ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕ: ಒಲಿಂಪಿಕ್ಸ್‌ ಈಜುಕೊಳದಲ್ಲಿ ಕನ್ನಡಿಗ ಶ್ರೀಹರಿಯ ಅಲೆ

Last Updated 1 ಜನವರಿ 2022, 6:14 IST
ಅಕ್ಷರ ಗಾತ್ರ

ಬೆಂಗಳೂರು ಈಜು ಕ್ರೀಡೆಯ ರಾಜಧಾನಿಯೂ ಹೌದು. ಈ ಪ್ರಸಿದ್ಧಿಯ ಕಿರೀಟಕ್ಕೆ ಚಿಗುರುಮೀಸೆಯ ತರುಣ ಶ್ರೀಹರಿ ನಟರಾಜ ಹೆಮ್ಮೆಯ ಗರಿ ಮೂಡಿಸಿದ್ದಾರೆ. ಟೋಕಿಯೊ ಒಲಿಂಪಿಕ್‌ ಕೂಟದ ಪುರುಷರ 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ವಿಶೇಷ ಎಂದರೆ ಅವರು ‘ಎ’ ಅರ್ಹತೆ ಗಳಿಸಿದ್ದು. ಈ ಸಾಧನೆ ಮಾಡಿದ ಭಾರತದ ಅತ್ಯಂತ ಕಿರಿಯ ವಯಸ್ಸಿನ ಈಜುಪಟುವೆಂಬ ಹೆಗ್ಗಳಿಕೆಗೂ ಪಾತ್ರರಾದರು. ಕೋವಿಡ್ ಕಾಲಘಟ್ಟದಲ್ಲಿ ಬಹಳಷ್ಟು ಅವಧಿಯವರೆಗೆ ಈಜುಕೊಳಗಳು ಬಾಗಿಲು ಮುಚ್ಚಿದ್ದರೂ ತಮ್ಮ ಮನೋದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಂಡು ಅವರು ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದು ಅಮೋಘ ಸಾಧನೆಯೇ ಸರಿ.

ಶ್ರೀಹರಿ ಈಜು ಕಲಿಯಲು ಆರಂಭಿಸಿದ ಕತೆ ಆಸಕ್ತಿಕರ. ಬಾಲ್ಯದಲ್ಲಿ ಬಹಳ ತುಂಟನಾಗಿದ್ದ ಶ್ರೀಹರಿಯ ಮೂಗಿನ ಮೇಲೆ ಕೋಪ ಇರುತ್ತಿತ್ತು. ಅವರ ಕೋಪ ಮತ್ತು ತುಂಟಾಟದ ಸ್ವಭಾವ ನಿಯಂತ್ರಿಸಲು ತಂದೆ ನಟರಾಜನ್ ಎರಡು ವರ್ಷದ ಶ್ರೀಹರಿಯನ್ನು ಈಜುಕೊಳಕ್ಕೆ ಇಳಿಸಿದರು. ಬೇಬಿ ಪೂಲ್‌ನಲ್ಲಿ ಶುರುವಾದ ಈಜಿನ ಮೋಜು ಒಲಿಂಪಿಕ್‌ ಕೂಟದವರೆಗೂ ಶ್ರೀಹರಿಯನ್ನು ಬೆಳೆಸಿತು. ಕೋಚ್ ಬಿನೇಶ್ ಅವರ ಮಾರ್ಗದರ್ಶನದಲ್ಲಿ ಈಜು ಕಲಿತರು.

10ನೇ ವಯಸ್ಸಿನಿಂದಲೇ ಅವರು ರಾಷ್ಟ್ರಮಟ್ಟದಲ್ಲಿ ಮಿಂಚಿದರು. ಹಣಕಾಸು ಮತ್ತು ಸೌಲಭ್ಯಗಳ ಇತಿಮಿತಿಯ ನಡುವೆಯೂ ಸತತ ಪರಿಶ್ರಮ ಮತ್ತು ಅಗಾಧ ಆಸಕ್ತಿಯಿಂದ ಗುರಿಯತ್ತ ಈಜಿದರು. 2018ರಲ್ಲಿ ಕಾಮನ್‌ವೆಲ್ತ್ ಕೂಟ, ಏಷ್ಯನ್ ಗೇಮ್ಸ್‌ ಮತ್ತು ಯೂತ್ ಒಲಿಂಪಿಕ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ನಂತರ ಅವರ ಆತ್ಮವಿಶ್ವಾಸ ಇಮ್ಮಡಿಸಿದೆ. ಮುಂಬರುವ ಮಹತ್ವದ ಈಜುಕೂಟಗಳತ್ತ ಚಿತ್ತ ನೆಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT