ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್ಟಕಲ್ಲಪ್ಪನವರ ಪ್ರೋತ್ಸಾಹ ಸ್ಮರಿಸಿದ ಪ್ರಕಾಶ್ ಪಡುಕೋಣೆ

ಬ್ಯಾಡ್ಮಿಂಟನ್‌ ದಿಗ್ಗಜನಿಗೆ ಎಸ್‌ಜೆಎಫ್‌ಐ ಗೌರವ
Last Updated 14 ಅಕ್ಟೋಬರ್ 2022, 17:30 IST
ಅಕ್ಷರ ಗಾತ್ರ

ಬೆಂಗಳೂರು: ಶುಕ್ರವಾರ ಸಂಜೆಯು ಕ್ರೀಡಾ ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾಯಿತು. ಈ ಹೊತ್ತಿನಲ್ಲಿ ಕೆಎಸ್‌ಸಿಎ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆಯವರಿಗೆ ಭಾರತ ಕ್ರೀಡಾ ಪತ್ರಕರ್ತರ ಫೆಡರೇಷನ್ (ಎಸ್‌ಜೆಎಫ್‌ಐ) ಗೌರವ ಆಜೀವ ಸದಸ್ಯತ್ವವನ್ನು ಅವರಿಗೆ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಕ್ರಿಕೆಟ್‌ ದಿಗ್ಗಜ ಜಿ.ಆರ್. ವಿಶ್ವನಾಥ್ ಅವರು ಪಡುಕೋಣೆಯವರಿಗೆ ಎಸ್‌ಜೆಎಫ್‌ಐ ಪದಕ ಪ್ರದಾನ ಮಾಡಿ ಗೌರವಿಸಿದರು. ವಿವಿಎಸ್ ಲಕ್ಷ್ಮಣ್ ಆಜೀವ ಸದಸ್ಯತ್ವ ಪ್ರಮಾಣಪತ್ರ ನೀಡಿದರು. ಭಾರತ ಹಾಕಿ ತಂಡದ ಮಾಜಿ ಆಟಗಾರರಾದ ಧನರಾಜ್ ಪಿಳ್ಳೆ, ಅರ್ಜುನ್ ಹಾಲಪ್ಪ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ತೃಪ್ತಿ ಮುರ್ಗುಂಡೆ ಅವರು ಪ್ರಕಾಶ್ ಅವರನ್ನು ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್, ‘ಈ ಗೌರವ ನೀಡಿದ್ದಕ್ಕಾಗಿ ಆಭಾರಿಯಾಗಿರುವೆ. ಬೇರೆ ಬೇರೆ ಕ್ರೀಡೆಗಳಲ್ಲಿ ಶ್ರೇಷ್ಠ ಸಾಧನೆಗಳನ್ನು ಮಾಡಿರುವವರು ಇಲ್ಲಿರುವಾಗ, ಈ ಪ್ರಶಸ್ತಿಗೆ ನಾನೆಷ್ಟು ಅರ್ಹನಾಗಿದ್ದೇನೆ ಎಂಬುದು ಗೊತ್ತಿಲ್ಲ’ ಎಂದರು.

ರಾಜ್ಯದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯ ಕುರಿತು ಮಾತನಾಡಿದ ಅವರು, ಕ್ರೀಡಾ ಪ್ರೋತ್ಸಾಹಕರು, ಆಡಳಿತಗಾರರು ಹಾಗೂ ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಪತ್ರಿಕಾ ಬಳಗದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆ.ಎ. ನೆಟ್ಟಕಲ್ಲಪ್ಪ ಅವರ ನೆರವನ್ನೂ ಸ್ಮರಿಸಿದರು.

‘ಇವತ್ತು ಭಾರತದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯು ಬೆಳೆಯುತ್ತಿರುವುದನ್ನು ನೋಡಲು ಅಪಾರ ಹೆಮ್ಮೆಯಾಗುತ್ತದೆ. 1962ರಲ್ಲಿ ನಾನು ಬ್ಯಾಡ್ಮಿಂಟನ್ ಆಡಲು ಆರಂಭಿಸಿದೆ. ಆಗ ದಕ್ಷಿಣ ಭಾರತದಲ್ಲಿ ಬಾಲ್‌ ಬ್ಯಾಡ್ಮಿಂಟನ್ ತುಂಬಾ ಜನಪ್ರಿಯವಾಗಿತ್ತು. ಶಟಲ್‌ ಬ್ಯಾಡ್ಮಿಂಟನ್ ಹೆಚ್ಚು ಜನರಿಗೆ ತಿಳಿದಿರಲಿಲ್ಲ. ಬೆಂಗಳೂರು ನಗರದಲ್ಲಿ ಬೌರಿಂಗ್ ಇನ್‌ಸ್ಟಿಟ್ಯೂಟ್, ಬೆಂಗಳೂರು ಕ್ಲಬ್, ಕೆನರಾ ಯೂನಿಯನ್ ಮತ್ತು ಐಟಿಐನಲ್ಲಿ ಬ್ಯಾಡ್ಮಿಂಟನ್ ಅಂಗಣಗಳಿದ್ದವು. ಮದುವೆ ಸಭಾಂಗಣವೊಂದರಲ್ಲಿ ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತಿದ್ದೆ. ಆಗ ಮೈಸೂರು ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಗೆ ನೆಟ್ಟಕಲ್ಪಪ್ಪನವರು ಅಧ್ಯಕ್ಷರು ಹಾಗೂ ನನ್ನ ತಂದೆ ರಮೇಶ್ ಕಾರ್ಯದರ್ಶಿಯಾಗಿದ್ದರು. ಇವರಿಬ್ಬರೇ ರಾಜ್ಯದಲ್ಲಿ ಬ್ಯಾಡ್ಮಿಂಟನ್ ಸಂಸ್ಥೆ ಆರಂಭಿಸಿದವರು.

‘ನನಗೆ ಈಗಲೂ ನೆನಪಿದೆ. 19 ವರ್ಷದೊಳಗಿನವರ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಡಲು ಮೊದಲ ಬಾರಿ ಆಯ್ಕೆಯಾಗಿದ್ದೆ. ಆಗ ನನಗೆ 12 ವರ್ಷ. ಚೆನ್ನೈನಲ್ಲಿ ನಡೆದ ಆ ಟೂರ್ನಿಗೆ ಸ್ವಂತ ಖರ್ಚಿನಲ್ಲಿ ಹೋಗಬೇಕಿತ್ತು. ಅಷ್ಟೊಂದು ವೆಚ್ಚ ಭರಿಸುವ ಶಕ್ತಿ ತಮಗಿಲ್ಲ ಎಂದುತಂದೆ ಹೇಳಿದ್ದರು. ಆಗ ನೆಟ್ಟಕಲ್ಲಪ್ಪನವರು ‘ನೀನು ಆಡಲು ಹೋಗುತ್ತಿದ್ದಿ’ ಎಂದು ಹೇಳಿ ಪ್ರಾಯೋಜಕತ್ವ ನೀಡಿದರು. ನನಗೆ ನೆನಪಿರುವಂತೆ ₹ 150 ಅಥವಾ ₹200 ಕೊಟ್ಟರು. ಅದರಲ್ಲಿ ನನ್ನ ಹಾಗೂ ಸಹೋದರನ ಎಲ್ಲ ವೆಚ್ಚಗಳನ್ನು ಭರಿಸಲು ಸಾಧ್ಯವಾಗಿತ್ತು’ ಎಂದು ಸ್ಮರಿಸಿದರು.

ಬೆಂಗಳೂರು ಕ್ರೀಡಾ ಬರಹಗಾರರ ಸಂಸ್ಥೆ (ಸ್ವಾಬ್) ಅಧ್ಯಕ್ಷೆ ಮನುಜಾ ವೀರಪ್ಪ ಕಾರ್ಯಕ್ರಮ ನಿರ್ವಹಿಸಿದರು. ಎಸ್‌ಜೆಎಫ್‌ಐ ಅಧ್ಯಕ್ಷ ಎ. ವಿನೋದ್, ಕಾರ್ಯದರ್ಶಿ ಪ್ರಶಾಂತ್ ಖೇಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT