ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ನೀರಿನ ಬರ ಎದುರಿಸಲು ಅನುದಾನ ಕೊರತೆ

₹1.48 ಕೋಟಿ ಬಾಕಿ, ಕೊಳವೆಬಾವಿ ಕೊರೆಯಲು ಬಾರದ ಗುತ್ತಿಗೆದಾರ
Last Updated 23 ಮಾರ್ಚ್ 2018, 10:00 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಬಿರು ಬೇಸಿಗೆ ತಾಲ್ಲೂಕಿನಲ್ಲಿ ದಿನೇ, ದಿನೇ ಹೆಚ್ಚುತ್ತಿದ್ದು, ಕುಡಿಯುವ ನೀರಿನ ಸಮಸ್ಯೆಯೂ ಉಂಟಾಗಿದೆ.

ಕಳೆದ ವರ್ಷ ತಾಲ್ಲೂಕಿನ ದೇವಸಮುದ್ರ ಹೋಬಳಿಯಲ್ಲಿ ಮಾತ್ರ ಉತ್ತಮ ಮಳೆಯಾಯಿತು. ಕಸಬಾ ಹೋಬಳಿಯಲ್ಲಿ ಅಷ್ಟಾಗಿ ಮಳೆಯಾಗದೇ ಕೊಳವೆಬಾವಿಗಳು ಬತ್ತಿವೆ. ಕೊಳವೆಬಾವಿಗಳ ಮೂಲಕವೇ ಪ್ರಮುಖವಾಗಿ ನೀರು ಪೂರೈಕೆಯಾಗಿದ್ದು, ನೀರಿಗೆ ತತ್ವಾರ ಉಂಟಾಗುವ ಸಾಧ್ಯತೆ ಇದೆ.

ಹಾನಗಲ್‌ ಜಿಲ್ಲಾಪಂಚಾಯ್ತಿ ವ್ಯಾಪ್ತಿ ಹಿರೇಕೆರೆಹಳ್ಳಿ, ರಾಯಾಪುರ, ಹಾನಗಲ್‌, ತುಮಕೂರ್ಲಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಮಸ್ಯೆ ಉಲ್ಬಣಿಸುತ್ತಿದೆ. ರಾಯಾಪುರ ಪಂಚಾಯ್ತಿಯಲ್ಲಿ ಸಮಸ್ಯೆ ತೀವ್ರವಾಗಿದ್ದು, ಹಲವು ಪ್ರತಿಭಟನೆಗಳು ನಡೆದಿವೆ. ಆದರೆ ನಿಭಾಯಿಸಲು ಅನುದಾನವಿಲ್ಲದ ಕಾರಣ ಹೊಸ ಕೊಳವೆಬಾವಿ ಕೊರೆಸಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಮುಂಡ್ರಗಿ ನಾಗರಾಜ್‌ ಹೇಳಿದರು.

ಕಳೆದ ವರ್ಷ ಕೊರೆಸಿರುವ ಕೊಳವೆಬಾವಿಗಳ ಹಣ ಪಾವತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ಕೊಳವೆಬಾವಿ ಕೊರೆಯಲು ಮುಂದಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು, ಅವರು ನಿಮ್ಮ ತಾಲ್ಲೂಕಿಗೆ ನೀಡಲು ಯಾವುದೇ ಅನುದಾನ ಲಭ್ಯವಿಲ್ಲ ಎಂದು ಉತ್ತರ ನೀಡಿದ್ದಾರೆ.

ಜಿಲ್ಲಾ ಪಂಚಾಯ್ತಿ ಸಿಇಒ ಯಾವುದಾದರೂ ಅನುದಾನದಲ್ಲಿ ಅನುಕೂಲ ಕಲ್ಪಿಸುವ ಭರವಸೆ ನೀಡಿದ್ದಾರೆ. ಕೊಳವೆಬಾವಿ ಗುತ್ತಿಗೆದಾರರಿಗೆ ಮನವೊಲಿಸಲಾಗುತ್ತಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಎನ್‌. ಚಂದ್ರಶೇಖರಯ್ಯ ಮಾಹಿತಿ ನೀಡಿ, ಕಳೆದ ವರ್ಷ ತುರ್ತು ಸಮಯದಲ್ಲಿ ಒಟ್ಟು 134 ಕೊಳವೆಬಾವಿ ಕೊರೆಸಲಾಗಿದೆ. ಇದರ ₹ 1.48 ಕೋಟಿ ಬಾಕಿ ಪಾವತಿಸಬೇಕಿದೆ. ಈ ವರ್ಷ ಹೊಸದಾಗಿ 16 ಗ್ರಾಮಗಳಲ್ಲಿ ಸಮಸ್ಯೆ ಗುರುತಿಸಲಾಗಿದೆ. ಇಲ್ಲಿ ಕೊಳವೆಬಾವಿ ಕೊರೆಯಬೇಕಿದೆ. ಆದರೆ ಬಾಕಿ ನೀಡದ ಕಾರಣ ಗುತ್ತಿಗೆದಾರ ಕೊರೆಯಲು ಬರುತ್ತಿಲ್ಲ ಎಂದು ಹೇಳಿದರು.

ಕಳೆದ ವರ್ಷ ಟ್ಯಾಂಕರ್ ನೀರು ಪೂರೈಕೆ ಮಾಡಿದ್ದ ಬಾಕಿ ₹ 44 ಲಕ್ಷ ಇದೆ. ಇದನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಲು ಮುಂದಾಗಿದ್ದು ಶೀಘ್ರ ಪಾವತಿಯಾಗಲಿದೆ ಎಂದು ಹೇಳಿದರು.

ಚುನಾವಣೆ ವರ್ಷವಾಗಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಸಮಸ್ಯೆಗೆ ಕ್ರಮ ಕೈಗೊಳ್ಳಲು ನೀತಿಸಂಹಿತೆ ಅಡ್ಡಿಯಾಗುತ್ತದೆ. ಆದ್ದರಿಂದ ಜಿಲ್ಲಾಧಿಕಾರಿ ಒಮ್ಮೆ ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿತು ಸರ್ಕಾರಕ್ಕೆ ವರದಿ ಮಾಡಿ ಅನುದಾನ ಮಂಜೂರು ಮಾಡಿಸಬೇಕು ಎಂದು ಮುಂಡ್ರಗಿ ನಾಗರಾಜ್‌ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT