ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್‌: ಭಾರತಕ್ಕೆ ಮತ್ತೆ 2 ಪದಕ; ಪ್ರಿಯಾಂಕಾ, ಅವಿನಾಶ್‌ಗೆ ಬೆಳ್ಳಿ

Last Updated 6 ಆಗಸ್ಟ್ 2022, 13:06 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ಪ್ರಿಯಾಂಕಾ ಗೋಸ್ವಾಮಿ ಮತ್ತು ಅವಿನಾಶ್‌ ಸಬ್ಳೆ ಅವರು ಅಥ್ಲೆಟಿಕ್ಸ್‌ನಲ್ಲಿ ಕ್ರಮವಾಗಿ ಮಹಿಳೆಯರ 20 ಕಿ.ಮೀ. ನಡಿಗೆ ಹಾಗೂ ಪುರುಷರ 3,000 ಮೀ. ಸ್ಟೀಪಲ್‌ ಚೇಸ್‌ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರು.

ಶನಿವಾರ ನಡೆದ ನಡಿಗೆ ಸ್ಪರ್ಧೆಯಲ್ಲಿ ಪ್ರಿಯಾಂಕಾ 43 ನಿ. 38.83 ಸೆ.ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದುಕೊಂಡರು. ಈ ಹಾದಿಯಲ್ಲಿ ಅವರು ತಮ್ಮ ವೈಯಕ್ತಿಕ ಶ್ರೇಷ್ಠ ಸಮಯವನ್ನೂ ದಾಖಲಿಸಿದರು.

ಆಸ್ಟ್ರೇಲಿಯಾದ ಜೆಮಿಮಾ ಮಾಂಟಗ್‌ (42 ನಿ. 34.30 ಸೆ.) ಚಿನ್ನ ಗೆದ್ದರೆ, ಕೆನ್ಯಾದ ಎಮಿಲಿ ವಾಮುಸಿ (43 ನಿ. 50.86 ಸೆ.) ಕಂಚು ಪಡೆದರು. ಕಣದಲ್ಲಿದ್ದ ಭಾರತದ ಇನ್ನೊಬ್ಬರು ಸ್ಪರ್ಧಿ ಭಾವನಾ ಎಂಟನೇ ಸ್ಥಾನ ಪಡೆದರು.

ಕಾಮನ್‌ವೆಲ್ತ್‌ ಕೂಟದ ನಡಿಗೆ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್‌ ಎಂಬ ಗೌರವ ಪ್ರಿಯಾಂಕಾ ಅವರಿಗೆ ಒಲಿಯಿತು. ಹರ್ಮಿಂದರ್‌ ಸಿಂಗ್‌ ಅವರು 2010ರ ನವದೆಹಲಿ ಕಾಮನ್‌ವೆಲ್ತ್‌ ಕೂಟದ ಪುರುಷರ ನಡಿಗೆ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದರು. ಆದರೆ ಮಹಿಳೆಯರ ವಿಭಾಗದಲ್ಲಿ ಯಾರೂ ಇದುವರೆಗೆ ಪದಕ ಗೆದ್ದಿರಲಿಲ್ಲ.

ಸಬ್ಳೆ ರಾಷ್ಟ್ರೀಯ ದಾಖಲೆ: ಅವಿನಾಶ್‌ ಸಬ್ಳೆ ಅವರು ಸ್ಟೀಪಲ್‌ ಚೇಸ್‌ನಲ್ಲಿ 8 ನಿ. 11.20 ಸೆ.ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು (8 ನಿ. 12.48ಸೆ.) ಉತ್ತಮಪಡಿಸಿಕೊಂಡರು.

ಕೆನ್ಯಾದ ಅಬ್ರಹಾಂ ಕಿಬಿವೊಟ್ (8 ನಿ. 11.15 ಸೆ.) ಚಿನ್ನ ಗೆದ್ದರೆ, ಅದೇ ದೇಶದ ಅಮೊಸ್ ಸೆರೆಮ್ (8 ನಿ. 16.83 ಸೆ.) ಕಂಚು ಪಡೆದುಕೊಂಡರು.

ಕಳೆದ ತಿಂಗಳು ಯೂಜಿನ್‌ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಕಿಬಿವೊಟ್‌ ಐದನೇ ಸ್ಥಾನ ಪಡೆದುಕೊಂಡಿದ್ದರೆ, ಸಬ್ಳೆ 11ನೇ ಸ್ಥಾನ ಗಳಿಸಿದ್ದರು. ಅಲ್ಲಿ ಉಂಟಾಗಿದ್ದ ನಿರಾಸೆಯನ್ನು ಮರೆಸುವಲ್ಲಿ ಸಬ್ಳೆ ಯಶಸ್ವಿಯಾದರು.

ಅಥ್ಲೆಟಿಕ್ಸ್‌ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ನಾಲ್ಕಕ್ಕೇರಿದೆ. 2018ರ ಗೋಲ್ಡ್‌ಕೋಸ್ಟ್‌ ಕೂಟದ ಅಥ್ಲೆಟಿಕ್ಸ್‌ನಲ್ಲಿ ಭಾರತ ಮೂರು ಪದಕ (ತಲಾ ಒಂದು ಚಿನ್ನ, ಬೆಳ್ಳಿ, ಕಂಚು) ಜಯಿಸಿತ್ತು.

ಹಿಮಾಗೆ ನಿರಾಸೆ: ಹಿಮಾ ದಾಸ್‌ ಅವರು ಮಹಿಳೆಯರ 200 ಮೀ. ಓಟದಲ್ಲಿ ಫೈನಲ್‌ ಪ್ರವೇಶಿಸಲು ವಿಫಲರಾದರು.

ಶುಕ್ರವಾರ ನಡೆದ ಎರಡನೇ ಸೆಮಿಫೈನಲ್‌ ಹೀಟ್‌ನಲ್ಲಿ ಸ್ಪರ್ಧಿಸಿದ ಅವರು 23.42 ಸೆ.ಗಳಲ್ಲಿ ಗುರಿ ತಲುಪಿದರು. ಮೊದಲ ಎರಡು ಸ್ಥಾನಗಳನ್ನು ಪಡೆದ ನಮೀಬಿಯದ ಕ್ರಿಸ್ಟಿನಾ ಎಂಬೊಮ (22.93 ಸೆ.) ಹಾಗೂ ಆಸ್ಟ್ರೇಲಿಯಾದ ಎಲಾ ಕಾನೊಲಿ (23.41 ಸೆ.) ಫೈನಲ್‌ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT