ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಡೆಟ್ ವಿಶ್ವಕಪ್ ಕುಸ್ತಿ: ಪ್ರಿಯಾ ಚಿನ್ನಕ್ಕೆ ಪ್ರಚಾರದ ಮೆರಗು!

ಅಕ್ಷರ ಗಾತ್ರ

ಹಂಗೇರಿ: ಹಂಗೇರಿಯಲ್ಲಿ ನಡೆದ ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕುಸ್ತಿಪಟು ಪ್ರಿಯಾ ಮಲಿಕ್ ಚಿನ್ನದ ಪದಕ ಗೆದ್ದಿದ್ದಾರೆ.

ಮಹಿಳೆಯರ 73 ಕೆ.ಜಿ. ವಿಭಾಗದಲ್ಲಿ ಪ್ರಿಯಾ ಮಲಿಕ್ ಸ್ಮರಣೀಯ ಸಾಧನೆ ಮಾಡಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದರು. ಈಗ ಮತ್ತೊಬ್ಬ ಮಹಿಳೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಹಂಗರಿಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತದ ಪ್ರಿಯಾ ಮಲಿಕ್ ಅವರ ಸುದ್ದಿಯು ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತು.

ಪ್ರಿಯಾ ಮಲಿಕ್ ಅವರ ಸಾಧನೆಯು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೂಡಿಬಂದಿದ್ದು ಎಂಬ ತಪ್ಪುಗ್ರಹಿಕೆಯಿಂದ ಬಾಲಿವುಡ್ ನಟರೂ ಸೇರಿದಂತೆ ಹಲವರು ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಕೆಲವರಂತೂ ಶನಿವಾರ ಟೋಕಿಯೊ ಒಲಿಂಪಿಕ್ಸ್‌ನ ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಜಯಿಸಿದ್ದ ಮೀರಾಬಾಯಿ ಅವರ ಚಿತ್ರದೊಂದಿಗೆ ಪ್ರಿಯಾ ಮಲಿಕ್ ಅವರ ಚಿತ್ರ ಜೋಡಿಸಿ ಪೋಸ್ಟ್ ಮಾಡಿದರು. ಭಾರತದ ನಾರಿಶಕ್ತಿಗೆ ಜಯವಾಗಲಿ ಎಂಬ ಸಂದೇಶಗಳೂ ಹರಿದಾಡಿದವು.

ಭಾನುವಾರ ಬೆಳಿಗ್ಗೆ ಭಾರತ ಸರ್ಕಾರವು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ, ‘ಹಂಗೆರಿಯಲ್ಲಿ ನಡೆದ ವಿಶ್ವ ಕೆಡೆಟ್ ಕುಸ್ತಿಯಲ್ಲಿ ಚಿನ್ನ ಗೆದ್ದಿರುವ ಪ್ರಿಯಾ ಮಲಿಕ್ ಅವರು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಅಭಿನಂದನೆಗಳು‘ ಎಂದು ಪೋಸ್ಟ್ ಮಾಡಿತ್ತು. ಅದೇ ಚಿತ್ರವನ್ನು ಬಳಸಿಕೊಂಡು ಟ್ವಿಟರಿಗರು ಶುಭಾಶಯ ಕೋರುವಾಗ, ಒಲಿಂಪಿಕ್ಸ್‌ ಸಾಧನೆಯೆಂದು ಬಿಂಬಿಸಿದ್ದರು.

‘ಈ ಮಟ್ಟದ ಪ್ರಚಾರ ಸಿಕ್ಕಿರುವುದು ನನಗೇ ಅಚ್ಚರಿ ಮೂಡಿಸಿದೆ. ನಾನು ಈ ಸಲ ಒಲಿಂಪಿಕ್ಸ್‌ನಲ್ಲಿ ಆಡಿಲ್ಲ. ಜನರ ಶುಭಹಾರೈಕೆಯಿಂದ 2024ರ ಒಲಿಂಪಿಕ್ಸ್‌ನಲ್ಲಿ ನಾನು ಪದಕ ಗೆಲ್ಲುವಂತಾಗಲಿ‘ ಎಂದು ಪ್ರಿಯಾ ಮಲಿಕ್ ಅವರು ಇಂಗ್ಲಿಷ್‌ ವೆಬ್‌ಸೈಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT