಹಿಸಬಹುದಾಗಿದೆ. ಒಲಿಂಪಿಕ್ ಸಮಿತಿಯಲ್ಲಿ ಇದಕ್ಕೆ ಮಾನ್ಯತೆ ಸಿಕ್ಕಿದೆ. ಆದರೆ, ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಡಿಸುವ ಕುರಿತು ಇನ್ನೂ ತೀರ್ಮಾನವಾಗಬೇಕಿದೆ. ಪವರ್‌ ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡಿದರೆ ರೈಲ್ವೆನಲ್ಲಿ ಉದ್ಯೋಗವೂ ಸಿಗುತ್ತದೆ.

*ಉದ್ಯೋಗ ಮತ್ತು ಅಭ್ಯಾಸ ಹೇಗೆ ನಿಬಾಯಿಸುತ್ತೀರಿ?
ಮೊಹ್ಮದ್ ಅಜ್ಮತ್ ನನಗೆ ಪವರ್‌ಲಿಫ್ಟಿಂಗ್‌ ತರಬೇತಿ ನೀಡುತ್ತಾರೆ. ರಘು ನನಗೆ ಜಿಮ್ ತರಬೇತಿ ನೀಡುತ್ತಾರೆ. ಪ್ರತಿದಿನ ಒಂದೂವರೆ ಗಂಟೆ ಅಭ್ಯಾಸ ಮಾಡುತ್ತೇನೆ. ನಾನು ರಾತ್ರಿ ಶಿಫ್ಟ್‌ನಲ್ಲಿ ಕೆಲಸ ಮಾಡುವುದಿಲ್ಲ. ಹೀಗಾಗಿ ಸಮಯ ಸಿಗುತ್ತದೆ. ಸ್ಪರ್ಧೆಗಳಿಗೆ ತಯಾರಿ ನಡೆಸುವಾಗ ವಾರದಲ್ಲಿ ಮೂರು ದಿನ ಮೂರುವರೆ ಗಂಟೆ ಅಭ್ಯಾಸ ಮಾಡುತ್ತೇನೆ.

* ಮುಂದಿನ ನಿಮ್ಮ ಗುರಿ?
ಮುಂದಿನ ಜುಲೈನಲ್ಲಿ ರಷ್ಯಾದಲ್ಲಿ ಏಷ್ಯನ್ ಚಾಂಪಿಯನ್‌ಷಿಪ್ ಮತ್ತು ನವೆಂಬರ್‌ನಲ್ಲಿ ಅಮೆರಿಕದಲ್ಲಿ ವರ್ಲ್ಡ್‌ ಚಾಂಪಿಯನ್‌ಷಿಪ್ ಇದೆ. ರಾ ವಿಭಾಗದ ಸ್ಕ್ವಾಟ್‌ನಲ್ಲಿ 270 ಕೆ.ಜಿ, ಬೆಂಚ್‌ಪ್ರೆಸ್‌ನಲ್ಲಿ 162 ಕೆ.ಜಿ ಮತ್ತು ಡೆಡ್‌ಲಿಫ್ಟ್‌ನಲ್ಲಿ 300 ಕೆ.ಜಿ ವಿಶ್ವದಾಖೆ ಇದೆ. ಅದನ್ನು ಮೀರುವ ನಿಟ್ಟಿನಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT