ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನಾ ಸಾಧನೆಯ ಛಲಕ್ಕೆ ಬೇಕಿದೆ ಬೆಂಬಲ...

Last Updated 11 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಇತ್ತೀಚಿನ ವರ್ಷಗಳಲ್ಲಿ ಹೆಣ್ಣು ಮಕ್ಕಳು ದೇಹದ ತೂಕ ನಿಯಂತ್ರಣ ಹಾಗೂ ಫಿಟ್‌ನೆಸ್‌ಗಾಗಿ ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದಾರೆ. ಅದನ್ನೇ ಅಸ್ತ್ರವಾಗಿಸಿ ಹುಬ್ಬಳ್ಳಿಯ ಸನಾ ಮಳಗಿ ಪವರ್‌ಲಿಫ್ಟಿಂಗ್‌ನಲ್ಲಿ ಛಾಪು ಮೂಡಿಸುತ್ತಿದ್ದಾರೆ.

ಅನಿರೀಕ್ಷಿತವಾಗಿ ‘ಗುರು’ವಾಗಿ ಪರಿಚಿತವಾದ ಪವರ್‌ಲಿಫ್ಟಿಂಗ್‌ ಕೋಚ್‌ ಅಬ್ದುಲ್‌ ಮುನಾಫ್‌ ಮೂರು ವರ್ಷಗಳಿಂದ ಸನಾ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ವೃತ್ತಿಕೌಶಲ ಹೇಳಿಕೊಡುವ ಜೊತೆಗೆ ಆರ್ಥಿಕವಾಗಿಯೂ ನೆರವು ನೀಡುತ್ತಿದ್ದಾರೆ. ಸನಾ, ಹುಬ್ಬಳ್ಳಿಯ ಎಟರ್ನಲ್‌ ಜಿಮ್‌ನಲ್ಲಿ ಮಹಿಳೆಯರಿಗೆ ಫಿಟ್‌ನೆಸ್‌ ‌ತರಬೇತಿ ನೀಡಿ ಆದಾಯದ ಮೂಲವನ್ನೂ ಕಂಡುಕೊಂಡಿದ್ದಾರೆ. ತರಬೇತಿಯಿಂದ ಬಂದ ಹಣವನ್ನು ತಮ್ಮ ಅಭ್ಯಾಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಸನಾ 72 ಕೆ.ಜಿ. ದೇಹತೂಕ ಹೊಂದಿದ್ದು, ಪ್ರತಿದಿನ ಸಂಜೆ ನಾಲ್ಕು ಗಂಟೆ ಅಭ್ಯಾಸ ಮಾಡುತ್ತಾರೆ.

2017ರ ಜೂನ್‌ನಲ್ಲಿ ಪವರ್‌ಲಿಫ್ಟಿಂಗ್‌ ಇಂಡಿಯಾ ಮಂಗಳೂರಿನಲ್ಲಿ ಆಯೋಜಿಸಿದ್ದ ಸೀನಿಯರ್‌ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಚಿನ್ನ ಜಯಿಸಿದ್ದರು. ನಂತರ ತಮಿಳುನಾಡು, ಕೋಲ್ಕತ್ತ, ಪುಣೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸ್ಪರ್ಧೆಗಳಲ್ಲಿ ಪದಕಗಳನ್ನು ಜಯಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಹಂಬಲ ಅವರದ್ದು. ಇದಕ್ಕೆ ಅವಕಾಶ ಕೂಡ ಲಭಿಸಿತ್ತು. ಆದರೆ, ಅವರಿಗೆ ಆರ್ಥಿಕ ಸಂಕಷ್ಟ ಕಾಡುತ್ತಿದೆ.

ದೈಹಿಕವಾಗಿ ಹೆಚ್ಚು ಶಕ್ತಿ ಬೇಕಾಗುವ ಪವರ್‌ಲಿಫ್ಟಿಂಗ್‌ಗೆ ಪೌಷ್ಟಿಕಾಂಶ ಗುಣಗಳುಳ್ಳ ಆಹಾರ ಮುಖ್ಯ. ಆದ್ದರಿಂದ ಅವರು ಮೊಟ್ಟೆ, ಮಾಂಸ ಮತ್ತು ಹಣ್ಣುಗಳನ್ನು ತಿನ್ನಬೇಕು. ನಿಯಮಿತವಾಗಿ ಇವುಗಳನ್ನು ಖರೀದಿಸುವಷ್ಟು ಶಕ್ತರಾಗಿಲ್ಲ. ಆದ್ದರಿಂದ ಪ್ರತಿ ಟೂರ್ನಿಗಳಲ್ಲಿ ಪಾಲ್ಗೊಳ್ಳಬೇಕಾದರೂ ಪ್ರಾಯೋಜಕರನ್ನು ಹುಡುಕುವುದು ಅನಿವಾರ್ಯವಾಗಿದೆ.

ರೈಲ್ವೆ ಇಲಾಖೆಯಲ್ಲಿ ನೌಕರಿ ಪಡೆಯಬೇಕೆಂಬ ಉದ್ದೇಶದಿಂದ ಮೂರು ವರ್ಷದ ಹಿಂದೆ ಸನಾ ನಿತ್ಯ ಬೆಳಿಗ್ಗೆ ಗುಂಡು ಎಸೆತ ಅಭ್ಯಾಸ ಮಾಡಲು ಮೈದಾನಕ್ಕೆ ಹೋಗುತ್ತಿದ್ದರು. ಇವರ ಕಠಿಣ ಶ್ರಮ ಹಾಗೂ ಆಸಕ್ತಿ ಗಮನಿಸಿ ಅಬ್ದುಲ್‌ ತರಬೇತಿ ನೀಡಿದರು.

ಒಟ್ಟು 490 ಕೆ.ಜಿ. ಭಾರ ಎತ್ತಿ ಅತಿ ಹೆಚ್ಚು ಭಾರ ಎತ್ತಿದ್ದ ಕರ್ನಾಟಕದ ಕೆಲವೇ ಕೆಲವು ಮಹಿಳಾ ಸಾಧಕರಲ್ಲಿ ಒಬ್ಬರಾಗಿದ್ದಾರೆ. ಸ್ಕ್ವಾಟ್‌ನಲ್ಲಿ 202.5 ಕೆ.ಜಿ, ಬೆಂಚ್‌ ಪ್ರೆಸ್‌ 102.5 ಕೆ.ಜಿ. ಮತ್ತು ಡೆಡ್‌ ಲಿಫ್ಟ್‌ 185 ಭಾರ ಎತ್ತಿ ‘ಸೀನಿಯರ್‌ ಸ್ಟ್ರಾಂಗ್‌ ವುಮೆನ್‌ ಆಫ್‌ ಕರ್ನಾಟಕ‘ ಕೀರ್ತಿಗೆ ಪಾತ್ರರಾಗಿದ್ದಾರೆ.

‘ಪವರ್‌ಲಿಫ್ಟಿಂಗ್‌ನಲ್ಲಿ ದೊಡ್ಡ ಸಾಧನೆ ಮಾಡುವ ಆಸೆ ನನ್ನದು. ಇದಕ್ಕಾಗಿ ಈಗಾಗಲೇ ಸುಮಾರು ₹ 4 ಲಕ್ಷ ಖರ್ಚು ಮಾಡಿದ್ದೇನೆ. ಸರ್ಕಾರದಿಂದ ನಯಾ ಪೈಸೆಯೂ ನೆರವು ಸಿಕ್ಕಿಲ್ಲ.‌ ನನ್ನ ಪೋಷಕರೇ ಪ್ರಾಯೋಜಕರು’ ಎಂದು ಸನಾ ನೋವಿನಿಂದ ಹೇಳಿದರು.

‘ಹಿಂದೆ ಅನೇಕ ಟೂರ್ನಿಗಳಿಗೆ ಹೋದಾಗ ಅಬ್ದುಲ್‌ ಮುನಾಫ್‌ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನವರು ₹ 25 ಸಾವಿರ ಮತ್ತು ದೀಬಾ ಮಳಗಿ ಎಂಬುವರು ಆರ್ಥಿಕ ನೆರವು ನೀಡಿದ್ದಾರೆ’ ಎಂದು ಸ್ಮರಿಸಿಕೊಂಡರು.

‘ಸನಾ ವೃತ್ತಿಪರ ಕೌಶಲಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದಾಳೆ. ಅವಳಲ್ಲಿ ಸಾಧಿಸುವ ಛಲವಿದೆ. ಹೆಚ್ಚು ಭಾರ ಎತ್ತಿದ ಕೀರ್ತಿಯೂ ಆಕೆಗಿದೆ. ಆರ್ಥಿಕ ಅಡಚಣೆಯಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ’ ಎಂದು ಕೋಚ್‌ ಅಬ್ದುಲ್‌ ಮುನಾಫ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT