ತೆಗ್ಗಿಯ ವಿಠ್ಠಲ ಪ್ರೊ ಕಬಡ್ಡಿ ಆಟಗಾರ!

7
ಕೋಲ್ಕತ್ತಾದ ಬೆಂಗಾಲ್‌ ವಾರಿಯರ್ಸ್ ತಂಡದಲ್ಲಿ ನಮ್ಮೂರ ಪ್ರತಿಭೆ

ತೆಗ್ಗಿಯ ವಿಠ್ಠಲ ಪ್ರೊ ಕಬಡ್ಡಿ ಆಟಗಾರ!

Published:
Updated:
Deccan Herald

ಬಾಗಲಕೋಟೆ: ಅದು 2003ನೇ ವರ್ಷ. ತೆಗ್ಗಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಅಲ್ಲಿನ ಸಿದ್ದಾಪುರದಲ್ಲಿ ನಡೆದಿತ್ತು. ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದು ಮನೆಗೆ ಬಂದು ಹಾಸಿಗೆ ಹಿಡಿದವನೇ 15 ದಿನ ಮೇಲಕ್ಕೆದ್ದಿರಲಿಲ್ಲ. ಮೈ ಮೇಲಿನ ಗಾಯಗಳ ಕಂಡು ಹೌಹಾರಿದ್ದ ಅವ್ವ, ಕಬಡ್ಡಿ ಹೆಸರೆತ್ತಿದರೆ ಉರಿದು ಬೀಳುತ್ತಿದ್ದಳು. ಆಟವಾಡುವುದು ಬಿಟ್ಟು ತೋಟಕ್ಕೆ ಹೋಗು. ಅದಾದರೂ ಮುಂದೆ ಬದುಕು ಕೊಟ್ಟೀತು ಅನ್ನುತ್ತಿದ್ದಳು. ಈಗ ಕಬಡ್ಡಿಯೇ ನನಗೆ ಬದುಕು ಕೊಟ್ಟಿದೆ...

ಹೀಗೆಂದು ಬೀಳಗಿ ತಾಲ್ಲೂಕು ತೆಗ್ಗಿಯ ವಿಠ್ಠಲ ಮೇಟಿ ‘ಪ್ರಜಾವಾಣಿ’ ಎದುರು ಬಾಲ್ಯದ ಪ್ರಸಂಗ ಬಿಚ್ಚಿಟ್ಟರು. ಅವರೀಗ ‍ಪ್ರೊ ಕಬಡ್ಡಿಯಲ್ಲಿ ಕೋಲ್ಕತ್ತಾದ ಬೆಂಗಾಲ್‌ ವಾರಿಯರ್ಸ್ ತಂಡದ ಆಟಗಾರ. ಹೈದರಾಬಾದ್‌ನಲ್ಲಿ ನಡೆದ ಫೆಡರೇಶನ್ ಕಪ್ ಕಬಡ್ಡಿ ಪಂದ್ಯಾವಳಿಯಲ್ಲಿ ವಿಠ್ಠಲ ತೋರಿದ ಪ್ರದರ್ಶನ ಕಂಡ ಬೆಂಗಾಲ್‌ ಫ್ರಾಂಚೈಸಿಯವರು ₹8 ಲಕ್ಷ ಕೊಟ್ಟು ಖರೀದಿಸಿದ್ದಾರೆ. ಪ್ರೊ ಕಬಡ್ಡಿಗೆ ಆಯ್ಕೆಯಾದ ಜಿಲ್ಲೆಯ ಮೊದಲ ಆಟಗಾರ ಎಂಬ ಶ್ರೇಯ ವಿಠ್ಠಲ ಅವರದ್ದು.

ತೆಗ್ಗಿಯ ಕೃಷಿಕ ಕುಟುಂಬದ ಸೋಮಪ್ಪ–ಭಾಗೀರಥಿ ಬಾಯಿ ದಂಪತಿ ಪುತ್ರ ವಿಠ್ಠಲಗೆ ಬಾಲ್ಯದಿಂದಲೂ ಕಬಡ್ಡಿಯ ನಂಟು. ’ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಶಿಕ್ಷಕ ಎಸ್.ವೈ.ಕಿರಸೂರ ನನ್ನನ್ನು ಕಬಡ್ಡಿ ಆಟಗಾರನಾಗಿ ರೂಪಿಸಿದರು. ಅದಕ್ಕೆ ಅಪ್ಪ ನೀರೆರೆದರು ಎಂದು ಸ್ಮರಿಸಿಕೊಳ್ಳುತ್ತಾರೆ.

‘ಆಗ ತೆಗ್ಗಿಯ ಫ್ರೆಂಡ್ಸ್‌ ಸ್ಫೋರ್ಟ್ಸ್ ಕ್ಲಬ್ ನನಗೆ ವೇದಿಕೆ ಒದಗಿಸಿತು. ಊರೂರು ಸುತ್ತಿ ಹಬ್ಬ–ಹರಿದಿನ, ಜಾತ್ರೆ, ಸಂಭ್ರಮಗಳ ವೇಳೆಯ ಕಬಡ್ಡಿ ಟೂರ್ನಿಗಳಲ್ಲಿ ಪಾಲ್ಗೊಂಡು ನಗದು ಬಹುಮಾನ ಗೆದ್ದು ತರುತ್ತಿದ್ದೆವು. ಬೆಸ್ಟ್ ರೈಡರ್ ಹಾಗೂ ಕ್ಯಾಚರ್ ಎಂಬ ಶ್ರೇಯ ಆಗಾಗ ಒಲಿಯುತ್ತಿತ್ತು. ಮುಧೋಳ ತಾಲ್ಲೂಕು ರಂಜಣಗಿಯಲ್ಲಿ ಒಮ್ಮೆ ₹5 ಸಾವಿರ ಗೆದ್ದು ತಂದಿದ್ದೆವು’  ಎನ್ನುತ್ತಾರೆ.

ಮುಂದೆ ಪಿಯುಸಿ ಓದುವಾಗ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಠ್ಠಲ ಪಾಲ್ಗೊಳ್ಳುತ್ತಿದ್ದರು. ಇದು, ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್ (ಸಾಯಿ) ಪ್ರವೇಶಿಸಲು ರಹದಾರಿಯಾಯಿತು. ಅಲ್ಲಿ ಎರಡೂವರೆ ವರ್ಷದ ಕಲಿಕೆ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಅಲ್ಲಿಗೆ ಆಯ್ಕೆಯಾಗಲು ರೆಫ್ರಿ ಆಗಿದ್ದ ಸಿದ್ದಣ್ಣವರ ಕಾರಣರಾದರೆ, ಕಬಡ್ಡಿಯ ಪಟ್ಟುಗಳನ್ನು ಶಾಸ್ತ್ರೀಯವಾಗಿ ಕಲಿಯಲು ಅರ್ಜುನ ಪ್ರಶಸ್ತಿ ವಿಜೇತ ಕೋಚ್ ಪ್ರಕಾಶ್ ನೆರವಾದರು ಎನ್ನುತ್ತಾರೆ.

ಮುಂದೆ ಗದಗ ಜಿಲ್ಲೆ ಹೊಳೆ ಆಲೂರಿನಲ್ಲಿ ಪದವಿ ಶಿಕ್ಷಣ ಮುಗಿಸಿದ ವಿಠ್ಠಲ ಆಗಲೂ ಕರ್ನಾಟಕ ವಿಶ್ವವಿದ್ಯಾಲಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದರು. ಮುಂದೆ ಕ್ರೀಡಾಕೋಟಾದಲ್ಲಿ ಬೆಂಗಳೂರಿನ ಯಲಹಂಕದ ರೇಲ್ ಮತ್ತು ಗಾಲಿ ಫ್ಯಾಕ್ಟರಿಯಲ್ಲಿ ಕೆಲಸ ಸಿಕ್ಕು ರೈಲ್ವೆ ತಂಡ ಪ್ರತಿನಿಧಿಸತೊಡಗಿದರು. ರೈಲ್ವೆ ತಂಡದ ತರಬೇತಿ ಶಿಬಿರದಲ್ಲೂ ಉತ್ತಮ ತಾಲೀಮು ನಡೆಸಲು ಸಾಧ್ಯವಾಯಿತು. ಇದರಿಂದ ರಾಜ್ಯ ತಂಡದಲ್ಲೂ ಅವಕಾಶ ಸಿಕ್ಕಿತು. ರೈಲ್ವೇಸ್ ಪರವಾಗಿ ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು.

ರಾಷ್ಟ್ರೀಯ ಮಟ್ಟದಲ್ಲಿ ಈಗ ’ಸಿ’ ದರ್ಜೆಯ ಆಟಗಾರನಾಗಿದ್ದೇನೆ. ಈಗ ಪ್ರೊ ಕಬಡ್ಡಿಯಲ್ಲಿ ಆಡುವ ಕನಸು–ನನಸಾಗಿದೆ. ಮುಂದೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಹಾಗೂ ‘ಎ’ ದರ್ಜೆಯ ಆಟಗಾರನಾಗಿ ಬಡ್ತಿ ಪಡೆಯುವ ಗುರಿ ಹೊಂದಿರುವುದಾಗಿ ಹೇಳುವ ವಿಠ್ಠಲ, ಕಳೆದ ವರ್ಷವಷ್ಟೇ ಪಕ್ಕದ ಬಳ್ಳೂರಿನ ಪೂಜಾ ಅವರ ಕೈ ಹಿಡಿದಿದ್ದಾರೆ. ವಿಠ್ಠಲ ಅವರ ಸಂಪರ್ಕ ಸಂಖ್ಯೆ: 8970042828.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !